ಕಾಂಗ್ರೆಸ್ ಬೀದಿಗೆ ಬಿದ್ದ ಪಕ್ಷ : ಜಗದೀಶ್ ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ: ಲೋಕಸಭೆ ಕಲಾಪದಲ್ಲಿ ಸ್ಪಷ್ಟವಾಗಿ ಚರ್ಚೆ ಮಾಡಲು ಸಾಧ್ಯವಾಗದಂಥ ಕಾಂಗ್ರೆಸ್ ತಾನೆಷ್ಟು ವೀಕ್ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಬೀದಿಗೆ ಬಿದ್ದ ಪಕ್ಷವಾಗಿದೆ. ಪಾರ್ಲಿಮೆಂಟ್‍ನಲ್ಲಿ ಗುಣಮಟ್ಟದ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆ ಮೂಲಕ ಪ್ರತಿಪಕ್ಷ ಎಷ್ಟು ವೀಕ್ ಇದೆ ಎಂಬುದನ್ನು ತೋರಿಸಿದೆ. ಜಾಗತಿಕ ನಾಯಕ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಕೀಳಾಗಿ ಮಾತನಾಡಿದ್ದು, ಭಾರತೀಯರಿಗೆ ನೋವುಂಟು ಮಾಡಿದ್ದು, ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿ ಕಾಂಗ್ರೆಸ್ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ನಿರುದ್ಯೋಗಿ ಸಿದ್ದರಾಮಯ್ಯ ಭವಿಷ್ಯದ ಅಂಗಡಿ ತೆರೆದಿದ್ದಾರೆ: ಕಟೀಲ್

ಜಮ್ಮು-ಕಾಶ್ಮೀರದಲ್ಲಿ 370ನೇ ಕಲಂ ರದ್ದತಿ ಆಗಿ ಶಾಂತಿ ನೆಲೆಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಾನೂನಿನ ಚೌಕಟ್ಟನಲ್ಲೇ ನಿರ್ಮಾಣ ಆಗುತ್ತಿದೆ. ಕೊರೊನಾ ಇಲ್ಲದಿದ್ದರೆ ದೇಶ ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು. 130 ಕೋಟಿ ಜನಸಂಖ್ಯೆ ಇದ್ದರೂ ನಾವು ಕೋವಿಡ್‍ನ್ನು ಸಮರ್ಥವಾಗಿ ಎದುರಿಸಿದ್ದೇವೆ. ವ್ಯಾಕ್ಸಿನೇಶನ್ ಬಗ್ಗೆ ಅಪಪ್ರಚಾರ ನಡೆಯಿತು. ಆದರೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಜನಸಂಘದ ಕಾಲದಿಂದಲೂ ಹುಬ್ಬಳ್ಳಿ ತತ್ವ-ಸಿದ್ಧಾಂತಕ್ಕೆ ಹೆಗಲಾದ ನೆಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಪಕ್ಷ ನಮ್ಮದು. ವಾಜಪೇಯಿ ಅವರ ಬಳಿಕ ಮೋದಿ ಅವರು ದೇಶದಲ್ಲಿ ಉತ್ತಮವಾಗಿ ಆಡಳಿತ ಮಾಡುತ್ತಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಗಳ ಪ್ರಯೋಜನ ತಲುಪಲು ಸಹಾಯ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಹೇಶ ಟೆಂಗಿನಕಾಯಿ, ವಿರೋಧ ಪಕ್ಷವಾಗಿ ಕಾಂಗ್ರೆಸ್ ರಚನಾತ್ಮಕ ಸಹಕಾರ ನೀಡದೆ ಕೇವಲ ವಿರೋಧ ವ್ಯಕ್ತಪಡಿಸಿದೆ ಎಂದರು. ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನ ಮಾಡುವ ಮೂಲಕ ಉದ್ಘಾಟಿಸಲಾಯಿತು. ಡಾ. ಈಶ್ವರ ಹಸಬಿ, ಆರೋಗ್ಯ ಸಹಾಯಕಿ ಭಾರತಿ, ಆಶಾ ಕಾರ್ಯಕರ್ತೆ ಶಬಾನಾ, ಹೆಡ್ ಕಾನ್ಸಟೇಬಲ್ ಎಸ್.ವಿ. ಸತೀಶ್, ಪೌರ ಕಾರ್ಮಿಕ ಸರಸ್ವತಿ ಅಮದಿಹಾಳ ಅವರನ್ನು ಗೌರವಿಸಲಾಯಿತು. ಬಳಿಕ ಜನಾಶೀರ್ವಾದ ಯಾತ್ರೆ ಆರಂಭಿಸಿರುವ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು. ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಸ್ವಾಗತಿಸಿದರು. ಪ್ರಭಾರಿ ಲಿಂಗರಾಜ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

Source: publictv.in Source link