ಮನೆಯಲ್ಲೇ ತಾಳಿ ಕಟ್ಟಿ ಸಹ ನಟಿ ಜೊತೆ ಮದುವೆ ನಾಟಕ, ಒಡವೆ ಎಗರಿಸಿ ಎಸ್ಕೇಪ್

– ಕುಣಿಗಲ್ ಗಿರಿಯ ಸಹೋದರನಿಂದ 180 ಗ್ರಾಂ. ಚಿನ್ನ ಕಳವು

ಬೆಂಗಳೂರು: ಮನೆಯಲ್ಲೇ ತಾಳಿ ಕಟ್ಟಿ ಮದುವೆ ಆದಂತೆ ನಟಿಸಿ ಹಣ, ಒಡವೆ ಎಗರಿಸಿ ಖತರ್ನಾಕ್ ಕಳ್ಳ ಎಸ್ಕೇಪ್ ಆಗಿದ್ದಾನೆ. ಕುಖ್ಯಾತ ರೌಡಿಶೀಟರ್ ಕಂ ರಾಬರ್ ಕುಣಿಗಲ್ ಗಿರಿ ಅಣ್ಣ ಹರೀಶ್ ನಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.

26 ವರ್ಷದ ಸ್ಯಾಂಡಲ್‍ವುಡ್ ಸಹ ಕಲಾವಿದೆಗೆ ವಂಚನೆ ಮಾಡಲಾಗಿದೆ. ರಾಜಗೋಪಾಲನಗರ ನಿವಾಸಿಯಾಗಿರುವ ಯುವತಿಗೆ ಪ್ರೀತಿ ಹೆಸರಲ್ಲಿ ಹರೀಶ್ ಹಿಂದೆ ಬಿದ್ದಿದ್ದ. ಬಳಿಕ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದ. ನಂತರ ಯುವತಿ ಬಳಿಯಿದ್ದ 180 ಗ್ರಾಂ. ಚಿನ್ನಾಭರಣ, 2.5 ಲಕ್ಷ ನಗದು ಹಣ ದೋಚಿ ಎಸ್ಕೇಪ್ ಆಗಿದ್ದ.

ಕೃತ್ಯದ ನಂತರ ಆರೋಪಿಯನ್ನು ಸಂಪರ್ಕಿಸಿದರೆ ಯುವತಿಗೆ ಅವಾಜ್ ಹಾಕಿದ್ದಾನಂತೆ. ನನ್ನ ತಮ್ಮ ಕುಣಿಗಲ್ ಗಿರಿ, ಕೊಟ್ಟಿರುವ ಕೇಸ್ ವಾಪಸ್ ತಗೋಂಡ್ರೆ ಸರಿ ಇಲ್ಲ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಒಡವೆ ಕೇಳಲು ಹರೀಶ್ ಮನೆ ಬಳಿ ಹೋದರೆ ಹರೀಶ್ ಪತ್ನಿ ಮತ್ತು ಅತ್ತೆ ಇಬ್ಬರೂ ಸೇರಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ನನ್ನ ಮೈದುನ ಕುಣಿಗಲ್ ಗಿರಿ ಗೊತ್ತಲ್ಲಾ ಎಂದು ಅವಾಜ್ ಬೇರೆ ಹಾಕಿದ್ದಾರೆ. ಬಳಿಕ ಜೈಲಿನಿಂದ ಕರೆಮಾಡಿ ದೂರು ವಾಪಸ್ ತೆಗೆದುಕೊಳ್ಳುವಂತೆ ಕುಣಿಗಲ್ ಗಿರಿ ಧಮ್ಕಿ ಕೂಡ ಹಾಕಿದ್ದಾನಂತೆ. ಮೋಸ ಹೋದ ಯುವತಿಯಿಂದ ಕುಣಿಗಲ್ ಗಿರಿ ಹಾಗೂ ಆತನ ಅಣ್ಣ ಹರೀಶ್ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಾಯವಾಗಿರುವ ನನಗೆ ನ್ಯಾಯ ಕೊಡಿಸಬೇಕು. ನನ್ನ ಒಡವೆ ವಾಪಸ್ ಕೊಡಿಸಿ ಎಂದು ಮಹಿಳೆ ಅಂಗಲಾಚುತ್ತಿದ್ದಾರೆ.

Source: publictv.in Source link