ಮೂವರ ವಿರುದ್ಧ ಹೈಕಮಾಂಡ್‍ಗೆ ಸಿಎಂ ದೂರು?

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರ ಅಸಮಾಧಾನ ಮುಂದುವರಿದಿದ್ದು, ಈ ಬಗ್ಗೆ ಹೈಕಮಾಂಡ್‍ಗೆ ದೂರು ನೀಡಲು ಮುಖ್ಯಮಂತ್ರಿಗಳು ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸಂಪುಟದಲ್ಲಿ ಬಯಸಿದ ಖಾತೆ ಸಿಗದ್ದಕ್ಕೆ ಮುನಿಸಿಕೊಂಡಿರುವ ಇಬ್ಬರು ಮತ್ತು ಸಚಿವ ಸ್ಥಾನ ತಪ್ಪಿದ್ದಕ್ಕೆ ಲಾಬಿಗೆ ಮುಂದಾಗಿರುವ ಒಬ್ಬರ ನಡೆಯ ಬಗ್ಗೆ ಹೈಕಮಾಂಡ್‍ಗೆ ವಿವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ – ಅರಗ ಜ್ಞಾನೇಂದ್ರ

ಆ ಮೂವರು, ಸಂಪುಟ ಬಿಕ್ಕಟ್ಟು:
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಸಿಎಂ ಮತ್ತು ಮಾಜಿ ಸಿಎಂ ಬಿಎಸ್‍ವೈ ಮನವಿ ಮೇರೆಗೆ ಆಗಸ್ಟ್ 15ರಂದು ಹೊಸ ಜಿಲ್ಲೆ ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಆನಂದ್ ಸಿಂಗ್, ಅಭೀ ಪಿಕ್ಚರ್ ಬಾಕೀ ಹೈ ಅನ್ನೋ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಆನಂದ್ ಸಿಂಗ್ ಅವರನ್ನ ಇರೋ ಖಾತೆಯಲ್ಲಿಯೇ ಮುಂದುವರಿಸಬೇಕಾ ಅಥವಾ ಬೇಡವಾ? ಒಂದು ವೇಳೆ ಖಾತೆ ಬದಲಾದ್ರೆ ಇನ್ನುಳಿದ ಸಚಿವರು ಮುನಿಸಿಕೊಂಡು ತಮಗೂ ಪ್ರಭಾವಿ ಖಾತೆ ಕೊಡುವಂತೆ ಉಳಿದ ಮಂತ್ರಿಗಳು ಬೇಡಿಕೆ ಇಡಬಹುದು. ಆದ್ರೆ ಖಾತೆ ಬದಲಿಸದೇ ಇದ್ದರೇ ಆನಂದ್ ಸಿಂಗ್ ರಾಜೀನಾಮೆ ಆತಂಕ ಸಹ ಮುಖ್ಯಮಂತ್ರಿಗಳಿಗೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ಸಿಡಿ ಪ್ರಕರಣದಿಂದಾಗಿ ಸಂಪುಟದಿಂದ ದೂರ ಉಳಿದಿರುವ ಶಾಸಕ ರಮೇಶ್ ಜಾರಕಿಹೊಳಿ ಸಹ ಮಂತ್ರಿಗಿರಿಗಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಇತ್ತ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್ ಲಾಬಿಗೆ ಮುಂದಾಗಿದ್ದಾರೆ. ಈ ಮೂವರಿಂದ ಸರ್ಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ನೀವೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಹೈಕಮಾಂಡ್‍ಗೆ ವರದಿ ಸಲ್ಲಿಸಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

blank

ಸರ್ಕಾರದ ಮೇಲೆ ಆರ್‍ಎಸ್‍ಎಸ್ ಹಿಡಿತ?:
ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಆರ್‍ಎಸ್‍ಎಸ್ ಹಿಡಿತ ಸಾಧಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಬೊಮ್ಮಾಯಿ ಆಪ್ತ ವಲಯದಲ್ಲಿ ಸಂಘ ಪರಿವಾರದ ಸೂಚಿಸಿದ ಸಚಿವರು ಇರಬೇಕು. ಆರ್‍ಎಸ್‍ಎಸ್ ಸೂಚಿಸಿದವರನ್ನೇ ಸುತ್ತಮುತ್ತ ನಿಯೋಜಿಸಿಕೊಳ್ಳುವಂತೆ ಸಿಎಂ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಸಿಎಂ ಕಚೇರಿ, ಸಚಿವರ ಕಚೇರಿಯಲ್ಲಿ ಸಂಘ ಸೂಚಿತರಿಗೆಷ್ಟೇನಾ ಜಾಗ ಮೀಸಲಿಡುವ ಮೂಲಕ ಎಲ್ಲರ ಮೇಲೆ ನೇರ ನಿಗಾ ಇಡುವ ಸಲುವಾಗಿ ಆರ್‍ಎಸ್‍ಎಸ್ ತಂತ್ರ ರಚಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜೆಡಿಎಸ್‍ಗೆ ಬಿಗ್ ಶಾಕ್ ಕೊಡಲು ಡಿಕೆಶಿ ರಣತಂತ್ರ

Source: publictv.in Source link