ಮೊದಲ ಬಾರಿ ರಾಷ್ಟ್ರಧ್ವಜ ಹಾರಿಸಿದ CPI(M); ರಾಜಕೀಯ ಅಸ್ತಿತ್ವಕ್ಕಾಗಿ ಎಂದ ಕಾಂಗ್ರೆಸ್​, ಬಿಜೆಪಿ

ಮೊದಲ ಬಾರಿ ರಾಷ್ಟ್ರಧ್ವಜ ಹಾರಿಸಿದ CPI(M); ರಾಜಕೀಯ ಅಸ್ತಿತ್ವಕ್ಕಾಗಿ ಎಂದ ಕಾಂಗ್ರೆಸ್​, ಬಿಜೆಪಿ

ನವದೆಹಲಿ: ತನ್ನ 57 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ದೇಶದ ತ್ರಿವರ್ಣ ಧ್ವಜ ಹಾರಿಸಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳು ನಾಡು ಸೇರಿದಂತೆ ದೇಶದ ಎಲ್ಲಾ ಕಚೇರಿಗಳಲ್ಲೂ ಸಿಪಿಐ(ಎಂ), ಭಾರತದ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಟ್​​ ಮಾಡಿದೆ. 

ಇನ್ನು, ಸಿಪಿಐ(ಎಂ) ʻಐಡಿಯಾ ಆಫ್‌ ಇಂಡಿಯಾʼ ಎಂಬ ಘೋಷವಾಕ್ಯದೊಂದಿಗೆ ಒಂದು ವರ್ಷ ಕಾಲ ಕಾರ್ಯಕ್ರಮವೊಂದು ಹಮ್ಮಿಕೊಂಡಿದೆ. ಇದರಲ್ಲಿ ʻಸ್ವಾತಂತ್ರ್ಯ ಸಂಗ್ರಾಮದ ನೈಜ ಇತಿಹಾಸʼವನ್ನು ಜನರಿಗೆ ಪರಿಚಯಿಸಲಿದ್ದೇವೆ ಎಂದು ಹೇಳಿಕೊಂಡಿದೆ.

1964ರಲ್ಲಿ ಅಸ್ವಿತ್ವಕ್ಕೆ ಬಂದ ಭಾರತೀಯ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಇದುವರೆಗೂ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸಲೇಬೇಕು ಎಂಬ ಕಡ್ಡಾಯ ನಿಯಮವನ್ನು ಅಳವಡಿಸಿಕೊಂಡಿರಲಿಲ್ಲ. ಅದಾಗ್ಯೂ ಕೆಲ ಕಮ್ಯೂನಿಸ್ಟ್‌ ನಾಯಕರು ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸಿ ಆಚರಿಸಿದ್ದೂ ಇದೆ. ಆದರೀಗ, ಸಿಪಿಐ(ಎಂ) ತಮ್ಮ ಕಾರ್ಯಕರ್ತರಿಗೆ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಕಟ್ಟಪ್ಟಣೆ ಹೊರಡಿಸಿದೆ.

ಈ ಸಂಬಂಧ ರಾಷ್ಟ್ರೀಯ ಮಾದ್ಯಮಗಳ ಮಾತಾಡಿರುವ, CPI(M)ನ ಪೊಲಿಟ್ ಬ್ಯೂರೋ ಸದಸ್ಯ ನಿಲೋತ್ಪಾಲ್ ಬಸು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದಿವೆ. ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಅಪಾಯದಲ್ಲಿದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರ ತ್ಯಾಗ ಬಲಿದಾನವನ್ನು ಜನರಿಗೆ ಮನವರಿಕೆ ಮಾಡಲಿದ್ದೇವೆ ಎಂದಿದ್ದಾರೆ.

ಬಿಜೆಪಿ ವ್ಯಂಗ್ಯ

ಇನ್ನೊಂದೆಡೆ 1964ರಲ್ಲಿ CPI(M) ಪಕ್ಷ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅಧಿಕೃತವಾಗಿ ಆದೇಶ ಹೊರಡಿಸಿರುವುದರ ಕುರಿತು ಬಿಜೆಪಿ ವ್ಯಂಗ್ಯವಾಡಿದೆ. ಕಮ್ಯೂನಿಸ್ಟರು ತಮ್ಮ ರಾಜಕೀಯ ಅಸ್ತಿತ್ವತಕ್ಕಾಗಿ ದೇಶಭಕ್ತಿಯ ಮುಖವಾಡ ತೊಡಲು ಹೊರಟಿದ್ದಾರೆ. ಇತ್ತೀಚೆಗೆ ಪಶ್ವಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇ.5ರಷ್ಟು ಮತಗಳಿಸಿದ ಸಿಪಿಐ(ಎಂ)ಗೆ ಅಸ್ತಿತ್ವದ ಪ್ರಶ್ನೆ ಹುಟ್ಟಿಕೊಂಡಿದೆ. ಹಾಗಾಗಿ ಇಂಥಾ ಕ್ರಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್​ ಲೇವಡಿ

ಕಮ್ಯೂನಿಸ್ಟರು ಸೈದ್ಥಾಂತಿಕ ನಿಲುವುಗಳನ್ನು ಬದಲಿಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಅಂಧ ರಾಜಕೀಯ ತತ್ವಗಳಿಂದ ಜನರು ದೂರ ಉಳಿದ ಕೂಡಲೇ ಇಂತಹ ಕಾರ್ಯಕ್ರಮಗಳು ಮಾಡಲು ನಿರ್ಧರಿಸಿದ್ದಾರೆ. ಇದು ಜನರಿಗೆ ಹತ್ತಿರವಾಗುವ ಮತ್ತೊಂದು ಪ್ರಯತ್ನ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪ್ರದೀಪ್‌ ಭಟ್ಟಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮ.ಪ್ರದೇಶ ಬಿಜೆಪಿ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿದ ಪಕ್ಷದ ಬಾವುಟ

Source: newsfirstlive.com Source link