ನೆರೆ ಪೀಡಿತ ಸಂತ್ರಸ್ಥರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ

ಚಿಕ್ಕೋಡಿ: ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ್ರಸ್ಥರು ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಿಂದಾಗಿ ಬಿದ್ದಿರುವ ಮನೆಗಳ ಸರ್ವೆಕಾರ್ಯವನ್ನ ಕ್ಷೀಪ್ರಗತಿಯಲ್ಲಿ ಮುಗಿಸಬೇಕು. ಬಿದ್ದಿರುವ ಯಾವುದೇ ಮನೆಗಳು ಸರ್ವೆ ಆಗದೇ ಉಳಿಯಬಾರದು ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ: ಬಿ.ಸಿ ಪಾಟೀಲ್

ಸರ್ಕಾರ ಈಗಾಗಲೇ ಮನೆ ನಿರ್ಮಾಣಕ್ಕೆ ಪರಿಹಾರ ಘೋಷಿಸಿದ್ದು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಕು. ಪ್ರವಾಹ ಬಂದು ಹೋದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಹುಕ್ಕೇರಿ ತಾಲೂಕಿನ ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಾಲೂಕಿನ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Source: publictv.in Source link