ಮೇಘಾಲಯ ಸಿಎಂ ಮನೆ ಬಳಿ ಪೆಟ್ರೋಲ್​ ಬಾಂಬ್​ ಎಸೆತ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಮೇಘಾಲಯ ಸಿಎಂ ಮನೆ ಬಳಿ ಪೆಟ್ರೋಲ್​ ಬಾಂಬ್​ ಎಸೆತ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

1. ನಿಗೂಢ ಸ್ಪೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರು

blank
ರಾತ್ರೋರಾತ್ರಿ ನಿಗೂಢ ಸ್ಪೋಟಕ್ಕೆ ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ. ವಿಜಯನಗರದ ಹಂಪಿನಗರ ನಿವಾಸದ ಮೊದಲನೇ ಮಹಡಿಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಮನೆಯಲ್ಲಿದ್ದ ವೃದ್ದ ದಂಪತಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಅರ್ಧ ಕಿಲೋ ಮೀಟರ್​ ದೂರದವರೆಗೂ ಸ್ಫೋಟದ ಶಬ್ದ ಕೇಳಿಸಿದ್ದು ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಸ್ಫೋಟ ಹೇಗೆ ಸಂಭವಿಸಿದೆ ಅಂತ ಮಾತ್ರ ಇದುವರೆಗೆ ಪತ್ತೆಯಾಗಿಲ್ಲ.

2. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಪಾರುಪತ್ಯ

blank

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಪರಿಣಾಮ 2 ದಶಕಗಳ ಬಳಿಕ ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನಿಗಳು ಪಾರುಪತ್ಯ ಸಾಧಿಸಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನಿಗಳ ತೆಕ್ಕೆಗೆ ಬೀಳುತ್ತಿದ್ದಂತೆ ಅಧ್ಯಕ್ಷ ಆಶ್ರಫ್​ ಗನಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ತೊರೆಯದಿದ್ರೆ ರಕ್ತಪಾತವಾಗುತ್ತಿತ್ತು. ಹೀಗಾಗಿ ನಾನು ಕಾಬೂಲ್​ ತೊರೆದೆ ಅಂತ ಫೆಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇನ್ನು ತಾಲಿಬಾನಿ ನಾಯಕ ಮುಲ್ಲಾ ಬರಾದರ್ ಗನಿ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದ್ದು ಅಧ್ಯಕ್ಷರ ಪ್ಯಾಲೇಸ್​​ನಲ್ಲಿ ಬೀಡುಬಿಟ್ಟಿದ್ದಾನೆ. ಈ ಮಧ್ಯೆ ಅಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದು ಬೆಳಿಗ್ಗೆ 10 ಗಂಟೆಗೆ ಸಭೆ ಕರೆದಿದೆ.

3. ‘ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕು ಹರಣ’
ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಗದ್ದುಗೆ ಹಿಡಿಯೋದು ಖಚಿತವಾಗ್ತಿದ್ದಂತೆ ಕೆಲವರು ಭಾರತಕ್ಕೆ ಬಂದಿದ್ದಾರೆ. ಹೀಗೆ ಕಾಬೂಲಿನಿಂದ ಭಾರತಕ್ಕೆ ಬಂದ ಓರ್ವ ಮಹಿಳೆ, ನಮ್ಮ ಸ್ನೇಹಿತರೆಲ್ಲರನ್ನು ತಾಲಿಬಾನಿಗಳು ಸಾಯಿಸಲಿದ್ದಾರೆ. ಅಲ್ಲಿನ ಮಹಿಳೆಯರು ತಮ್ಮ ಹಕ್ಕು-ಸ್ವಾತಂತ್ರ್ಯವನ್ನು ಕಳೆದುಕೊಳ್ಳಲಿದ್ದಾರೆ ಅಂತ ಭಾವುಕರಾಗಿದ್ದಾರೆ. ಇನ್ನು, ಕಾಬೂಲ್​​ನಲ್ಲಿ ಏರ್​ ಟ್ರಾಫಿಕ್ ಕಂಟ್ರೋಲ್​​ನ ಸಂಪರ್ಕ ಸಿಗದ ಕಾರಣ ಏರ್ ಇಂಡಿಯಾ ವಿಮಾನ ಕೆಲ ಕಾಲ ಪರದಾಡಿ ಬಳಿಕ 129 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಮರಳಿದೆ. ಜೊತೆಗೆ ತಾಲಿಬಾನ್​ ವಿರುದ್ಧ ನೋಬೆಲ್ ಪುರಸ್ಕೃತೆ ಮಲಾಲ ಯುಸೂಫ್​ ಜಾಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

4. ಮೇಘಾಲಯ ಸಿಎಂ ಮನೆ ಬಳಿ ಪೆಟ್ರೋಲ್​ ಬಾಂಬ್​ ಎಸೆತ
ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರ ಮನೆ ಬಳಿ ದುಷ್ಕರ್ಮಿಗಳು ಪೆಟ್ರೋಲ್​ ಬಾಂಬ್​ ಎಸೆದಿದ್ದಾರೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅಂತ ಹೇಳಲಾಗಿದೆ. ನಿಷೇಧಿತ ಹೈನ್ನೀವ್​ಟ್ರೆಪ್​ ನ್ಯಾಷನಲ್​ ಲಿಬರೇಷನ್​ ಕೌನ್ಸಿಲ್​ ಬಂಡುಕೋರ ಸಂಘಟನೆಯ ತಂಗ್​ಖಿವ್​ರನ್ನ ಹತ್ಯೆ ಮಾಡಿದ್ದರಿಂದ ಮೇಘಾಲಯದಲ್ಲಿ ಸಂಘರ್ಷ ಉಂಟಾಗಿದ್ದು ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಇನ್ನು ರಾಜ್ಯದ ಪರಿಸ್ಥಿತಿ ವಿಷಮಿಸಿದ್ದು, 4 ಜಿಲ್ಲೆಗಳಲ್ಲಿ 48 ಗಂಟೆಗಳ ಕಾಲ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

5. ಕೇರಳಕ್ಕಿಂದು ಕೇಂದ್ರ ಆರೋಗ್ಯ ಸಚಿವರ ಭೇಟಿ
ದಿನೆ ದಿನೇ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ 18 ಸಾವಿರಕ್ಕೂ ಹೆಚ್ಚಿನ ಪ್ರಕರಣ ಪತ್ತೆ ಆಗಿವೆ. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮತ್ತು ಆರೋಗ್ಯ ಸಚಿವರ ಜೊತೆ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ನಾಳೆ ಅಸ್ಸಾಂಗೆ ಮಾಂಡವೀಯ ಭೇಟಿ ನೀಡಲಿದ್ದಾರೆ.

6. ಗೋವಾದಲ್ಲಿ ಶೇ.90 ರಷ್ಟು ಲಸಿಕೆ ವಿತರಣೆ
ಗೋವಾ ಸರ್ಕಾರ ಶೇಕಡ 90ರಷ್ಟು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್​ ವಿತರಣೆ ಮಾಡಿರುವ ದೇಶದ ಮೊದಲ ರಾಜ್ಯ ಎಂದು ಸಿಎಂ ಪ್ರಮೋದ್​ ಸಾವಂತ್​ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ ವಿತರಣೆಯಲ್ಲಿ ದೇಶದ ಮೊದಲ ರಾಜ್ಯ ಗೋವಾ ಅನ್ನೋದು ಹೆಮ್ಮೆ ತರುವ ವಿಷಯ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೋವಾ ಸರ್ಕಾರ ಮುಂಚೂಣಿಯಲ್ಲಿದೆ. ಈ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಾಜ್ಯದಲ್ಲಿ ನೂರರಷ್ಟು ಲಸಿಕೆ ವಿತರಣೆ ಮಾಡಲಾಗುತ್ತದೆ ಅಂತ ಸಾವಂತ್​​​ ತಿಳಿಸಿದ್ದಾರೆ.

7. ಭೂಕಂಪನದ ತೀವ್ರತೆಗೆ 1,297 ಮಂದಿ ಬಲಿ
ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ. ಪರಿಣಾಮ ಈವರೆಗೆ ಮೃತಪಟ್ಟವರ ಸಂಖ್ಯೆ 1,297ಕ್ಕೆ ಏರಿಕೆಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಸದ್ಯಕ್ಕೆ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ. ಈ ಮಧ್ಯೆ ಹೈಟಿ ಪ್ರದೇಶದಲ್ಲಿ ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿ ಪ್ರಧಾನಿ ಹೆನ್ರಿ ಆದೇಶ ಹೊರಡಿಸಿದ್ದಾರೆ.

8. ಏಕಾಂಗಿಯಾಗಿ ಯುಎಇಗೆ ಹಾರಿದ ಶ್ರೇಯಸ್​ ಅಯ್ಯರ್
ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್ ಏಕಾಂಗಿಯಾಗಿ ಯುಎಇಗೆ ಹಾರಿದ್ದಾರೆ. ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಅಯ್ಯರ್​, ಐಪಿಎಲ್​ 2ನೇ ಹಂತದ ಪಂದ್ಯಗಳನ್ನಾಡಲು ತಂಡಕ್ಕೂ ಮೊದಲೇ ಏಕಾಂಗಿಯಾಗಿ ಅರಬ್ಬರ ನಾಡಿಗೆ ತೆರಳಿದ್ದಾರೆ. ಸುಮಾರು ಐದು ತಿಂಗಳ ಬಳಿಕ ಸಂಪೂರ್ಣ ಚೇತರಿಸಿಕೊಂಡಿರುವ ಅಯ್ಯರ್ ಮತ್ತೆ ಐಪಿಎಲ್​ನ 2ನೇ ಹಂತದ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೇಯಸ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು.

9. ಇಂಗ್ಲೆಂಡ್​ ಆಟಗಾರರಿಂದ ಬಾಲ್​ ಟ್ಯಾಂಪರಿಂಗ್​?

blank
ಭಾರತ – ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಬಾಲ್​ ಟ್ಯಾಂಪರಿಂಗ್​ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತದ ಬ್ಯಾಟಿಂಗ್​ ವೇಳೆ ಇಂಗ್ಲೆಂಡ್​ ಆಟಗಾರರಾದ ಮಾರ್ಕ್​ ವುಡ್​, ರೋರಿ ಬರ್ನ್ಸ್ ನಡೆದುಕೊಂಡ ರೀತಿ ಚರ್ಚೆ ಹುಟ್ಟುಹಾಕಿದೆ. ಈ ಇಬ್ಬರು ಆಟಗಾರರು ಭಾರತ 63 ರನ್ ಗಳಿಸಿದ ವೇಳೆ ಚೆಂಡನ್ನು ಶೂಗಳಲ್ಲಿ ಹೊಸಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಉದ್ದೇಶಪೂರ್ವಕವಾಗಿ ಬಾಲ್​ ಟ್ಯಾಂಪರಿಂಗ್​ ನಡೆಸಿದ್ದಾ ಎಂಬ ಪ್ರಶ್ನೆಗೆ ಕಾರಣವಾಗಿದೆ. ಆದ್ರೆ ಈ ಬಗ್ಗೆ ಟ್ವೀಟ್​ ಮಾಡಿರುವ ಸ್ಟುವರ್ಡ್​ ಬ್ರಾಡ್​, ಇದು ಉದ್ದೇಶಪೂರ್ವಕ ಘಟನೆಯಲ್ಲ. ಆಕಸ್ಮಿಕ ಘಟನೆ ಅಂತ ಸಮರ್ಥಿಸಿಕೊಂಡಿದ್ದಾರೆ.

10. ಆಗಸ್ಟ್​ 19ರಂದು ತೆಲುಗಿನಲ್ಲಿ ದಿಯಾ ರಿಲೀಸ್!

blank
ಕಳೆದ ವರ್ಷ ಬಹಳ ದೊಡ್ಡಮಟ್ಟದಲ್ಲಿ ಸಕ್ಸಸ್​ ಕಂಡ ಕನ್ನಡದ ದಿಯಾ ಸಿನಿಮಾ, ಸದ್ಯ ತೆಲುಗಿನಲ್ಲಿ ಕಮಾಲ್​ ಮಾಡೋಕೆ ಮುಂದಾಗಿದೆ. ಈಗಾಗಲೇ ತೆಲುಗಿನಲ್ಲಿ ಡಬ್ಬಿಂಗ್​ ಕೆಲಸ ಮುಗಿಸಿದ್ದು, ಸಂಪೂರ್ಣವಾಗಿ ತೆಲುಗು ಸಿನಿಮಾ ಎನ್ನುವಂತೆ ಪ್ರೇಕ್ಷಕರಿಗೆ ಕೊಡಲು ವಿತರಕರು ನಿರ್ಧರಿಸಿದ್ದಾರೆ. ಒಟಿಟಿಯಲ್ಲಿ ಇದೇ ಆಗಸ್ಟ್​ 19ರಂದು ಸಿನಿಮಾ ತೆರೆ ಕಾಣಲಿದೆ ಅಂತ ವಿತರಕ ಆರ್​ಕೆ ನಲ್ಲಮ್​ ಮತ್ತು ರವಿ ಕಶ್ಯಪ್​ ತಿಳಿಸಿದ್ದಾರೆ. ಈ ಹಿನ್ನೆಲೆ ಇಂದು ಸಂಜೆ 6ಕ್ಕೆ ಪ್ರಸಾದ್​ ಲ್ಯಾಬ್​ನಲ್ಲಿ ಪ್ರೀ ರಿಲೀಸ್​ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Source: newsfirstlive.com Source link