ಭಾರತದಲ್ಲೂ ತಾಲಿಬಾನ್ ಮಾದರಿ ಸಂಘಟನೆಗಳಿವೆ-ವಿವಾದಾತ್ಮಕ ಹೇಳಿಕೆ ನೀಡಿದ ಕೈ ವಿಧಾನ ಪರಿಷತ್​ ಸದಸ್ಯ

ಭಾರತದಲ್ಲೂ ತಾಲಿಬಾನ್ ಮಾದರಿ ಸಂಘಟನೆಗಳಿವೆ-ವಿವಾದಾತ್ಮಕ ಹೇಳಿಕೆ ನೀಡಿದ ಕೈ ವಿಧಾನ ಪರಿಷತ್​ ಸದಸ್ಯ

ಬೆಂಗಳೂರು: ಭಾರತದಲ್ಲೂ ತಾಲಿಬಾನ್ ಮಾದರಿ ಸಂಘಟನೆಗಳಿವೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ‌.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿ‌.ಕೆ. ಹರಿಪ್ರಸಾದ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದರು. ಈವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಬಿ‌.ಕೆ. ಹರಿಪ್ರಸಾದ್ ಟೀಕಾಸ್ತ್ರಗಳ ಸುರಿಮಳೆ ಗೈದಿದ್ದಾರೆ. ಈ ವೇಳೆ ಭಾರತದಲ್ಲೂ ತಾಲಿಬಾನ್ ಮಾದರಿ ಸಂಘಟನೆಗಳಿವೆ. ಅದು ಯಾವ ಸಂಘಟನೆಗಳು ಅನ್ನೋದನ್ನ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದಿದ್ದಾರೆ.

ಈ ಬಾರಿ‌‌ ಸಂಸತ್ತಿನ‌ ಅಧಿವೇಶನವನ್ನು ಕೇಂದ್ರ ಸರ್ಕಾರ, ಯಾವ ರೀತಿ ನಡೆಸಿದೆ ಅಂತ ದೇಶದ ಜನ ನೋಡಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆದ ಘಟನೆಗಳನ್ನು ಜನ ನೋಡಿದ್ದಾರೆ. ವಿಪಕ್ಷಗಳಿಗೆ ಅನಿಸಿಕೆ ಹೇಳಲು ಅವಕಾಶ ಕೊಡಬಾರದೆಂದೇ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ ಎಂದು ಅವರು ಟೀಕಿಸಿದ್ದಾರೆ.

ಮುಂದುವರೆದು ಮಾತನಾಡಿ 56 ಇಂಚಿನ ಪ್ರಧಾನಿ ಮೋದಿ ಈ ಏಳು ವರ್ಷಗಳಲ್ಲಿ ಒಮ್ಮೆಯೂ ಪತ್ರಕರ್ತರ ಎದುರು ನಿಂತು ಪ್ರಶ್ನೆಗಳ ಎದುರಿಸುವ ಧೈರ್ಯ ಮಾಡಿಲ್ಲ. ಪೆಗಸಸ್ ಬಗ್ಗೆ ಈ ಹಿಂದೆಯೂ ಪ್ರಶ್ನೆ ಕೇಳಿದ್ದೆವು, ಆದರೆ ಸರ್ಕಾರ ಚರ್ಚೆಗೆ ಅವಕಾಶ ಕೊಟ್ಟಿರಲಿಲ್ಲ. ಯುಪಿಎ ಸರ್ಕಾರ ಇದ್ದಾಗ ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಅವಕಾಶ ಸಿಗದಿದ್ದಾಗ, ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಗಳಲ್ಲಿ ಚರ್ಚೆ ಮಾಡಲಾಗ್ತಿತ್ತು. ಆದರೆ ಈ ಸರ್ಕಾರ ಆ ರೀತಿಯ ಚರ್ಚೆಗಳಿಗೆ ಅವಕಾಶ ಕೊಡ್ತಿಲ್ಲ ಎಂದರು.

ಜನರ ಮಾತುಗಳ ಹೇಳಲು ಅವಕಾಶ ಕೊಡಬೇಕಿತ್ತು

ಪೀಠದ ಅಧ್ಯಕ್ಷರ ಹಾಗು ಸರ್ಕಾರದ ಮೂಲಭೂತ ಜವಾಬ್ದಾರಿ ಸದನದ ಕಲಾಪ ನಡೆಸೋದು. ಆದರೆ ಇವರಿಗೆ ಸದನ ನಡೆಸಲು ಬರೋದಿಲ್ಲ.‘ಅಪೋಸಿಷನ್ ಹ್ಯಾಸ್ ಇಟ್ಸ್ ಸೇ, ಗೌರ್ಮೆಂಟ್ ಹ್ಯಾಸ್ ಇಟ್ಸ್ ವೇ’ ಎಂಬ ಮಾತಿದೆ. ನಾವು ಹೇಳಿದ್ದೆಲ್ಲ ಕೇಳಿ ಅನ್ನಲ್ಲ, ಆದರೆ ಜನರ ಮಾತುಗಳ ಹೇಳಲು ಅವಕಾಶ ಕೊಡಬೇಕಿತ್ತು ಎಂದು ಹರಿಪ್ರಸಾದ್ ಹೇಳಿದ್ದಾರೆ.

ಓ.ಬಿ.ಸಿ ಬಿಲ್ ನೀರಲ್ಲಿ ಬೆರಳಿಟ್ಟು ಬಾಯಲ್ಲಿ ಇಟ್ಟುಕೊಂಡಂತಿದೆ

ಇನ್ನು ಓ.ಬಿ.ಸಿ. ಬಿಲ್​ ಕುರಿತು ಮಾತನಾಡಿದ ಅವರು ಓ.ಬಿ.ಸಿ ಬಿಲ್ ನೀರಲ್ಲಿ ಬೆರಳಿಟ್ಟು ಬಾಯಲ್ಲಿ ಇಟ್ಟುಕೊಂಡಂತಿದೆ, ಓ.ಬಿ.ಸಿ. ಬಿಲ್​ಲ್ಲಿ ಏನೂ ಇಲ್ಲ. ಅದರ ಮೂಲಕ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ನ್ಯಾಯಸಮ್ಮತ ಸೌಲಭ್ಯ ಸಿಗುವಂತೆ ಮಾಡಿಲ್ಲ. ಇದರಿಂದ ರಾಷ್ಟ್ರದಲ್ಲಿ ಮಾರ್ಷಲ್ ಆಡಳಿತ ತರಲು ಮೋದಿ ಸರ್ಕಾರ ಮುಂದಾಗಿದೆಯೇ..? ಎಂದು ಬಿ‌.ಕೆ. ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

ಇಂತಹ ರಣಹೇಡಿ ನಾಯಕರ ನಾಯಕತ್ವ ಹಿಂದೆಂದೂ ಇರಲಿಲ್ಲ

ಈ ದೇಶದ ಇತಿಹಾಸದಲ್ಲಿ ಇಂತಹ ರಣಹೇಡಿ ನಾಯಕರ ನಾಯಕತ್ವ ಹಿಂದೆಂದೂ ಇರಲಿಲ್ಲ. ಈ ಬಾರಿ ಸದನಕ್ಕೆ ಪ್ರಧಾನಿ ಹಾಗೂ ಗೃಹ ಮಂತ್ರಿ ಇಬ್ಬರೂ ಬರಲಿಲ್ಲ. ಅಫಘಾನಿಸ್ತಾನದಲ್ಲಿ ಆಗ್ತಿರೋ ಬೆಳವಣಿಗೆ ಬಗ್ಗೆ ಈ ದೇಶದ ಪ್ರಧಾನಿ ಏನೂ ಮಾತಾಡ್ತಿಲ್ಲ, ಮತ್ತು ಅಲ್ಲಿ ಕೆಲಸ ಮಾಡ್ತಿರೋ ಭಾರತೀಯರ ಕರೆತರಲೂ ಇವರ ಕೈಯಲ್ಲಿ ಆಗ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಮೀನಾಕ್ಷಿ ಲೇಖಿ ಕೂಡ ರೈತರನ್ನು ದಲ್ಲಾಳಿಗಳು ಎಂದಿದ್ದಾರೆ

ಇನ್ನು ಸಚಿವೆ ಶೋಭಾ ಕರಂದ್ಲಾಜೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ರೈತರೇ ಅಲ್ಲ ಎಂಬ ಹೇಳಿಕೆಗೆ, ಶೋಭಕ್ಕೆ ಒಬ್ಬರೇ ಅಲ್ಲ, ಮೀನಾಕ್ಷಿ ಲೇಖಿ ಕೂಡ ರೈತರನ್ನು ದಲ್ಲಾಳಿಗಳು ಎಂದಿದ್ದಾರೆ. ಇವರಿಗೆಲ್ಲ ಮುಂದೆ ಉತ್ತರ ಕೊಡುವುದಾಗಿ ಹೇಳಿದ್ದಾರೆ.

ಸಚಿವ ಕೆ.ಎಸ್​. ಈಶ್ವರಪ್ಪ, ಹರಿಪ್ರಸಾದ್​ ಅವಾಚ್ಯ ಶಬ್ದ ಪ್ರಯೋಗಿಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಇಂತಹ ವೈಯಕ್ತಿಕ ದಾಳಿ ನನ್ನ ವಿದ್ಯಾರ್ಥಿ ಸಂಘಟನೆಯ ದೆಸೆಯಿಂದಲೇ ನಡೀತಿದೆ. ನಲವತ್ತೈದು ವರ್ಷಗಳಿಂದ ನನ್ನದೇನಾದರೂ ಸಿಗುತ್ತಾ ಅಂತ ಹುಡುಕ್ತಿದ್ದಾರೆ, ಆದರೆ ಅವರಿಗೆ ಏನೂ ಸಿಕ್ತಿಲ್ಲ. ಈಶ್ವರಪ್ಪ ಹೇಳಿಕೆಗೆ ಉತ್ತರ ಕೊಡಲು ಇನ್ನೊಮ್ಮೆ ಸುದ್ದಿಗೋಷ್ಟಿ ಕರೆಯುತ್ತೇನೆ, ಈಶ್ವರಪ್ಪಗೆ ಹಾಗೂ ಸಿಟಿ ರವಿಗೆ ಇನ್ನೊಮ್ಮೆ ಉತ್ತರ ಕೊಡೋಣ ಎಂದಿದ್ದಾರೆ.

Source: newsfirstlive.com Source link