ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್

ವಾಷಿಂಗ್ಟನ್: ಅಫ್ಘಾನಿಸ್ತಾನ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೇನೆ ಹಿಂಪಡೆಯುವ ಬಗ್ಗೆ ಟ್ರಂಪ್ ಅವಧಿಯಲ್ಲಿ ಒಪ್ಪಂದ ಆಗಿತ್ತು. ಆ ಒಪ್ಪಂದವನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

ಈ ಹಿಂದೆ ಮಾತುಕತೆ ವೇಳೆ ಅಫ್ಘಾನಿಸ್ತಾನ ಸೇನೆ ಹೋರಾಟ ಮಾಡುವುದಾಗಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಆದರೆ ಅವರೇ ಓಡಿಹೋಗಿದ್ದಾರೆ. ಅಫ್ಘಾನ್ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ. ಈ ಹಿಂದೆ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಈಗಾಗಲೇ ನಾವು 3 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದ್ದೇವೆ.  ಈ ಯುದ್ಧದಲ್ಲಿ ಇನ್ನೂ ಎಷ್ಟು ತಲೆಮಾರಿನವರೆಗೆ ಅಮೇರಿಕದ ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

ಅಫ್ಘಾನ್‍ನಿಂದ ಸೇನೆ ಹಿಂಪಡೆಯುವುದು ನನ್ನ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ನಮ್ಮ ಮೇಲೆ ದಾಳಿ ಎಸಗಿದವರ ಮೇಲೆ ಕ್ರಮ ಕೈಗೊಳ್ಳುವುದೇ ನಮ್ಮ ಉದ್ದೇಶ ಹೊರತು ಅಫ್ಘಾನ್ ಪುನರ್ ನಿರ್ಮಾಣ ಮಾಡಿ ಪ್ರಜಾಪ್ರಭುತ್ವ ಸ್ಥಾಪನೆ ನಮ್ಮ ಉದ್ದೇಶ ಆಗಿರಲಿಲ್ಲ. ಈಗಾಗಲೇ ನಮ್ಮ ಗುರಿ ಏನಿತ್ತು ಆ ಕಾರ್ಯದಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ ಎಂದು ಹೇಳಿದರು.

ಅಫ್ಘಾನ್ ಅಧ್ಯಕ್ಷ ಘನಿ ಜೊತೆ ನಾನು ಜೂನ್ ತಿಂಗಳಿನಲ್ಲಿ ದೂರವಾಣಿಯಲ್ಲಿ ಮಾತನಾಡಿದ್ದೆ. ಈ ವೇಳೆ ಅಮೆರಿಕ ಸೇನೆ ತೊರೆದ ಬಳಿಕ ದೇಶದಲ್ಲಿ ಅಂತರ್ಯುದ್ಧ ನಡೆಯಬಹುದು. ಇದಕ್ಕೆ ಅಫ್ಘಾನ್ ಸಿದ್ಧವಾಗಬೇಕು ಎಂದು ಹೇಳಿದ್ದೆ. ಅಫ್ಘಾನ್ ನಾಯಕರು ಜನರನ್ನು ರಾಜಕೀಯವಾಗಿ ಒಗ್ಗೂಡಿಸೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ವಿಫಲಗೊಂಡಿತು ಎಂದು ಹೇಳಿದರು. ಈ ವೇಳೆ ಮಹಿಳೆಯರು ಮತ್ತು ಮಕ್ಕಳ ಹಕ್ಕು ರಕ್ಷಣೆಗೆ ಅಮೆರಿಕ ಕಟ್ಟಿಬದ್ಧ ಎಂದು ಬೈಡನ್ ತಿಳಿಸಿದರು.

Source: publictv.in Source link