ದಲಿತ ಕುಟುಂಬಗಳಿಗೆ ₹10 ಲಕ್ಷ -‘ದಲಿತ ಬಂಧು’ ಯೋಜನೆಗೆ ಚಾಲನೆ ಕೊಟ್ಟ ತೆಲಂಗಾಣ ಸಿಎಂ ಕೆಸಿಆರ್​

ದಲಿತ ಕುಟುಂಬಗಳಿಗೆ ₹10 ಲಕ್ಷ -‘ದಲಿತ ಬಂಧು’ ಯೋಜನೆಗೆ ಚಾಲನೆ ಕೊಟ್ಟ ತೆಲಂಗಾಣ ಸಿಎಂ ಕೆಸಿಆರ್​

ಹೈದರಾಬಾದ್​: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯದ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿತರಿಸುವ ದಲಿತ ‘ಬಂಧು’ ಯೋಜನೆಗೆ ಚಾಲನೆ ನೀಡಿದ್ದಾರೆ.

ಕರೀಂನಗರ ಜಿಲ್ಲೆಯ ಹುಜುರಾಬಾದ್ ವಿಧಾನಸಭಾ ಕ್ಷೇತ್ರದ ಶಲಪಲ್ಲಿಯಲ್ಲಿ ಯೋಜನೆಗೆ ಚಾಲನೆ ನೀಡಿದರು. ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆಸಿಆರ್, “ಈಯೋಜನೆಗೆ ಯಾವುದೇ ನಿರ್ಬಂಧಗಳಿಲ್ಲ, ದಲಿತ ಕುಟುಂಬದವರು ಸರ್ಕಾರಿ ಉದ್ಯೋಗಿಗಳಾಗಿದ್ದರೂ ಪ್ರತಿ ಕುಟುಂಬವು 10 ಲಕ್ಷ ರೂಪಾಯಿ ಪಡೆಯಲು ಅರ್ಹರಾಗಿರುತ್ತಾರೆ” ಎಂದು ಹೇಳಿ, ಯೋಜನೆಯ ಮೊದಲ ಭಾಗವಾಗಿ ಸಭೆಯಲ್ಲಿ ಸುಮಾರು 15 ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಿದರು.

blank

ಇದು ಶೇ.100 ರಷ್ಟು ಸಹಾಯಧನದ ಯೋಜನೆಯಾಗಿದ್ದು ಫಲಾನುಭವಿಗಳು ಯಾವುದೇ ಮೊತ್ತವನ್ನು ಮರಳಿ ಬ್ಯಾಂಕಿಗೆ ಅಥವಾ ಸರ್ಕಾರಕ್ಕೆ ನೀಡುವ ಅಗತ್ಯವಿಲ್ಲ. ಮತ್ತು ಇದರ ಜೊತೆಗೆ ಈಗಿರುವ ಕಲ್ಯಾಣ ಯೋಜನೆಗಳಾದ ಪಿಂಚಣಿ, ಪಡಿತರ ಚೀಟಿ ಇನ್ನಿತರ ಯೋಜನೆಗಳನ್ನು ದಲಿತ ಬಂಧು ಯೋಜನೆಯ ಅನುಷ್ಠಾನದ ನಂತರವೂ ಮುಂದುವರಿಸಲಾಗುವುದು ಎಂದರು.

ಸರ್ಕಾರವು ಈ ಯೊಜನೆಯನ್ನು ಪ್ರಾಯೋಗಿಕವಾಗಿ ಹುಜುರಾಬಾದ್ ಪ್ರದೇಶದಲ್ಲಿ ಮೊದಲು ಆರಂಭಿಸಲಾಗಿದೆ, ಇಲ್ಲಿನ ಪ್ರತಿ ದಲಿತ ಕುಟುಂಬವೂ ಯೋಜನೆಯ ಮೊತ್ತವನ್ನು ಪಡೆಯಲಿದೆ. ನಂತರ ರಾಜ್ಯಾದ್ಯಂತ ಹಂತ ಹಂತವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಆರ್ಥಿಕ ಸಂಕಷ್ಟದಲ್ಲಿರುವ ದಲಿತ ಕುಟುಂಬಗಳ ಅನುಕೂಲಕ್ಕಾಗಿ ಸಂರಕ್ಷಣಾ ನಿಧಿಯನ್ನು ಸ್ಥಾಪಿಸಿ ಪ್ರತಿ ಫಲಾನುಭವಿಗಳಿಂದ 10,000 ರೂ.ಗಳನ್ನು ಕಡಿತಗೊಳಿಸಲಾಗುತ್ತದೆ, ಸರ್ಕಾರ ಪುನಃ ಅದೇ ಮೊತ್ತವನ್ನು ಯೋಜನೆಯ ಮೊತ್ತಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು ತೆಲಂಗಾಣ ರಚನೆಯ ಹಿಂದೆ ದಲಿತರ ಅಪಾರ ಹೋರಾಟವಿದೆ. ನಾವು ರೈತು ಬಂಧು, ಕಲ್ಯಾಣ ಲಕ್ಷ್ಮಿ, 2016 ರ ವೃದ್ಧಾಪ್ಯ ವೇತನ, 24 ಗಂಟೆಗಳ ನಿರಂತರ ವಿದ್ಯುತ್, ಕಾಳೇಶ್ವರಂ ಯೋಜನೆ, ಮಿಷನ್ ಭಗೀರಥ ಮತ್ತು ಇನ್ನೂ ಅನೇಕ ಯೋಜನೆಗಳನ್ನು ಕೈಗೊಂಡಿದ್ದು ಅವು ಯಶಸ್ವಿಯಾಗಿವೆ. ಅದೇ ನಿಟ್ಟಿನಲ್ಲಿ ದಲಿತ ಬಂಧು ಕೂಡ ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ ಎಂದರು. ಈ ವೇಳೆ ವಿರೋಧ ಪಕ್ಷಗಳನ್ನು ಟೀಕಿಸಿದ ಕೆಸಿಆರ್​, ದಲಿತರ ಅಭಿವೃದ್ಧಿಯ ಬಗ್ಗೆ ಯೋಚಿಸದ ಪಕ್ಷಗಳು ಈಗ ಸರ್ಕಾರವನ್ನು ಟೀಕಿಸುತ್ತಿವೆ, ಬಡ ಜನರ ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

Source: newsfirstlive.com Source link