ಮುಗಿಯದ ಸಂಪುಟ ಸಮರ; ನಾಳೆ ಸಿಎಂ ದೆಹಲಿ ಪ್ರವಾಸ ಸಾಧ್ಯತೆ; ಹೈಕಮಾಂಡ್​​ ಮುಂದಿನ ನಡೆಯೇನು?

ಮುಗಿಯದ ಸಂಪುಟ ಸಮರ; ನಾಳೆ ಸಿಎಂ ದೆಹಲಿ ಪ್ರವಾಸ ಸಾಧ್ಯತೆ; ಹೈಕಮಾಂಡ್​​ ಮುಂದಿನ ನಡೆಯೇನು?

ನವದೆಹಲಿ: ಸಿಎಂ ಬಸವರಾಜ್​​ ಬೊಮ್ಮಾಯಿ ಸಚಿವ ಸಂಪುಟ ರಚನೆ ಮಾಡಿದ ದಿನದಿಂದಲೂ ಪಕ್ಷದಲ್ಲಿ ಆಂತರಿಕ ಕಲಹ, ಅಸಮಾಧಾನಿತರ ಆಕ್ರೋಶ ಹೊಗೆಯಾಡುತ್ತಲೇ ಇದೆ. ಗುಂಪುಗಾರಿಕೆ, ಮೂಲ, ವಲಸಿಗರ ತಿಕ್ಕಾಟ ನಡೆಯುತ್ತಲೇ ಇದೆ. ಬಿ.ಎಸ್​ ಯಡಿಯೂರಪ್ಪ ಬದಲಾವಣೆ ಮಾಡಿ ಬಸವರಾಜ್​​ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರೂ, ಸಂಪುಟ ರಚನೆಯಾದರೂ ಅತೃಪ್ತಿ ಮಾತ್ರ ಶಮನವಾಗಿಲ್ಲ. ಈ ಎಲ್ಲದ್ದರ ಕುರಿತು ಚರ್ಚಿಸಲು ಸಿಎಂ ಬಸವರಾಜ್​​ ಬೊಮ್ಮಾಯಿ ನಾಳೆ ದೆಹಲಿ ಪ್ರವಾಸ ಬೆಳೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಳೆ ಸಿಎಂ ಬಸವರಾಜ್​​ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಬುಧವಾರ ಹೈಕಮಾಂಡ್ ನಾಯಕರ ಭೇಟಿಯಾಗಲಿದ್ದಾರೆ. ಈ ವೇಳೆ ಕೊರೊನಾ ಲಸಿಕೆ ಕೊರತೆ, ಖಾಲಿಯಿರುವ ಖಾತೆಗಳ ಭರ್ತಿ, ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇನ್ನು, ಕೊರೊನಾ ಲಸಿಕೆ ನೆಪದಲ್ಲಿ ನೇರವಾಗಿ ಸಂಪುಟ ರಚನೆಯಿಂದ ಆದ ಗೊಂದಲದ ಬಗ್ಗೆ ಹೈಕಮಾಂಡ್​ ನಾಯಕರ ಬಳಿ ಚರ್ಚಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​​ ಶಾರನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಮಾತುಕತೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

ತಮ್ಮ ಭೇಟಿ ವೇಳೆ ಸಿಎಂ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಆನಂದ್​​​ ಸಿಂಗ್ ವಿಚಾರ​​, ಜಿಲ್ಲಾ ಉಸ್ತುವಾರಿಗಳ ನೇಮಕ, ಕೊರೊನಾ ಮೂರನೇ ಅಲೆ ಆಂತಕ ಸೇರಿದಂತೆ ಹಲವು ವಿಚಾರಗಳನ್ನು ಹೈಕಮಾಂಡ್​​ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.

Source: newsfirstlive.com Source link