ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯ ರೋಗ ಪತ್ತೆ, ಪರೀಕ್ಷೆ ಅಗತ್ಯ: ಸುಧಾಕರ್

ಬೆಂಗಳೂರು: ಕೊರೊನಾ ಸೋಂಕು ಪತ್ತೆಯಾದ ಕೆಲವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುತ್ತಿದ್ದು, ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದ 28 ಲಕ್ಷ ಜನರಿಗೆ ತಪಾಸಣೆ ಅಗತ್ಯವಾಗಿದ್ದು, ಈ ಮೂಲಕ ಕ್ಷಯ ಮುಕ್ತ ರಾಜ್ಯ ಮಾಡುವ ಗುರಿ ಹೊಂದಲಾಗಿದೆ. ಕೋವಿಡ್ ಶ್ವಾಸಕೋಶ ಸಂಬಂಧಿತ ರೋಗ, ಕ್ಷಯ ರೋಗ ಸಹ ಅದೇ ಅಂಗಕ್ಕೆ ಸಂಬಂಧಿತ ಖಾಯಿಲೆಯಾಗಿದೆ. ಭವಿಷ್ಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ

ಕೋವಿಡ್ ಬಂದವರೆಲ್ಲರಿಗೂ ಕ್ಷಯ ರೋಗ ಬರುತ್ತೆ ಎನ್ನುವುದು ಸರಿಯಲ್ಲ, ಕೆಲವರಿಗೆ ಮಾತ್ರ ಬರುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇದನ್ನು ಮಾಡಿಸಬೇಕಿದೆ. ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯ ತಪಾಸಣೆಗೆ ಮುಂದೆ ಬನ್ನಿ ಎಂದು ಕರೆ ನೀಡಿದರು.

ದೇಶದಲ್ಲೇ ವಿನೂತನ ಪ್ರಯತ್ನ ಇದಾಗಿದ್ದು, ರಾಜ್ಯ ಸರ್ಕಾರ ಮಾಡುತ್ತಿದೆ. ಸಕ್ರಿಯವಾಗಿರುವ ಕ್ಷಯ ರೋಗ ಪತ್ತೆ ಮಾಡುವುದು, ಕೋವಿಡ್ ಬಂದವರಿಂದ ಸಹ ಇದನ್ನು ಪತ್ತೆಹಚ್ಚಬೇಕಿದೆ. ಆಗಸ್ಟ್ 14ರಿಂದ 30ರ ವರೆಗೂ ಕ್ಷಯ ರೋಗ ತಪಾಸಣೆ ಅಭಿಯಾನ ನಡೆಯಲಿದೆ. ಕೊರೊನಾದಿಂದ 28 ಲಕ್ಷ ಜನ ಗುಣಮುಖರಾಗಿದ್ದಾರೆ, ಕಪ್ಪು ಶಿಲೀಂದ್ರ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯ ರೋಗ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

ದೊಡ್ಡ ಮಟ್ಟದಲ್ಲಿ ವ್ಯಾಪಿಸದ ರೀತಿಯಲ್ಲಿ ಅವರ ಅಭಿಪ್ರಾಯದಂತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಳೆದ ಐದು ವರ್ಷದಿಂದ ಕ್ಷಯ ರೋಗ ಹೆಚ್ಚಾಗಿದೆ. ಶೇ.33ರಷ್ಟು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೂ ನಾವು ಯಾವ ವೃತ್ತಿಯಲ್ಲಿ ಹೆಚ್ಚು ಬರಲಿದೆ ಎಂದು ತಪಾಸಣೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ ಮಾಡಲಾಗಿದ್ದು, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಸೋಂಕು ತಗುಲಿದ್ದಕ್ಕೆ ಮಂಗಳೂರು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಕೋವಿಡ್‍ಗೆ ಹೆದರಿ ಈ ರೀತಿ ಮಾಡಿದ್ದು ಸಾಧುವಲ್ಲ, ಕೊರೊನಾಗೆ ಹೆದರುವ ಅಗತ್ಯವಿಲ್ಲ. ಚಿಕಿತ್ಸೆ ಪಡೆಯಬಹುದು, ಕೋವಿಡ್ ಬಂದರೆ ಸಾಯುತ್ತಾರೆ ಎಂಬ ಭೀತಿಗೊಳಗಾಗಬಾರದು ಎಂದು ತಿಳಿಸಿದರು.

Source: publictv.in Source link