ಒಕ್ಕಲಿಗ ನಾಯಕರ ನಡುವೆ ಮೌನಯುದ್ಧ: ಡಿಕೆಎಸ್​ ಎಂ.ಕೃಷ್ಣಪ್ಪ ನಡುವಿನ ಮನಸ್ತಾಪಕ್ಕೆ 5 ಕಾರಣಗಳು

ಒಕ್ಕಲಿಗ ನಾಯಕರ ನಡುವೆ ಮೌನಯುದ್ಧ: ಡಿಕೆಎಸ್​ ಎಂ.ಕೃಷ್ಣಪ್ಪ ನಡುವಿನ ಮನಸ್ತಾಪಕ್ಕೆ 5 ಕಾರಣಗಳು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ವಿಜಯನಗರದ ಶಾಸಕ ಎಂ. ಕೃಷ್ಣಪ್ಪ ನಡುವೆ ಮೌನಯುದ್ಧ ನಡೆಯುತ್ತಿದೆಯಂತೆ. ವಿಜಯನಗರದ ಶಾಸಕರ ನೇತೃತ್ವದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಸದಾ ಸಿದ್ದರಾಮಯ್ಯನವರೇ ಇರ್ತಾರಂತೆ. ಎರಡೆರಡು ಬಾರಿ ನಡೆಸಿದ ಬೃಹತ್ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯಗೆ ಲೇಔಟ್ ಕೃಷ್ಣಪ್ಪ ಆಹ್ವಾನ ನೀಡಿ ಕರೆಸಿದ್ದರು.

ಮೊದಲ ಬಾರಿ ಗೋವಿಂದರಾಜನಗರದಲ್ಲಿ ನಡೆದ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯ ನೇತೃತ್ವ ವಹಿಸಿದ್ದರು. ನಿನ್ನೆ ಎರಡನೇ ಬಾರಿ ವಿಜಯನಗರದ ಚೋಳೂರು ಪಾಳ್ಯದಲ್ಲಿ ನಡೆದ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯನವರದ್ದೇ ನೇತೃತ್ವವಿತ್ತು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷದ ಚಟುವಟಿಕೆಗಳಿಂದಲೂ ಲೇಔಟ್ ಕೃಷ್ಣಪ್ಪ ಅಂತರ ಕಾದುಕೊಂಡಿದ್ದು ಡಿ.ಕೆ ಶಿವಕುಮಾರ್ ಹಾಗೂ ಲೇಔಟ್ ಕೃಷ್ಣಪ್ಪ ನಡುವೆ ಮುನಿಸು ಮುಂದುವರಿದಿದೆ ಎನ್ನಲಾಗಿದೆ.

blank

ವಿಜಯನರ ಹಾಗೂ ಗೋವಿಂದರಾಜನಗರದಲ್ಲಿ ದಿನಸಿ, ಊಟ ಹಾಗೂ ತಿಂಡಿ-ತಿನಿಸುಗಳನ್ನ ಸಿದ್ದರಾಮಯ್ಯ ನೇತೃತ್ವದಲ್ಲೇ ನೀಡಲಾಗ್ತಿದೆ. ಎರಡೂ ಕ್ಷೇತ್ದಾದ್ಯಂತ ಲೇಔಟ್ ಕೃಷ್ಣಪ್ಪ ಸತತವಾಗಿ ಫುಡ್ ಕಿಟ್ ಕೊಡ್ತಿದ್ದಾರೆ. ಆದರೆ ಈ ಕಾರ್ಯಕ್ರಮಗಳಿಗೆ ಕೆಪಿಸಿಸಿ ಅಧ್ಯಕ್ಷರನ್ನ ನೆಗ್ಲೆಕ್ಟ್ ಮಾಡ್ತಿದ್ದಾರಂತೆ.

blank

ಒಕ್ಕಲಿಗ ನಾಯಕರ ನಡುವಣ ಮೌನಯುದ್ಧಕ್ಕೆ ಕಾರಣವೇನು..?

ಕಾರಣ 1
ಡಿ.ಕೆ. ಶಿವಕುಮಾರ್ ಹಾಗೂ ಲೇಔಟ್ ಕೃಷ್ಣಪ್ಪ ನಡುವೆ ಹಿಂದಿನಿಂದಲೂ ಆಂತರಿಕ ವೈಮನಸ್ಸು ಇದ್ದೇ ಇದೆ, ಆದನ್ನು ವೈಯಕ್ತಿಕವಾಗಿ ಸರಿಮಾಡಿಕೊಳ್ಳುವ ಪ್ರಯತ್ನ ಎರಡೂ ದ್ರುವಗಳಿಂದಲೂ ಆಗಿಲ್ಲ.

ಕಾರಣ 2
ಈ ಹಿಂದೆ ಲೇಔಟ್ ಕೃಷ್ಣಪ್ಪ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗುವ ಹೊತ್ತಿನಲ್ಲಿ ಅದಕ್ಕೆ ಆಂತರಿಕವಾಗಿ ಡಿ.ಕೆ. ಶಿವಕುಮಾರ್ ಅಡ್ಡಿಯಾಗಿದ್ದರು ಎಂಬ ಹಿನ್ನಲೆಯೂ ಒಕ್ಕಲಿಗ ನಾಯಕರ ನಡುವಣ ವೈಮನಸ್ಸಿನ ಹಿಂದಿದೆ.

ಕಾರಣ 3
ಆದರೆ ಸಿದ್ದರಾಮಯ್ಯನವರು ಲೇಔಟ್ ಕೃಷ್ಣಪ್ಪ ಅವರನ್ನು ಮಂತ್ರಿ ಮಾಡಲೇಬೇಕೆಂದು ಪಟ್ಟು ಹಿಡಿದು ಸಚಿವ ಸ್ಥಾನ ನೀಡಿ ಸಂಪುಟಕ್ಕೆ ಸೇರಿಸಿಕೊಂಡರು ಎಂಬ ಕಾರಣಕ್ಕೆ ಸಹಜವಾಗಿ ಕೆಪಿಸಿಸಿ ಅಧ್ಯಕ್ಷರಿಗಿಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನರ ಪರವಾಗಿ ಕೃಷ್ಣಪ್ಪ ಸ್ವಾಭಾವಿಕ ಒಲವು ಹೊಂದಿದ್ದಾರೆ.

ಕಾರಣ 4
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷದ ಜವಾಬ್ದಾರಿ ಹೊತ್ತವರಾಗಿ ಕೃಷ್ಣಪ್ಪನವರನ್ನು ಕರೆದು ಮಾತನಾಡಿಸಿ ಸಂಬಂಧ ಸುಧಾರಿಸಿಕೊಂಡು ಒಟ್ಟಾಗಿ ಪಕ್ಷ ಕಟ್ಟೋಣ ಎಂಬ ಸಂದೇಶ ನೀಡುವ ಪ್ರಯತ್ನ ವೈಯಕ್ತಿಕವಾಗಿ ಮಾಡದ ಕಾರಣ ಆ ಕಂದಕ ಹಾಗೇ ಮುಂದುವರಿದಿದೆ.

ಕಾರಣ 5
ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆದರೆ ತನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು ಎಂಬ ಸಹಜ ಲೆಕ್ಕಾಚಾರವೂ ಇದಕ್ಕೆ ಕಾರಣ, ಅದೇ ಜಾಗದಲ್ಲಿ ಡಿಕೆಎಸ್ ಸಿಎಂ ಆದರೆ ತಾನು ಸಚಿವನಾಗುವ ಅವಕಾಶ ತಪ್ಪಬಹುದೆಂಬ ಮುಂಗಾಣ್ಕೆಯೂ ಈ ಒಕ್ಕಲಿಗ ನಾಯಕರ ನಡುವಣ ಅಂತರಕ್ಕೆ ಮೂಲ ಕಾರಣ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link