ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ಸಾಲು ಸಾಲು ಹಬ್ಬಗಳಿರೋ ಹಿನ್ನೆಲೆ, ಜನ ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿಸಲು ಹೋಗೋ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಮಾರ್ಕೆಟ್​ಗಳಲ್ಲಿ ಸೋಂಕನ್ನ ನಿಯಂತ್ರಿಸಲು ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತ ಪ್ರತ್ಯೇಕ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ಕಠಿಣ ನಿಯಮಗಳನ್ನ ಜಾರಿಗೊಳಿಸಿ, ಕೋವಿಡ್-19 ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚನೆಯನ್ನ ನೀಡಲಾಗಿದೆ. ಮೊಹರಂ, ವರಮಹಾಲಕ್ಷ್ಮೀ ವ್ರತ, ಶ್ರೀ ಕೃಷ್ಣ ಜಾನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಸಾಲು ಸಾಲು ಹಬ್ಬಗಳಿರುವ ಹಿನ್ನಲೆ, ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ನಿರ್ಬಂಧಗಳನ್ನ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ಜಾರಿಗೊಳಿಸಿರೊ ಕಟ್ಟುನಿಟ್ಟಿನ ಕ್ರಮಗಳು

  • ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು(Covid Appropriate Behaviour) ಉತ್ತೇಜಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ವಾಹನ ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್-19 ಸೊಂಕು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಕಛೇರಿಯಿಂದ ನೀಡಲಾಗಿರುವ ಸಂದೇಶ / ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದು.
  • ಮುಖ್ಯ ಮಾರ್ಷಲ್‌ರವರು ಈಗಾಗಲೇ ಪಾಲಿಕೆಯ ಎಂಟು ವಲಯ ಮಟ್ಟದಲ್ಲಿ ಮಾರ್ಷಲ್‌ಗಳಿಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್-19 ಸೊಂಕು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಕಛೇರಿಯಿಂದ ನೀಡಲಾಗಿರುವ ಸಂದೇಶ / ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದರ ಬಗ್ಗೆ ಕ್ರಮವಹಿಸುವುದು.
  • ಮಾಸ್ಕ್ ಧರಿಸುವ ಕ್ರಮವು ಕೋವಿಡ್-19 ತಡೆಗಟ್ಟುವ ಅತ್ಯಂತ ಪ್ರಮುಖ ಕ್ರಮವಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ 250 ರೂ. ದಂಡವನ್ನು ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ವಿಧಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸುವುದು.
  • ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾರ್ಷಲ್‌ಗಳು ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರುಗಳು / ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಗತ್ಯ ಕ್ರಮವಹಿಸುವುದು ಹಾಗೂ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸುವ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ 250 ರೂ. ದಂಡವನ್ನು ವಿಧಿಸುವುದು.
  • ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರು ತಾವು ಸೇರಿದಂತೆ ತಮ್ಮ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್-19 ಕನಿಷ್ಠ ಮೊದಲನೇ ಡೋಸ್ ಲಸಿಕೆ ಪಡೆದಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು.
  • ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರುಗಳು ತಮ್ಮ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗಮನಿಸುವುದು.
  • ಮಾರ್ಷಲ್‌ಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಅನಿರೀಕ್ಷಿತ ಭೇಟಿ ನೀಡಿ ಖಾತರಿಪಡಿಸಿಕೊಳ್ಳುವುದು. ನಿಗಧಿಪಡಿಸಿರುವ ಕರ್ಫ್ಯೂ ಸಮಯದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವುದು ಮತ್ತು ಯಾವುದೇ ವ್ಯಕ್ತಿ / ಸಂಸ್ಥೆ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ದಂಡದ ಜೊತೆಗೆ ವಿಪತ್ತು ನಿರ್ವಹಣಾ ಕಾಯಿದೆ 2005 ರ ನಿಯಮಾವಳಿಯನ್ವಯ ಕ್ರಮ ಕೈಗೊಳ್ಳುವುದು.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಮೇಲ್ವಿಚಾರಣೆ ಮಾಡಲು ವಲಯ ಜಂಟಿ ಆಯುಕ್ತರು / ಆರೋಗ್ಯಾಧಿಕಾರಿಗಳು ಮತ್ತು ಮುಖ್ಯ ಮಾರ್ಷಲ್‌ಗಳು ಅಗತ್ಯಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಗೌರವ್ ಗುಪ್ತ ಆದೇಶ

Source: newsfirstlive.com Source link