ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್

ಲಕ್ನೋ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಭಗವಂತನ ಮೂರ್ತಿಯನ್ನು ತಾತ್ಕಾಲಿಕ ಮಂದಿರದ ಒಳಗೆ ಇಟ್ಟು ಪೂಜಿಸಲಾಗುತ್ತದೆ. ಇದೀಗ ರಾಮಲಲ್ಲಾ ಮೂರ್ತಿಯನ್ನು ಬೆಳ್ಳಿಯ ಉಯ್ಯಾಲೆಯಲ್ಲಿ ಇಟ್ಟು ತೂಗುವ ವಿಶೇಷ ಸೇವೆಯನ್ನು ಆರಂಭಿಸಲಾಗಿದೆ.

ಅಯೋಧ್ಯಾದಲ್ಲಿ 493 ವರ್ಷಗಳ ನಂತರ ರಾಮಲಲ್ಲಾ ಬೆಳ್ಳಿ ಉಯ್ಯಾಲೆಯಲ್ಲಿ ತೂಗುತ್ತಿದ್ದಾನೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ದೀರ್ಘಕಾಲ ತಾತ್ಕಾಲಿಕ ಮಂದಿರದಲ್ಲಿ ಕುಳಿತಿರುವ ರಾಮಲಲ್ಲಾ ಸಹಿತ ನಾಲ್ವರು ಸಹೋದರರನ್ನು ಹೊಸದಾಗಿ ತಯಾರು ಮಾಡಿದ ರಜತ ಉಯ್ಯಾಲೆಯ ಮೇಲೆ ಕೂರಿಸಿ ತೂಗಲಾಗುತ್ತಿದೆ.

ಈ ಹಿಂದೆಯೂ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಜೂಲನೋತ್ಸವ (ಉಯ್ಯಾಲೆ ಸೇವೆ)ದಲ್ಲಿ ಉಯ್ಯಾಲೆಯಲ್ಲಿ ತೂಗಲಾಗುತ್ತಿತ್ತು. ಆದರೆ ಆ ಉಯ್ಯಾಲೆ ಮಾತ್ರ ಮರದ್ದಾಗಿತ್ತು. ಈ ಬಾರಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬೆಳ್ಳಿಯ ಉಯ್ಯಾಲೆಯನ್ನು ಸಿದ್ಧಪಡಿಸಿದೆ. ಶ್ರಾವಣ ಶುಕ್ಲ ಪಂಚಮಿಯಂದು ಬಾಲರಾಮನಿಗೆ ಐದು ತಿಂಗಳು. ಈ ಸಮಯದಲ್ಲಿ ರಾಮನೂ ಸಹಿತ ನಾಲ್ವರು ಸಹೋದರರನ್ನು ತೊಟ್ಟಿಲಿಗೆ ಹಾಕುವ ಸಂಭ್ರಮ. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಹಿರಿಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್ ಭರವಸೆ

ಟ್ರಸ್ಟ್ ಮುತುವರ್ಜಿಯಿಂದ ಬೆಳ್ಳಿಯ ತೊಟ್ಟಿಲನ್ನು ರಾಮಲಲ್ಲಾಗೆ ಅರ್ಪಿಸಲಾಯಿತು. ಈ ವೇಳೆ ವಿಶೇಷ ಪೂಜೆಯನ್ನು ನಡೆಸಲಾಯಿತು. ಮಂದಿರ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ರಾಮಲಲ್ಲಾ ಸಹಿತ ನಾಲ್ವರು ಸಹೋದರರನ್ನು ಉಯ್ಯಾಲೆಯಲ್ಲಿ ಸ್ಥಾಪಿಸಿದರು. ಬಳಿಕ ಮಂಗಳ ಗೀತೆಗಳ ಜೊತೆಗೆ ಉಯ್ಯಾಲೆಯನ್ನು ತೂಗಲಾಯಿತು. ರಾಮಲಲ್ಲಾನ ಈ ಜೂಲನೋತ್ಸವವು ಶ್ರಾವಣ ಹುಣ್ಣಿಮೆ ಅಂದರೆ ಆಗಸ್ಟ್ 22ರವರೆಗೆ ಮುಂದುವರಿಯಲಿದೆ. ಇದನ್ನೂ ಓದಿ: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪೂರ್ಣ- ವಿಎಚ್‌ಪಿಯಿಂದ ಕೃತಜ್ಞತೆ

Source: publictv.in Source link