‘ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ’- ತಾಲಿಬಾನ್​ ಸುದ್ದಿಗೋಷ್ಠಿ

‘ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ’- ತಾಲಿಬಾನ್​ ಸುದ್ದಿಗೋಷ್ಠಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನ ನಡೆಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್.. 20 ವರ್ಷಗಳ ನಿರಂತರ ಹೋರಾಟದಿಂದ ನಾವು ನಮ್ಮ ದೇಶವನ್ನ ವಿಮೋಚನೆಗೊಳಿಸಿದ್ದೇವೆ. ನಮಗೆ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ.. ನಾವು ಐತಿಹಾಸಿಕ ಘಟ್ಟವೊಂದರಲ್ಲಿ ಇದ್ದೇವೆ.

ಅಫ್ಘಾನಿಸ್ತಾನದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡುತ್ತೇವೆ. ನಾವು ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ. ತಾಲಿಬಾನ್​ನ ಉಪ ಸಂಸ್ಥಾಪಕ ಮುಲ್ಲಾಹ್ ಅಬ್ದುಲ್ ಗನಿ ಬರಾದರ್ ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದಾರೆ. ಈ ಹಿಂದೆ ನಮ್ಮ ವಿರುದ್ಧ ಹೋರಾಡಿದವರನ್ನೆಲ್ಲ ನಾವು ಕ್ಷಮಿಸಿದ್ದೇವೆ.

ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ.. ಇದು ಧನಾತ್ಮಕ ಬದಲಾವಣೆಯಾಗಿರಲಿದೆ. ಪ್ರತಿಯೊಬ್ಬ ಅಫ್ಘನ್ ಪ್ರಜೆಯೂ ಉತ್ತಮ ಬದುಕು ನಡೆಸಲು ಬಯಸುತ್ತಾನೆಂದು ನಮಗೆ ತಿಳಿದಿದೆ. ನಮ್ಮ ದೇಶದ ಆರ್ಥಿಕತೆ ಬದಲಿಸಲು ಕೆಲವು ಮುಖ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಶರಿಯಾ ನಿಯಮಗಳ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ನಾವು ಕಟಿಬದ್ಧರಾಗಿದ್ದೇವೆ. ಮಹಿಳೆಯರು ಶರಿಯಾ ನಿಯಮಗಳಂತೆ ನಡೆದುಕೊಳ್ಳಬೇಕು. ನಾವು ಮಹಿಳೆಯರಿಗೆ ಕೆಲಸ ಮಾಡಲು, ಓದಲು ಅವಕಾಶ ನೀಡುತ್ತೇವೆ. ಆದರೆ ಇದು ಕಾರ್ಯಚಟುವಟಿಕೆಯ ವ್ಯಾಪ್ತಿಯಲ್ಲಿರಬೇಕು. ಸಮಾಜದಲ್ಲಿ ಮಹಿಳೆಯರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಆದ್ರೆ ಶರಿಯಾ ನಿಯಮಗಳ ವ್ಯಾಪ್ತಿಯಲ್ಲಿರುತ್ತಾರೆ.

ನಾವು ಅಫ್ಘಾನಿಸ್ತಾನದಲ್ಲಿ ಗಲಭೆ ಎಬ್ಬಿಸುತ್ತಿರುವ, ಲೂಟಿ ಹೊಡೆಯುತ್ತಿರುವವರನ್ನ ಕಂಟ್ರೋಲ್ ಮಾಡಬೇಕಿದೆ. ಅದಕ್ಕಾಗಿ ನಾವು ಈಗಾಗಲೇ ಆಪರೇಷನ್ ಪ್ರಾರಂಭಿಸಿದ್ದೇವೆ.

Source: newsfirstlive.com Source link