ಅಫ್ಘಾನ್ ಪ್ರಜೆಗಳು ನುಸುಳದಂತೆ 295 ಕಿಮೀ ಬೃಹತ್ ಗೋಡೆ ನಿರ್ಮಿಸಲು ಮುಂದಾದ ಟರ್ಕಿ

ಅಫ್ಘಾನ್ ಪ್ರಜೆಗಳು ನುಸುಳದಂತೆ 295 ಕಿಮೀ ಬೃಹತ್ ಗೋಡೆ ನಿರ್ಮಿಸಲು ಮುಂದಾದ ಟರ್ಕಿ

ಅಫ್ಘಾನಿಸ್ತಾನದ ಪ್ರಜೆಗಳ ನುಸುಳುವಿಕೆಯನ್ನ ತಡೆಯಲು ಟರ್ಕಿ, ಇರಾನಿಯನ್ ಗಡಿ ಪ್ರದೇಶದವನ್ನು ಒಳಗೊಂಡಂತೆ 295 ಕಿಲೋ ಮೀಟರ್ ಉದ್ದದ ಬೃಹತ್ ಗೋಡೆ ನಿರ್ಮಾಣಕ್ಕೆ ಮುಂದಾಗಿದೆ.

ಇರಾನ್ ಮೂಲಕ ನಿರಾಶ್ರಿತರು ಟರ್ಕಿ ಪ್ರವೇಶಿಸಬಾರದು ಎಂಬ ಕಾರಣಕ್ಕೆ ಬೃಹತ್ ಗೋಡೆ ನಿರ್ಮಿಸಲಾಗ್ತಿದ್ದು, ಪ್ರಸ್ತುತ ಯೋಜನೆಯ ಒಂದು ಭಾಗ ಕಾಮಗಾರಿ ಪೂರ್ಣಗೊಳಿಸಲಾಗಿದೆ.

blank

ಈ ಕುರಿತು ಮಾಹಿತಿ ನೀಡಿರುವ ಟರ್ಕಿ ರಕ್ಷಣಾ ಸಚಿವ ಹುಲುಸಿ ಅಕಾರ್, ನಾವು ಮಾಡ್ಯುಲರ್ ಗೋಡೆಯನ್ನು ನಿರ್ಮಿಸುತ್ತಿದ್ದೇವೆ. ಯೋಜನೆಯ ಒಂದು ಹಂತದ ಭಾಗವನ್ನು ಪೂರ್ಣಗೊಳಿಸಲಾಗಿದೆ. ಸುಮಾರು 150 ಕಿಲೋಮೀಟರ್ ಕಂದಕಗಳನ್ನು ಅಗೆಯಲಾಗಿದೆ. ಇದರಿಂದ ನಮ್ಮ ಗಡಿ ಪ್ರದೇಶದಲ್ಲಿರುವ ಔಟ್​​​ಪೋಸ್ಟ್​​, ಬೇಸ್ ಏರಿಯಾಗಳಿಗೆ ಹೆಚ್ಚುವರಿ ಬಲ ಲಭಿಸಿದೆ. ನಮ್ಮ ಗಡಿ ನಮ್ಮ ಗೌರವ.. ಎಲ್ಲಾ ನಾಗರಿಕರು, ಮಿಲಿಟರಿ ಸಿಬ್ಬಂದಿ, ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ ಅಷ್ಟೇ ಎಂದು ವಿವರಿಸಿದ್ದಾರೆ.

ಇನ್ನು ಕಳೆದ ಭಾನುವಾರವಷ್ಟೇ ಅಫ್ಘಾನ್​​ನಿಂದ ಹೆಚ್ಚಾಗುತ್ತಿರುವ ವಲಸೆ ಬಗ್ಗೆ ಮಾತನಾಡಿದ್ದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್, ಇರಾನ್ ಮೂಲಕ ದೇಶದೊಳಗೆ ಬರುತ್ತಿರುವ ಅಫ್ಘಾನಿ ಪ್ರಜೆಗಳ ವಲಸೆ ಅಲೆಯನ್ನು ಟರ್ಕಿ ಎದುರಿಸುತ್ತಿದೆ. ಈ ಗೋಡೆಯೊಂದಿಗೆ ನಾವು ಅಕ್ರಮ ವಲಸೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಹೇಳಿದ್ದರು. ಇನ್ನು ಅಫ್ಘಾನಿಸ್ತಾನದ ಈ ಪರಿಸ್ಥಿತಿಗೆ ಅಮೆರಿಕವೇ ಕಾರಣ ಅಂತ ಚೀನಾ ಆರೋಪಿಸಿದೆ.

Source: newsfirstlive.com Source link