ತಾಲಿಬಾನಿಗಳ ಕೈಗೆ ಸಿಕ್ಕಿಲ್ಲ ಒಂದೇ ಒಂದು ಪ್ರದೇಶ.. ಅಲ್ಲಿಂದಲೇ ಸಮರ ಸಾರಿದ ಆಫ್ಘನ್ ಉಪಾಧ್ಯಕ್ಷ

ತಾಲಿಬಾನಿಗಳ ಕೈಗೆ ಸಿಕ್ಕಿಲ್ಲ ಒಂದೇ ಒಂದು ಪ್ರದೇಶ.. ಅಲ್ಲಿಂದಲೇ ಸಮರ ಸಾರಿದ ಆಫ್ಘನ್ ಉಪಾಧ್ಯಕ್ಷ

ತಾಲಿಬಾನಿಗಳು ಸಂಪೂರ್ಣ ಅಫ್ಘಾನಿಸ್ತಾನವನ್ನೇ ತಮ್ಮ ವಶಕ್ಕೆ ಪಡೆದುಕೊಂಡಿದ್ದರೂ ಅದೊಂದು ಜಿಲ್ಲೆ ಮಾತ್ರ ಇನ್ನೂ ತಾಲಿಬಾನಿಗಳ ಕೈವಶವಾಗಿಲ್ಲ. ಇದೀಗ ಅದೇ ಜಿಲ್ಲೆಯಿಂದ ತಾಲಿಬಾನಿಗಳ ವಿರುದ್ಧ ದೊಡ್ಡಮಟ್ಟದ ಹೋರಾಟಕ್ಕೆ ತಯಾರಿಗಳು ನಡೆಯುತ್ತಿವೆ.

ಇದನ್ನೂ ಓದಿ: BIG BREAKING: ತಾಲಿಬಾನ್​ಗೆ ಮಣಿಯಲ್ಲ.. ನಾನೇ ಆಫ್ಘನ್ ಅಧ್ಯಕ್ಷ- ಉಪಾಧ್ಯಕ್ಷ ಘೋಷಣೆ

ಅಫ್ಘಾನಿಸ್ತಾನ ಪಂಜ್​ಶಿರ್ ಕಣಿವೆ ಪ್ರದೇಶವನ್ನು ತಾಲಿಬಾನಿಗಳು ಇನ್ನೂ ವಶಕ್ಕೆ ಪಡೆದುಕೊಂಡಿಲ್ಲ. ರಾಜಧಾನಿ ಕಾಬೂಲ್​ನಿಂದ ಪಲಾಯನಗೈದ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಕೂಡ ಸದ್ಯ ಇದೇ ಪಂಜ್​ಶಿರ್ ಜಿಲ್ಲೆಯಲ್ಲಿದ್ದಾರೆ. ಇಲ್ಲಿದ್ದುಕೊಂಡೇ ತಾಲಿಬಾನ್ ವಿರೋಧಿಗಳ ದೊಡ್ಡ ತಂಡವೊಂದನ್ನ ಕಟ್ಟಲು ತಯಾರಿ ಮಾಡುತ್ತಿದ್ದಾರೆ. ಇದರ ಮುನ್ಸೂಚನೆಯೆಂಬಂತೆ ನಿನ್ನೆಯಷ್ಟೇ ಅಮ್ರುಲ್ಲಾ ಸಲೇಹ್ ಒಂದು ಟ್ವೀಟ್ ಮಾಡಿದ್ದರು.

ಟ್ವೀಟ್​ನಲ್ಲಿ ಏನಿತ್ತು..?

ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಹೊಂದುತ್ತಾರೆ. ಸದ್ಯ ನಾನು ದೇಶದ ಒಳಗೇ ಇದ್ದೇನೆ.. ಮತ್ತು ನಾನು ಈಗ ದೇಶದ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ. ನಾನು ಎಲ್ಲ ನಾಯಕರನ್ನೂ ಸಂಪರ್ಕಿಸಿ ಅವರ ಬೆಂಬಲ ಹಾಗೂ ಒಮ್ಮತ ಸಂಗ್ರಹಿಸುತ್ತಿದ್ದೇನೆ- ಅಮ್ರುಲ್ಲಾ ಸಲೇಹ್, ಅಘೋಷಿತ ಅಧ್ಯಕ್ಷ, ಅಫ್ಘಾನಿಸ್ತಾನ

ಇನ್ನು ಅಮ್ರುಲ್ಲಾ ಸಲೇಹ್​ಗೆ ಬೆಂಬಲ ನೀಡಿರುವುದು ರಕ್ಷಣಾ ಸಚಿವರಾಗಿದ್ದ ಬಿಸ್ಮಿಲ್ಲಾ ಮೊಹಮ್ಮದಿ ಹಾಗೂ ಅಹ್ಮದ್ ಮಸೂದ್. ಅಹ್ಮದ್ ಮಸೂದ್ ಹಿನ್ನೆಲೆ ನೋಡೋದಾದ್ರೆ ಈತ ಅಫ್ಘಾನ್​ನಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಅಹ್ಮದ್ ಶಾಹ್ ಮಸೂದ್ ಪುತ್ರ. ಅಹ್ಮದ್ ಶಾ ಮಸೂದ್ ಓರ್ವ ಪವರ್​ಫುಲ್ ಗೆರಿಲ್ಲಾ ಕಮಾಂಡರ್ ಎನ್ನಿಸಿಕೊಂಡಿದ್ದವ. ಈತ 1979 ರಿಂದ 1989 ರ ಅವಧಿಯಲ್ಲಿ ಗೆರಿಲ್ಲಾ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದು ಆಫ್ಘನ್ ಪಾಲಿಗೆ ವಾರ್ ಹೀರೋ ಎನ್ನಿಸಿಕೊಂಡವ. ಇದೀಗ ಅಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್ ತಾಲಿಬಾನಿಗಳ ವಿರುದ್ಧ ಸಮರ ಸಾರಿದ್ದಾನೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಲ್ಲಿ ಅಹ್ಮದ್ ಮಸೂದ್ ನನ್ನ ಜೊತೆಯಾಗಿ ಎಂದು ತಾಲಿಬಾನಿ ವಿರೋಧಿಗಳಿಗೆ ಮನವಿ ಮಾಡಿದ್ದ. ಅಲ್ಲದೇ ಒಂದಷ್ಟು ಸ್ಥಳೀಯ ಪಕ್ಷಗಳ ಜೊತೆ ಮೈತ್ರಿಗೆ ಪ್ರಯತ್ನಿಸುತ್ತಿರುವ ಅಮ್ರುಲ್ಲಾ ಸಲೇಹ್ ಮೈತ್ರಿ ಬಾವುಟ ಹಾರಿಸುವ ಮೂಲಕ ಸಮರಕ್ಕೆ ಸಿದ್ಧ ಎಂಬ ಸೂಚನೆ ನೀಡಿದ್ದಾನೆ.

blank

ಇದನ್ನೂ ಓದಿ: ‘ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ’- ತಾಲಿಬಾನ್​ ಸುದ್ದಿಗೋಷ್ಠಿ

ಅಹ್ಮದ್ ಮಸೂದ್ ಸದ್ಯ ತಾಲಿಬಾನಿಗಳ ವಿರೋಧಿಗಳನ್ನ ಭೇಟಿಯಾಗಿ ತಾಲಿಬಾನಿಗಳ ವಿರುದ್ಧದ ಸ್ವಾತಂತ್ರ್ಯದ ಹೋರಾಟಕ್ಕೆ ಜೊತೆಯಾಗಿ ಎಂದು ಕರೆ ಕೊಟ್ಟಿದ್ದಾನೆ. ಇನ್ನು ತಾಲಿಬಾನಿಗಳಿಂದ ತಪ್ಪಿಸಿಕೊಂಡ ಅಫ್ಘನ್ ಸೇನೆಯೂ ಸಹ ಇದೀಗ ಪಂಜ್​ಶಿರ್​ಗೆ ಬಂದಿಳಿಯುತ್ತಿದ್ದು ಅಹ್ಮದ್ ಮಸೂದ್, ಅಮ್ರುಲ್ಲಾ ಲೇಹ್ ಹಾಗೂ ಬಿಸ್ಮಿಲ್ಲಾ ಮೊಹಮ್ಮದಿಗೆ ಆನೆಬಲ ಬಂದಂತಾಗಿದೆ.

ಇದೆಲ್ಲದ ಮಧ್ಯೆ ತಾಲಿಬಾನ್​ನ ಸಹ ಸಂಸ್ಥಾಪಕ, ಅಫ್ಘಾನ್​ನ ಮುಂದಿನ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಮುಲ್ಲಾ ಅಬ್ದುಲ್ ಗನಿ ಬರಾದರ್ ಕತಾರ್​ನಿಂದ ಅಫ್ಘಾನಿಸ್ತಾನಕ್ಕೆ ಮರಳಿದ್ದಾನೆ. ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ತಾಲಿಬಾನಿಗಳು ಸರ್ಕಾರಿ ನೌಕರರನ್ನು ಕೆಲಸಕ್ಕೆ ಮರಳುವಂತೆ ಹೇಳಿದ್ದಾರೆ. ಇವರ ಮಾತು ಕೇಳದೆ ಕಚೇರಿಯಿಂದ ಹೊರಗುಳಿದ ಸರ್ಕಾರಿ ನೌಕರರ ಮೇಲೆ ತಾಲಿಬಾನಿಗಳು ಹಲ್ಲೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನಿಗಳ ರೌದ್ರಾವತಾರ -ಕರುಳು ಹಿಂಡುವ ಮತ್ತೊಂದು ಕಥೆ

Source: newsfirstlive.com Source link