ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

ನವದೆಹಲಿ: ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ದೇಶ ತೊರೆಯುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಆಶ್ರಯ ನೀಡಲು ಭಾರತ ಮುಂದಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ನಿರಾಶ್ರಿತರಿಗೆ 6 ತಿಂಗಳ ಅವಧಿ ಇರುವ ಇ ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾವನ್ನು ಪ್ರಕಟಿಸಿ ಮಾನವೀಯತೆ ತೋರಿದೆ.

ಈ ವಿಶೇಷ ವೀಸಾದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಇಚ್ಛಿಸುವ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಹೊಸ ಮಾದರಿಯ ವೀಸಾವನ್ನು ಪರಿಚಯಿಸಲಾಗಿದೆ. ಯಾವುದೇ ಧರ್ಮದವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ವೀಸಾವನ್ನು ನೀಡಲಾಗುತ್ತದೆ. ಈ ಅರ್ಜಿಗಳನ್ನು ದೆಹಲಿ ಕಚೇರಿಯಿಂದ ನಿರ್ವಹಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

ಭಾರತದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದಂತೆ ಯಾವುದೇ ನೀತಿ ಇಲ್ಲ. ಆದರೆ ವಿದೇಶಗಳಲ್ಲಿ ಹಿಂಸೆಗೆ ತುತ್ತಾಗುವವರಿಗೆ ಪ್ರಕರಣಗಳನ್ನು ಆಧರಿಸಿ ಆಶ್ರಯ ನೀಡುತ್ತಿದೆ. ಹೀಗಾಗಿ 6 ತಿಂಗಳ ವೀಸಾ ಅವಧಿ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.

ಏನಿದು ಎಕ್ಸ್-ಮಿಸ್ಕ್ ವೀಸಾ?
ಯಾವುದೇ ದೇಶಕ್ಕೆ ಭೇಟಿ ನೀಡಬೇಕಾದರೂ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಯಾವ ಕಾರಣಕ್ಕೆ ಭೇಟಿ ನೀಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ. ನೀಡಿದ ಕಾರಣಗಳು ಸಮಪರ್ಕವಾಗಿದ್ದರೆ ಪ್ರವಾಸಿ, ಬಿಸಿನೆಸ್.. ಇತ್ಯಾದಿ ವೀಸಾಗಳನ್ನು ದೇಶಗಳು ನೀಡುತ್ತವೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

ಯಾವುದೇ ಉದ್ದೇಶವಿಲ್ಲದೆ ದೇಶಕ್ಕೆ ಬರುವವರಿಗೆ, ತಾತ್ಕಾಲಿಕ ಅವಧಿಗೆ ನೀಡಲಾಗುವ ವೀಸಾವನ್ನು ಎಕ್ಸ್-ಮಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂದ್ ಆಗಿರುವುದರಿಂದ ಆನ್‍ಲೈನ್ ಮೂಲಕ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ವೀಸಾ ಸಿಗುವುದು ಅನುಮಾನ. ಭದ್ರತಾ ಸಂಸ್ಥೆಗಳು ಅನುಮೋದನೆ ನೀಡಿದರೆ ಮಾತ್ರ ವೀಸಾವನ್ನು ಮಂಜೂರು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವ್ಯಕ್ತಿಗಳು ಹೆಸರು, ವಿಳಾಸ, ಫೋನ್ ನಂಬರ್ ಜೊತೆಗೆ ಭಾರತ ಮತ್ತು ಅಫ್ಘಾನಿಸ್ತಾನಲ್ಲಿ ನೆಲೆಸಿರುವ ವ್ಯಕ್ತಿಗಳ ಹೆಸರನ್ನು ರೆಫರೆನ್ಸ್ ಆಗಿ ನೀಡಬೇಕಾಗುತ್ತದೆ.

ಈ ವೀಸಾಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಬಹುದು: www.indianvisaonline.gov.in

Source: publictv.in Source link