ಕೈ ನಾಯಕರಿಗೆ ಸಿ.ಟಿ. ರವಿ ಪ್ರತ್ಯುತ್ತರ – ಮಾನನಷ್ಟ ಮೊಕದ್ದಮೆ ಎಚ್ಚರಿಕೆ

– ಸಿ.ಟಿ. ರವಿ ಮೇಲೆ ಮದ್ಯಪಾನ, ಬೇನಾಮಿ ಆಸ್ತಿ ಗಳಿಕೆ ಆರೋಪ ಮಾಡಿದ್ದ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

4 ಪುಟಗಳ ಪತ್ರಿಕಾ ಹೇಳಿಕೆಯಲ್ಲೇನಿದೆ..?: ಸಿ.ಟಿ. ರವಿ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಪತ್ರದ ಪೂರ್ಣರೂಪ ಹೀಗಿದೆ.

‘ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಿ ಬಂದಂತೆ’… ಎಂಬ ಗಾದೆ ಕೆಪಿಸಿಸಿ ನಾಯಕರಿಗೆ ಅನ್ವಯಿಸುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾಡ್ಡಿ, ಮಾಜಿ ಸಂಸದ ದ್ರುವನಾರಾಯಣ್ ಮತ್ತು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಸುಳ್ಳುಗಳನ್ನೇ ನೂರು ಬಾರಿ ಸತ್ಯ… ಸತ್ಯ… ಸತ್ಯ… ಎಂದು ಹೇಳುತ್ತಲೇ ಸುಳ್ಳಿನ ಸರಮಾಲೆಗಳನ್ನು ಪೋಣಿಸುತ್ತಾ, ಸುಳ್ಳುಗಳನ್ನು ಸಮಾಜದಲ್ಲಿ ಬಿತ್ತುತ್ತ… ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಸುಳ್ಳುಗಳೇ ಅವರ ಬಂಡವಾಳ… ದಿನ ನಿತ್ಯ ಏನಾದರೂ ಒಂದು ಕೆದಕಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳುವ ಮೂಲಕ ತಮ್ಮ ಹೈ ಕಮಾಂಡ್ ಗೆ ನಾವು ಸಹ ವಿರೋಧ ಪಕ್ಷದಲ್ಲಿ ಇದ್ದೇವೆ. ಮಾತನಾಡಲು ನಮಗೂ ಬರುತ್ತದೆ ಎಂದು ತೋರಿಸಿಕೊಳ್ಳಲು ಪೈಪೋಟಿಗೆ ಬಿದ್ದವರಂತೆ ಆರೋಪಗಳನ್ನು ಮಾಡುತ್ತಲೇ ಪ್ರಚಾರ ಪ್ರಿಯರಾಗುತ್ತಿದ್ದಾರೆ.

ಸಿಟಿ ರವಿ ಅವರೇ ಮದ್ಯಪಾನ ಮಾಡಿ ಕಾರು ಓಡಿಸುತ್ತಿದ್ದರು ಎಂದು ಕಥೆಕಟ್ಟಿ ಈಗ ಅಪ ಪ್ರಚಾರ ಮಾಡುತ್ತಿದ್ದು, ಈ ಘಟನೆ ಬಗ್ಗೆ ನಾನು ಅಂದೇ ಸ್ಪಷ್ಟನೆ ನೀಡಿದ್ದೇನೆ. 2019 ರ ಫೆಬ್ರವರಿ 18 ಸೋಮವಾರ ರಾತ್ರಿ 11.30ರ ಸುಮಾರಿಗೆ ಚಿಕ್ಕಮಗಳೂರಿನಿಂದ ಬೆಂಗಳೂರಿನ ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಗಲು ಕಾರು ಹತ್ತಿದೆವು. ಕಾರಿನಲ್ಲಿ ಗನ್ ಮ್ಯಾನ್ ರಾಜಾ ನಾಯ್ಕ ಇದ್ದರು. ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಊರ್ಕೇನಹಳ್ಳಿ ಬಳಿ ರಸ್ತೆ ನಡುವೆ ನಿಂತಿದ್ದ ಕಾರಿಗೆ ನನ್ನ ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ನಿಂದ ಅಪಘಾತವಾಗಿದ್ದು ಅನಿರೀಕ್ಷಿತ. ಅದು ಉದ್ದೇಶ ಪೂರ್ವಕ ಅಪಘಾತವಲ್ಲ.

ನಾನು ಕಾರಿನಲ್ಲಿ ನಿದ್ದೆಗೆ ಜಾರಿದಾಗ ಅಪಘಾತವಾಗಿತ್ತು. ಏರ್ ಬ್ಯಾಗ್ ಓಪನ್ ಆದಾಗಲೇ ನನಗೆ ಗೊತ್ತಾಗಿದ್ದು ಕಾರು ಅಪಘಾತವಾಗಿದೆ ಎಂದು. ತಕ್ಷಣವೇ ಪೊಲೀಸರಿಗೆ ಮತ್ತು ಅಂಬುಲೆನ್ಸ್‍ಗೆ ಫೋನ್ ಮಾಡಿ ಮೃತ ದೇಹಗಳನ್ನು ಮತ್ತು ಅಪಘಾತದಲ್ಲಿ ಗಾಯಗೊಂಡವರನ್ನು ಅಂಬುಲೆನ್ಸ್‍ನಲ್ಲಿ ಕೂರಿಸಿ ಆಸ್ಪತ್ರೆಗೆ ದಾಖಲಿಸಿದ ಮೇಲೆಯೇ ನಾನು ನನಗೆ ತಲೆಯ ಹಿಂಬಾಗದಲ್ಲಿ ಮತ್ತು ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡ ಕಾರಣ ಬೆಂಗಳೂರಿಗೆ ತೆರಳಿ ವಿಕ್ರಂ ಆಸ್ಪತ್ರೆಗೆ ದಾಖಲಾದೆ.

blank

ಅಪಘಾತವಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್‍ಪಿ ರಾಮಲಿಂಗೇಗೌಡ, ಸಿಪಿಐ ಆಶೋಕ್ ಕುಮಾರ್, ಪಿಎಸ್‍ಐ ಪುಟ್ಟೇಗೌಡ ಭೇಟಿ ನೀಡಿದ್ದರು. ಅಪಘಾತ ಸಂಬಂಧ ಚಾಲಕನನ್ನು ವಿಚಾರಣೆಗೆ ಮಾಡಿದರು. ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿರಬಹುದು ಎಂಬ ಬಗ್ಗೆ ಖಾತರಿ ಮಾಡಿಕೊಳ್ಳುವ ಉದ್ದೇಶದಿಂದ ರಕ್ತ ಹಾಗೂ ಯೂರಿನ್ ಸ್ಯಾಂಪಲ್‍ಗಳನ್ನು FSL ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಿದ್ದರು. ಅದರ ವರದಿಯಲ್ಲಿ ಮದ್ಯಪಾನ ಮಾಡಿಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದರು. ಇದು ಪೊಲೀಸ್ ಇಲಾಖೆಯ ದಾಖಲೆಯಲ್ಲಿಯೇ ಇದೆ. ಅಷ್ಟೇ ಅಲ್ಲ ಅಪಘಾತವಾದಾಗ ನಾನು ಕಾರು ಚಲಾಯಿಸುತ್ತಿದ್ದೆ ಎಂದು ಕಾಂಗ್ರೆಸ್ ಮುಖಂಡರ ಆರೋಪ ಮಾಡುತ್ತಿದ್ದಾರೆ. ಚಾಲಕನಿರುವಾಗ ನಾನು ಕಾರು ಚಲಾಯಿಸುವುದಿಲ್ಲ. ಅತ್ಯಂತ ಜರೂರು ಸಂದರ್ಭದಲ್ಲಿ ನಾನು ಸ್ಥಳೀಯವಾಗಿ ಚಿಕ್ಕಮಗಳೂರಿನ ಸುತ್ತಮುತ್ತ ವಾಹನ ಚಾಲನೆ ಮಾಡಿದ್ದೇನೆ ಅದು ದೂರ ಪ್ರಯಾಣ ಮಾಡುವಾಗ ಎಂದಿಗೂ ನಾನು ಕಾರು ಚಲಾಯಿಸುವುದಿಲ್ಲ.

ಒಂದು ಪಕ್ಷ ಆ ದಿನ ನಾನು ಕಾರು ಚಲಾಯಿಸುತ್ತಿದ್ದೆ ಎಂದಾದರೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಸಿಗ್ನಲ್‍ಗಳಲ್ಲಿ, ಟೂಲ್ ಗೇಟ್ ಗಳಲ್ಲಿ ಅಲ್ಲದೇ ಸಾರ್ವಜನಿಕರು ಸೇರುವ ಮತ್ತಿತರ ಪ್ರದೇಶಗಳಲ್ಲಿ ನೂರಾರು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕಾಂಗ್ರೆಸ್ ಮುಖಂಡರಿಗೆ ಇನ್ನು ಅನುಮಾನಗಳಿದ್ದರೆ ಅವುಗಳನ್ನು ಪರಿಶೀಲಿಸಬಹುದು. ಅಪಘಾತವಾದ ವರ್ಷ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಕಾಂಗ್ರೆಸ್ ನವರೇ ಗೃಹ ಸಚಿವರು ಇದ್ದರು ಆಗ ಆರೋಪ ಮಾಡದ ಕಾಂಗ್ರೆಸ್ ನಾಯಕರು ಈಗ ನನ್ನ ಮೇಲೆ ಮುಗಿ ಅಪಘಾತವಾದ ಘಟನೆಯನ್ನೇ ದೊಡ್ಡದು ಮಾಡಿ, ವಾಸಿಯಾಗಿರುವ ಗಾಯವನ್ನೇ ಮತ್ತೆ ಮತ್ತೆ ಕೆದಕಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

blank

ನನಗೆ ಮದ್ಯಪಾನ ಮಾಡುವ ಅಭ್ಯಾಸವೇ ಇಲ್ಲ. ಕುಡಿಯುವವರನ್ನು ನನ್ನ ಜೊತೆ ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ. ಇವರಿಗೆ ಕುಡಿಯುವ ಅಭ್ಯಾಸ ಇದ್ದರೆ ಕುಡಿದ ನಂತರ ಇಂತಹ ಆಲೋಚನೆಗಳು ಬರುವುದು ಸಹಜ ಇರಬೇಕು. ಅಧಿಕಾರವಿಲ್ಲ ಕೆಲಸವಿಲ್ಲ ಮದ್ಯ ಹೊಟ್ಟೆಗೆ ಸೇರಿದ ಮೇಲೆ ನಾಳೆ ಏನು ಆರೋಪ ಮಾಡಬೇಕು ಎಂಬುವ ದುರಾಲೋಚನೆ. ಹೊಸ ಹೊಸ ಕುತಂತ್ರಗಳು ಅವರ ಮಿದುಳಿನಲ್ಲಿ ಹುಟ್ಟುತ್ತವೆ. ಇದಕ್ಕೆ ಪೂರಕವಾಗಿ ಮನಶಾಸ್ತ್ರದಲ್ಲೇ ಮದ್ಯಪಾನ ಮಾಡಿದ ವ್ಯಕ್ತಿಯ ವರ್ತನೆ, ಆಲೋಚನೆಗಳ ಬಗ್ಗೆ ಅಧ್ಯಯನಗಳ ಉಲ್ಲೇಖವಿದೆ. ಅನೇಕ ಮನಃಶಾಸ್ತ್ರಜ್ಞರು ತಮ್ಮ ಸಿದ್ದಾಂತಗಳನ್ನು ಮಂಡಿಸಿದ್ದಾರೆ.

ನಾನು ಮದ್ಯಪಾನ ಮಾಡಿ ಕಾರು ಓಡಿಸುತ್ತಿದ್ದೆ ಎಂದು ಆರೋಪ ಮಾಡಿ ಹಳೆಯ ಘಟನೆಗಳನ್ನು ಕೆದಕುವ ಕಾಂಗ್ರೆಸ್ ನಾಯಕರಿಗೆ ಕುಡಿತದ ಚಾಳಿ ಇದೆಯೇ? ಆದರೆ ನನಗಂತೂ ಇಲ್ಲ. ನಾನು ಎಂದೂ ಮದ್ಯಪಾನ ಮಾಡಿಲ್ಲ. ಮಾಡುವುದೂ ಇಲ್ಲ. ಈ ಸಂಬಂಧ ಮಾಧ್ಯಮಗಳಿಗೂ ನಾನು ಅನೇಕ ಬಾರಿ ಸ್ಪಷ್ಟನೆ ನೀಡಿದ್ದೇನೆ.

ಕೆಲವು ಮಾಧ್ಯಮಗಳಲ್ಲಿ ಘಟನೆಯ ನಂತರ ಸಿಟಿ ರವಿ ಬೇರೊಂದು ಕಾರಿನಲ್ಲಿ ಅಪಘಾತಕ್ಕೀಡಾದವರನ್ನು ವಿಚಾರಿಸದೆ ಬೆಂಗಳೂರಿಗೆ ಪರಾರಿಯಾದರು ಎಂದು ವರದಿ ಮಾಡಲಾಗಿತ್ತು. ಆದರೆ ನಾನು ಸ್ಥಳದಲ್ಲೇ ಇದ್ದೆ ಎಂಬುದಕ್ಕೆ ಅನೇಕ ವಿಡಿಯೋಗಳೇ ಸಾಕ್ಷಿಯಾಗಿದೆ. ಪೊಲೀಸ್ ದಾಖಲೆಗಳಿವೆ. ಅಪಘಾತ ಎನ್ನುವುದು ಉದ್ದೇಶಪೂರ್ವಕವಾಗಿ ಮಾಡುವ ಕೆಲಸವಲ್ಲ. ಅದೊಂದು ಅನಿರೀಕ್ಷಿತವಾಗಿ ಆಗುವಂತಹ ಘಟನೆ. ಅಂದು ದುರದೃಷ್ಟವಶಾತ್ ಈ ಘಟನೆ ಸಂಭವಿಸಿತು. ಆ ಘಟನೆ ಸಂಬಂಧ ಇಂದಿಗೂ ನನಗೆ ಬೇಸರವಿದೆ.

blank

ಘಟನೆಯ ನಂತರ ಮೃತರ ದೇಹವನ್ನು ಪೊಲೀಸರು ವಶಕ್ಕೆ ಪಡೆಯುವವರೆಗೂ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಜೊತೆಯಲ್ಲೇ ನಾನು ಇದ್ದು ಸಹಕರಿಸಿದ್ದೇನೆ. ಪೊಲೀಸರ ಬಳಿ ದಾಖಲೆ ಮತ್ತು ವಿಡಿಯೋಗಳಿವೆ ಕಾಂಗ್ರೆಸ್ ನಾಯಕರಿಗೆ ಅನುಮಾನವಿದ್ದರೆ ದಾಖಲೆಗಳನ್ನು ಪಡೆದುಕೊಳ್ಳಬಹುದು. ಮೃತರ ಕುಟುಂಬದ ಸದಸ್ಯರನ್ನು ನಾನು ಭೇಟಿ ಮಾಡಿ ನಾವು ಆರ್ಥಿಕ ಸಹಾಯ ಮಾಡಿ ಸಾಂತ್ವನ ಹೇಳಿ ಬಂದಿದ್ದೇನೆ.

ಎಲುಬಿಲ್ಲದ ನಾಲಗೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು. ಸುಳ್ಳು ಹೇಳುವುದು ಕಾಂಗ್ರೆಸ್ ನಾಯಕರಿಗೆ ರಕ್ತದಿಂದಲೇ ಬೆಳೆದು ಬಂದಿದೆ. ಅದನ್ನು ಈಗ ಬದಲಿಸುವುದು ಸಾಧ್ಯವಿಲ್ಲ. ಅಂದಿನ ಅಪಘಾತದಲ್ಲಿ ನನಗೂ ಎದೆಗೆ ಸಣ್ಣ ಗಾಯವಾಗಿತ್ತು. ಅದಕ್ಕೆ ವೈದ್ಯಕೀಯ ದಾಖಲೆಗಳಿವೆ. ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಮಹಜರ್ ಮಾಡಿ ನಂತರ ಸ್ಥಳೀಯರಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಹೇಳಿಕೆ ಆಧಾರದಲ್ಲಿ ಎಫ್‍ಐಆರ್‍ನಲ್ಲೇ ಸಿಟಿ ರವಿ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಬುದ್ಧಿವಂತ ರಾಜಕಾರಣಿ: ಸಿ.ಟಿ ರವಿ

ಪೊಲೀಸ್ ದಾಖಲೆಗಳನ್ನು ನಂಬದ ಕಾಂಗ್ರೆಸ್ ಮುಖಂಡರಿಗೆ ಈ ನೆಲೆದ ಕಾನೂನಿನ ಮೇಲೆ, ಪೊಲೀಸ ಇಲಾಖೆಯ ಮೇಲೆ ಎಳ್ಳಷ್ಟೂ ಗೌರವವಿಲ್ಲ. ಆರೋಪ ಮಾಡುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಮಾಜಿ ಸಂಸದ ದ್ರುವನಾರಾಯಣ್ ಮತ್ತು ವಕ್ತಾರ ಲಕ್ಷ್ಮಣ್ ಮತ್ತಿತರ ಕಾಂಗ್ರೆಸಿಗರು ನನ್ನ ಮೇಲೆ ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಅವರ ಮೇಲೆ ನ್ಯಾಯಾಲಯದಲ್ಲಿ ಮಾನ ನಷ್ಟ ಮೊಕದ್ದಮೆ ಹೂಡುವ ಬಗ್ಗೆ ನನ್ನ ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ.

blank

ಇನ್ನು ನಾನು 1000 ಕೋಟಿ ಆಸ್ತಿ ಮಾಡಿದ್ದೇನೆ ಎಂದು ಸುದ್ದಿ ವಾಹಿನಿಗೆ ಮಾತನಾಡುವ ವೇಳೆ ಕೆಪಿಸಿಸಿ ವಕ್ತಾರ ಬ್ರಿಜೇಷ್ ಕಾಳಪ್ಪ ಪುಂಖಾನುಪುಂಖವಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರ ಹೇಳಿಕೆಗೂ ಈ ವೇಳೆ ಸಷ್ಟನೆ ನೀಡುತ್ತಿದ್ದೇನೆ. ನನ್ನ ಬಳಿ ಬೇನಾಮಿ ಆಸ್ತಿ ಇದ್ದರೆ ಕಾಂಗ್ರೆಸ್ ನಾಯಕರು ದಾಖಲೆ ಸಹಿತ ಚರ್ಚೆಗೆ ಬರಲಿ. ಅದು ಸ್ಪಷ್ಟವಾಗಿದ್ದರೆ ಅದನ್ನು ಅವರಿಗೆ ದಾನ ಕೊಟ್ಟುಬಿಡುತ್ತೇನೆ. ಅವರ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಅವರ ಮೇಲೂ ಮಾನನಷ್ಟ ಮೊಕದ್ದಮೆಯನ್ನು ಹಾಕಲು ನನ್ನ ವಕೀಲರಲ್ಲಿ ಚರ್ಚಿಸಿದ್ದೇನೆ.

ಬೇನಾಮಿ ಆಸ್ತಿ ಮಾಡುವುದು ಕಾಂಗ್ರೆಸ್ ನಾಯಕರ ತಲೆಮಾರುಗಳಿಂದ ನಡೆದು ಕೊಂಡು ಬಂದಿರುವ ರೂಢಿ ಪದ್ಧತಿ. ಅಕ್ರಮ ಆಸ್ತಿ ಸಂಪಾದಿಸಿ ಜೈಲು ಸೇರಿರುವ ಮತ್ತು ಬೈಲ್ ಮೇಲೆ ಇರುವ ಕಾಂಗ್ರೆಸ್ ನ ನಾಯಕರ ಬಗ್ಗೆ ಬ್ರಿಜೇಷ್ ಕಾಳಪ್ಪನವರಿಗೆ ಗೊತ್ತಿಲ್ಲವೇ? ತಾನು ಕಳ್ಳ ಪರರ ನಂಬ ಅನ್ನುವ ಕಾಂಗ್ರೆಸಿಗರ ಮನಸ್ಥಿತಿಯಲ್ಲಿ ತಮ್ಮಂತೆಯೇ ಎಲ್ಲರೂ ಕಳ್ಳ ರು ಎನ್ನುವ ಭಾವನೆಯಲ್ಲಿದ್ದಾರೆ.

blank

ನಿಮ್ಮ ಪಕ್ಷದ ಬಿಳಿ ಆನೆಗಳ ಅಕ್ರಮ ಆಸ್ತಿಯನ್ನು ಬಹಿರಂಗಪಡಿಸಿ ನಂತರ ಬೇರೊಬ್ಬರ ಬಗ್ಗೆ ಮಾತನಾಡಿ. ಕೆಲವರು ಈಗಾಗಲೇ ಈ ಬಗ್ಗೆ ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳೆಲ್ಲವೂ ವಜಾವಾಗಿದೆ. ಅಲ್ಲದೇ ಲೋಕಾಯಕ್ತ ರಲ್ಲಿ ಕೆಲ ವ್ಯಕ್ತಿಗಳು ಸಲ್ಲಿಸಿದ್ದ ಎರಡು ಪ್ರಕರಣಗಳಿಗೂ ಈಗಾಗಲೇ ಬಿ ರಿಪೋರ್ಟ್ ಬಂದಿದೆ. ಅದಕ್ಕೆ ನಾವು ನ್ಯಾಯಾಲಯದಲ್ಲಿ ಇವರಿಗೆ ಸಾಕ್ಷಿ ಸಹಿತ ತಕ್ಕ ಉತ್ತರವನ್ನೇ ಕೊಟ್ಟಿದ್ದೇವೆ. ಆದರೂ ಸಹ ನಿರಾಧಾರವಾಗಿ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರ ನೈತಿಕತೆಯನ್ನು ನಾನು ಪ್ರಶ್ನಿಸುತ್ತೇನೆ.

Source: publictv.in Source link