ಫೇಸ್‍ಬುಕ್‍ನಲ್ಲಿ ದುಷ್ಕರ್ಮಿಗಳ ಷಡ್ಯಂತ್ರಕ್ಕೆ ಬಲಿಯಾಗಿದ್ದ ಹರೀಶ್ ಬಂಗೇರ ಸೌದಿಯಿಂದ ತಾಯ್ನಾಡಿಗೆ ವಾಪಸ್

ಉಡುಪಿ: ಫೇಸ್‍ಬುಕ್‍ನಲ್ಲಿ ದುಷ್ಕರ್ಮಿಗಳ ಷಡ್ಯಂತ್ರಕ್ಕೆ ಒಳಗಾಗಿ ಸುಮಾರು ಎರಡು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಕುಂದಾಪುರದ ಹರೀಶ್ ಬಂಗೇರ ಬಂಧಮುಕ್ತರಾಗಿದ್ದಾರೆ. ಹಲವರ ಸಹಕಾರದಿಂದ ಸೌದಿ ಅರೇಬಿಯಾದ ಕಾನೂನು ಕಂಟಕಗಳನ್ನು ಗೆದ್ದು ತಾಯ್ನಾಡಿಗೆ ವಾಪಸಾಗಿದ್ದಾರೆ.

ಫೇಸ್‍ಬುಕ್ ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆ ಕುರಿತು ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಕುಂದಾಪುರ ಕೋಟೇಶ್ವರ ನಿವಾಸಿ ಹರೀಶ್ ಬಂಗೇರ ಸುಮಾರು ಒಂದು ವರ್ಷ ಏಳು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಬುಧವಾರ ಭಾರತಕ್ಕೆ ಮರಳಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಬಂಧುಗಳನ್ನು ಅಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್ ಬಂಗೇರ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಸೌದಿ ಅರೇಬಿಯಾ ದೊರೆ ವಿರುದ್ಧ ಪೋಸ್ಟ್  ಮಾಡಲಾಗಿತ್ತು. ಆ ಪೋಸ್ಟ್ ಮಾಡಿದವರು ಬಂಗೇರ ಎಂದೇ ಭಾವಿಸಿದ್ದ ಸೌದಿ ಪೊಲೀಸರು ಬಂಗೇರ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು.

ಬಂಗೇರ ಪತ್ನಿ ಸುಮನ ಮಾಧ್ಯಮಗಳಿಗೆ ಮಾಹಿತಿ ನೀಡಿ ತನ್ನ ಪತಿಯನ್ನು ಷಡ್ಯಂತ್ರದಿಂದ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿ, ನಿರಪರಾಧಿ ಪತಿಯ ಬಿಡುಗಡೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಅನಗತ್ಯ ಪೋಸ್ಟ್ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಬಂಗೇರ ಪತ್ನಿ ನೀಡಿರುವ ದೂರು ದಾಖಲಿಸಿ ತನಿಖೆ ನಡೆಸಿದ್ದ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆಯ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು.  ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

ಪ್ರಕರಣದ ವಿಚಾರಣೆಯಲ್ಲಿ ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಹಾಗೂ ಆ ಖಾತೆಗೂ ಬಂಗೇರ ಅವರಿಗೂ ಸಂಬಂಧ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕಂಡು ಬಂದಿದ್ದ ಅಂಶಗಳನ್ನು ರಾಯಭಾರಿ ಕಚೇರಿ ಮೂಲಕ ಸೌದಿ ಅರೇಬಿಯಾ ಸರಕಾರಕ್ಕೂ ತಲುಪಿಸಲಾಗಿತ್ತು. ಈ ತನಿಖಾ ಅಂಶಗಳೇ ಬಂಗೇರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಪ್ರಕರಣ ಕುರಿತು ಬಂಗೇರ ಕುಟುಂಬ ಸ್ನೇಹಿತ ಲೋಕೇಶ್ ಅಂಕದಕಟ್ಟೆ ಸಮಾನಮನಸ್ಕರೊಂದಿಗೆ ಬಿಡುಗಡೆ ಬಗ್ಗೆ ನಿರಂತರ ಪ್ರಯತ್ನ ಮಾಡಿದ್ದರು. ಹರೀಶ್ ಬಂಗೇರ ಭಾರತಕ್ಕೆ ಮರಳಲು ಪೂರೈಸಬೇಕಾಗಿದ್ದ ವಿಧಿ- ವಿಧಾನಗಳೆಲ್ಲವೂ ಪೂರ್ಣಗೊಂಡಿದ್ದು, ಈ ಕುರಿತು ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಭಾರತೀಯ ದೂತವಾಸದಿಂದ ಅಧಿಕೃತ ಮಾಹಿತಿ ಲಭಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಚೆಗೆ ಮಾಹಿತಿ ನೀಡಿದ್ದರು.

ಉಡುಪಿ ಮಾನವ ಹಕ್ಕುಗಳ ಪ್ರತಿಷ್ಠಾನ ಸಂಚಾಲಕ ಡಾ. ರವೀಂದ್ರನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಹಿರಿಯ ಪೊಲೀಸ್ ಅಧಿಕಾರಿ ಕಮಲ್ ಪಂತ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹರೀಶ್ ಬಂಗೇರ ಬಿಡುಗಡೆ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಈ ಎಲ್ಲ ಪ್ರಯತ್ನದ ಫಲವಾಗಿ ಕೊನೆಗೂ ಹರೀಶ್ ಬಂಗೇರ ತಾಯ್ನಾಡಿಗೆ ಮರಳಿ, ತನ್ನ ಕುಟುಂಬವನ್ನು ಸೇರಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಉಡುಪಿ ಜಿಲ್ಲೆ ಕುಂದಾಪುರಕ್ಕೆ ವಾಪಾಸ್ಸಾಗಲಿದ್ದಾರೆ.

Source: publictv.in Source link