‘ಪೆಟ್ರೋಲ್​, ಡಿಸೇಲ್​ ಮೇಲಿನ ಸುಂಕ ಕಡಿತ ಇಲ್ಲ’ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

‘ಪೆಟ್ರೋಲ್​, ಡಿಸೇಲ್​ ಮೇಲಿನ ಸುಂಕ ಕಡಿತ ಇಲ್ಲ’ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

1.ಈಗ ಶಾಲೆ ಆರಂಭ ಬೇಡ

ಮೂರನೇ ಅಲೆ ಭೀತಿಯಲ್ಲಿರುವಾಗ ಶಾಲೆ ಆರಂಭಿಸುವುದು ಸೂಕ್ತವಲ್ಲ ಅಂತ ಫನಾ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದೆ. ಮಕ್ಕಳಲ್ಲಿ ಸೋಂಕಿಗಿಂತ ಕೊರೊನೋತ್ತರ ಅನಾರೋಗ್ಯ ಸಮಸ್ಯೆಗಳು ಗಂಭೀರ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಡಿ ಅಂತ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್​ ಹೋಂಗಳ ಸಂಘ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ. ಒತ್ತಡಕ್ಕೆ ಮಣಿದು ಶಾಲೆ ಆರಂಭಿಸಿದ್ರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದ್ವೇಳೆ ಆರಂಭಿಸಿದ್ರೂ 9 ನೇ ತರಗತಿ ಮೇಲಿನ ಮಕ್ಕಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರಂಭಿಸಬೇಕು ಎಂದಿದೆ.

2. ‘ಪೆಟ್ರೋಲ್​, ಡಿಸೇಲ್​ ಮೇಲಿನ ಸುಂಕ ಕಡಿತ ಇಲ್ಲ’

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವುದಿಲ್ಲ ಅಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ತೈಲೋತ್ಪನ್ನಗಳ ದರ ಏರಿಕೆ ಹಿನ್ನಲೆ ಅಬಕಾರಿ ಸುಂಕ ಕಡಿತ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಅಬಕಾರಿ ಸುಂಕ ಕಡಿತ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ನೋ ಎಂದಿದೆ. ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ನೀಡಿದ್ದ ಸಬ್ಸಿಡಿಗೆ ಬದಲಾಗಿ ಪಾವತಿ ಮಾಡಬೇಕಿರುವ ಮೊತ್ತವು ಸುಂಕ ಕಡಿತಕ್ಕೆ ಅವಕಾಶ ಕೊಡುತ್ತಿಲ್ಲ ಅಂತ ಸಚಿವೆ ಹೇಳಿದ್ದಾರೆ.

3.ಪೆಗಸಸ್​ ಹಗರಣದ ತನಿಖೆಗೆ ತಜ್ಞರ ಸಮಿತಿ ರಚನೆ

ಪೆಗಸಸ್​ ಫೋನ್​ ಕದ್ದಾಲಿಕೆ ಹಗರಣದ ತನಿಖೆಗಾಗಿ ತಜ್ಞರ ಸಮಿತಿ ರಚಿಸಲಾಗುವುದು ಅಂತ ಸುಪ್ರಿಂ ಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿರುವ ಕೇಂದ್ರ, ಪೆಗಸಸ್​ನಿಂದ ಫೋನ್​ ಕದ್ದಾಲಿಕೆ ಮಾಡಿಲ್ಲ ಅಂತ ತಿಳಿಸಿದೆ. ಆದ್ರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರವನ್ನು ಬಯಲಿಗೆಳೆಯಲು ಮತ್ತು ಪೆಗಸಸ್​ ವಿಚಾರವಾಗಿ ಕೇಳಿಬಂದಿರುವ ಎಲ್ಲಾ ಆರೋಪಗಳನ್ನ ಪರಿಶೀಲಿಸಲು ತಜ್ಞರ ಸಮಿತಿ ರಚಿಸುತ್ತೇವೆ ಅಂತ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

4. ಇಂದು ಅಸ್ಸಾಂಗೆ ಕೇಂದ್ರ ಆರೋಗ್ಯ ಸಚಿವ ಭೇಟಿ

ಕೊರೊನಾ ಸ್ಥಿತಿಗತಿ ಕುರಿತು ಅವಲೋಕಿಸಲು ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ರಾಜ್ಯದ ಅಧಿಕಾರಿಗಳ ಜೊತೆ ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಿನ್ನೆ ಕೇರಳಕ್ಕೆ ಭೇಟಿ ನೀಡಿದ್ದ ಮಾಂಡವೀಯಾ, ಕೊರೊನಾ ಕಂಟ್ರೋಲ್​​ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಸ್ಸಾಂ ಭೇಟಿ ಬಳಿಕ ಚಾಂಗಸರಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ನಿರ್ಮಾಣ ಕಾಮಗಾರಿಯನ್ನ ಪರಿಶೀಲಿಸಲಿದ್ದಾರೆ.

5. ಅಫ್ಘನ್​ ಸೇನೆ ನಂಬಿ ಅಮೆರಿಕದ ಜೀವ ಬಲಿ ಕೊಡಲ್ಲ-ಬೈಡೆನ್​

ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಂಡಿದ್ದಕ್ಕೆ ಬೇಸರವಿಲ್ಲ ಅಂತ ಸೇನೆ ವಾಪಸ್​ ಕರೆಸಿಕೊಂಡ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ಮರುನಿರ್ಮಾಣ ಮಾಡೋದು ನಮ್ಮ ಉದ್ದೇಶವಲ್ಲ. ಅಮೆರಿಕದ ಮೇಲಿನ ಉಗ್ರರ ದಾಳಿ ತಡೆಯುವುದು ನಮ್ಮ ಉದ್ದೇಶ. ಅಲ್​ಖೈದಾವನ್ನು ದುರ್ಬಲಗೊಳಿಸಿದ್ದೇವೆ. ಈಗಾಗಲೇ 1 ಲಕ್ಷ ಕೋಟಿ ಡಾಲರ್​ ಖರ್ಚು ಮಾಡಿದ್ದೇವೆ. ಅಫ್ಘಾನಿಸ್ತಾನ ಸೇನೆ ಉಗ್ರರ ವಿರುದ್ದ ಹೋರಾಡ್ತಿಲ್ಲ. ಹೀಗಾಗಿ ಅಫ್ಘನ್​ ಸೇನೆಯನ್ನ ನಂಬಿ ಅಮೆರಿಕದ ಜೀವಗಳನ್ನು ಬಲಿ ಕೊಡಲ್ಲ ಅಂತ ಬೈಡೆನ್​ ಹೇಳಿದ್ದಾರೆ. ಅಮೆರಿಕ ಪ್ರಜೆಗಳ ಮೇಲೆ ಹಲ್ಲೆ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ತಾಲಿಬಾನಿಗಳಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

6. ಭಾರತೀಯರ ರಕ್ಷಣೆಗೆ ಸಹಾಯವಾಣಿ

ಅಫ್ಘಾನಿಸ್ತಾನದಲ್ಲಿನ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಧಾವಿಸಿದ್ದು, ಸಹಾಯವಾಣಿ ತೆರೆದಿದೆ. ಈ ಕುರಿತಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ ಮಾಡಿದ್ದು, ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ನೆರವಿಗಾಗಿ ಸಹಾಯವಾಣಿ ಮತ್ತು ಇ-ಮೇಲ್ ಐಡಿ ತೆರೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಕಾಪಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಅಂತ ಬಾಗ್ಚಿ ತಿಳಿಸಿದ್ದಾರೆ. ಇನ್ನು ಈ ಬೆನ್ನಲ್ಲೇ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್​ಸನ್​ ತುರ್ತಾಗಿ ಜಿ-7 ದೇಶಗಳ ನಾಯಕರ ಸಭೆ ಕರೆದಿದ್ದಾರೆ.

7. ಉಗ್ರರ ಅಧಿಪತ್ಯಕ್ಕೆ ಪಾಕ್​, ಚೀನಾ ಪರೋಕ್ಷ ಸಮ್ಮತಿ

ಅಫ್ಘಾನಿಸ್ತಾನ ತಾಲಿಬಾನ್​ಗಳ ವಶವಾದ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ತಾಲಿಬಾನ್​ ಪರ ಬ್ಯಾಟ್​ ಬೀಸಿದ್ದಾರೆ. ಇಷ್ಟು ದಿನ ಇದ್ದ ಗುಲಾಮಗಿರಿಯ ಸರಪಳಿಯನ್ನು ತಾಲಿಬಾನ್​ಗಳು ಮುರಿದಿದ್ದಾರೆ. ನೀವು ಇತರ ಸಂಸ್ಕೃತಿ, ಆಚರಣೆಗಳನ್ನ ಪಾಲಿಸುತ್ತಾ ಬಂದರೆ ನೀವು ಅದರ ಗುಲಾಮರಾಗ್ತೀರಾ. ಈಗ ಆ ಗುಲಾಮಗಿರಿಯ ಸಂಕೋಲೆಯನ್ನು ಹಂತ- ಹಂತವಾಗಿ ಬಿಡಿಸಲಾಗಿದೆ ಅಂತ ಹೇಳಿದ್ದಾರೆ. ಪಾಕ್​ ಜೊತೆಗೆ ಚೀನಾ ಕೂಡ ತಾಲಿಬಾನ್ ಪರ ಪರೋಕ್ಷವಾಗಿ ಮಾತನಾಡಿದೆ. ತನ್ನ ಪೂರ್ವ ಬದ್ಧತೆಯಂತೆ ತಾಲಿಬಾನ್​ ಯಾವುದೇ ರೀತಿ ಹಿಂಸಾಚಾರಗಳು ಇಲ್ಲದಂತೆ ದೇಶದ ಪ್ರಜೆಗಳಿಗಾಗಿ ಶಾಂತಿಯುತ ಆಡಳಿತ ನೀಡಲಿದೆ ಎಂದು ಚೀನಾ ಹೇಳಿದೆ.

8. ತಾಲಿಬಾನ್​​ ಪರ ಇರ್ಫಾನ್​ ಪಠಾಣ್​ ಟ್ವೀಟ್​?

ಅಫ್ಘಾನಿಸ್ತಾನವನ್ನು ತಾಲಿಬಾನ್​ಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಪ್ರಾರ್ಥನೆ ಮತ್ತು ಶುಭಾಶಯ ಅಂತ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಟ್ವೀಟ್​ ಮಾಡಿದ್ದಾರೆ. ಸದ್ಯ ಇರ್ಫಾನ್​ ಈ ಟ್ವೀಟ್​ ಚರ್ಚೆಗೆ ಕಾರಣವಾಗಿದ್ದು, ತಾಲಿಬಾನ್​ಗಳು ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದಕ್ಕೆ ಶುಭಾಶಯ ಕೋರಿದ್ದಾರಾ ಅಥವಾ ಪ್ರಜಾಪ್ರಭುತ್ವ ಸರ್ಕಾರ ಅಂತ್ಯವಾಗಿದ್ದಕ್ಕೆ ಶುಭಾಶಯ ಕೋರಿದ್ದಾರಾ ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಆದ್ರೆ ಈವರೆಗೂ ಇರ್ಫಾನ್​ ಟ್ವೀಟ್​ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇನ್ನು ಸ್ವತಃ ಅಫ್ಘನ್ ಮಹಿಳಾ ಫುಟ್​ಬಾಲ್​ ಆಟಗಾರರು ಮುಂದಿನ ಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಇಷ್ಟು ದಿನ ಮಹಿಳಾ ಸಬಲಿಕರಣಕ್ಕಾಗಿ ಹೋರಾಡಿ ಅನ್ನುತ್ತಿದ್ದ ನಾನು ಈಗ ಬಚ್ಚಿಟ್ಟುಕೊಳ್ಳಿ ಅಂತ ಹೇಳಲು ದುಖವಾಗುತ್ತಿದೆ ಎಂದು ಮಹಿಳಾ ಫುಟ್​ಬಾಲ್​ ಆಟಗಾರ್ತಿ ಖಲೀಡಾ ಪೋಪಲ್​ ಹೇಳಿದ್ದಾರೆ.

9. ಐಪಿಎಲ್​ನಲ್ಲಿ ಭಾಗಿಯಾಗಲಿದ್ದಾರೆ ಅಫ್ಘನ್​ ಕ್ರಿಕೆಟಿಗರು

ಅಫ್ಘಾನಿಸ್ತಾನ ತಾಲಿಬಾನ್​ಗಳ ವಶದಲ್ಲಿದ್ರೂ ಸೆಪ್ಟಂಬರ್​ನಲ್ಲಿ ನಡೆಯಲಿರುವ ಐಪಿಎಲ್​ನಲ್ಲಿ ಅಫ್ಘಾನಿಸ್ತಾನದ ಕ್ರಿಕೆಟಿಗರು ಭಾಗಿಯಾಗುತ್ತಾರೆ ಅಂತ ಅಫ್ಘಾನಿಸ್ತಾನದ ಕ್ರಿಕೆಟ್​ ಮಂಡಳಿ ತಿಳಿಸಿದೆ. ತಾಲಿಬಾನ್​ಗಳು ಕ್ರಿಕೆಟ್​ ಇಷ್ಟಪಡುತ್ತಾರೆ ಮತ್ತು ಕ್ರಿಕೆಟ್​ಗೆ​ ಬೆಂಬಲ ನೀಡ್ತಾರೆ. ಹಾಗಾಗಿ ಅಫ್ಘಾನ್​ನಲ್ಲಿ ಕ್ರಿಕೆಟ್​ ಪಂದ್ಯಾವಳಿಗಳಿಗೆ ಅಡಚಣೆ ಇರೋದಿಲ್ಲ ಅಂತ ಹೇಳಿದೆ. ಐಪಿಎಲ್​ ಸೇರಿದಂತೆ ಟಿ-20 ವಿಶ್ವಕಪ್​ನಲ್ಲೂ ಅಫ್ಘಾನ್​ ಕ್ರಿಕೆಟಿಗರು ಪಾಲ್ಗೊಳ್ಳುತ್ತಾರೆ ಅಂತ ಕ್ರಿಕೆಟ್​ ಮಂಡಳಿ ಮಾಹಿತಿ ನೀಡಿದೆ.

10. ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು

ಭಾರತ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಲಾರ್ಡ್ಸ್​ ಮೈದಾನದಲ್ಲಿ ಭಾರತಕ್ಕೆ ಭರ್ಜರಿ ಜಯ ಸಿಕ್ಕಿದ್ದು, 2ನೇ ಟೆಸ್ಟ್​ನಲ್ಲಿ 151 ರನ್​ಗಳ ಅಂತರದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಟೀಮ್​ ಇಂಡಿಯಾ ಇಂಗ್ಲೆಂಡ್​ ತಂಡಕ್ಕೆ 272 ರನ್​ಗಳ ಟಾರ್ಗೆಟ್​ ನೀಡಿದ್ದು, 120 ರನ್ ಗಳಿಸುವ ಮೂಲಕ ಇಂಗ್ಲೆಂಡ್​ ಅಲೌಟ್​ ಆಗಿದೆ. ಇನ್ನು ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ ಗಳಿಸಿ ಆಲ್​ಔಟ್​ ಆಗಿತ್ತು, ಸೆಕೆಂಡ್​​ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 298 ರನ್​ ಗಳಿಸಿತ್ತು. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 391 ರನ್​, ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಕೇವಲ 120 ರನ್​ ಗಳಿಸಿ ಅಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿದೆ.

Source: newsfirstlive.com Source link