ಹೆಲಿಕಾಫ್ಟರ್​ನಲ್ಲಿ ಹಣ ತಂದಿದ್ದು ಸುಳ್ಳು, ದೇಶಕ್ಕೆ ಮರಳಲು ಯೋಚಿಸುತ್ತಿದ್ದೇನೆ -ಅಫ್ಘಾನ್ ಅಧ್ಯಕ್ಷ

ಹೆಲಿಕಾಫ್ಟರ್​ನಲ್ಲಿ ಹಣ ತಂದಿದ್ದು ಸುಳ್ಳು, ದೇಶಕ್ಕೆ ಮರಳಲು ಯೋಚಿಸುತ್ತಿದ್ದೇನೆ -ಅಫ್ಘಾನ್ ಅಧ್ಯಕ್ಷ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದೇ ಜನರು ಭಯಭೀತರಾಗಿದ್ದಾರೆ. ಅಫ್ಘಾನ್ ಮೇಲೆ ಹಿಡಿತ ಸಾಧಿಸಿ ಮೂರು ದಿನ ಕಳೆದ ಬೆನ್ನಲ್ಲೇ ಉಗ್ರರು ಆಡಳಿತ ರಚಿಸೋ ಮಾತನಾಡಿದ್ದಾರೆ. ಇದೆಲ್ಲರ ನಡುವೆ ತಾಲಿಬಾನಿಗಳಿಂದ ಭಾರತದ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಿದೆ.

ಈಗೇನಿದ್ರೂ ವಿಶ್ವಾದ್ಯಂತ ತಾಲಿಬಾನ್​ ಉಗ್ರರದ್ದೇ ಸುದ್ದಿ. ಅಫ್ಘಾನಿಸ್ತಾನವನ್ನು ಕಬ್ಜ ಮಾಡಿಕೊಂಡ ಬಳಿಕ ಅವರು ಅಲ್ಲಿನ ಮಹಿಳೆಯರು ಸೇರಿದಂತೆ ಅಮಾಯಕರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನೋಡಿ ವಿಶ್ವವೇ ಹೌಹಾರಿದೆ.. ಜನರ ಅಸಹಾಯಕ ಸ್ಥಿತಿ ನೆನೆದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.. ಇದೆಲ್ಲದರ ನಡುವೆ ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ತಾಲಿಬಾನ್ ಹಿರಿಯ ನಾಯಕರನ್ನು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ.

blank

ಉಗ್ರ ಸಂಘಟನೆ ಹಕ್ಕಾನಿ ನೆಟ್ ವರ್ಕ್​ನ ಮುಖಂಡರು ತಾಲಿಬಾನ್ ಸರ್ಕಾರದ ಭಾಗವಾಗುವ ಕುರಿತು ಮಾತುಕತೆ ನಡೆಯುತ್ತಿದೆ. ಇದೇ ವಿಚಾರವಾಗಿ ಹಮೀದ್ ಕರ್ಜೈ ಅನಸ್ ಹಕ್ಕಾನಿಯನ್ನ ಭೇಟಿಯಾಗಿ ಚರ್ಚಿಸಿದ್ದಾರಂತೆ.. ಇದು ಅಂತಿಮವಾಗಿ ತಾಲಿಬಾನ್‌ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಜೊತೆ ಮಾತುಕತೆಗೆ ಅನುಕೂಲವಾಗಲಿದೆ ಅಂತ ಕರ್ಜೈ ವಕ್ತಾರರು ಹೇಳಿದ್ದಾರೆ.

ಹಮೀದ್ ಕರ್ಜೈ-ತಾಲಿಬಾನ್ ಭೇಟಿಗೆ ಬೆಂಬಲ

‘ಅಪ್ಘನ್​ಗೆ ಮರಳಲು ಯೋಚಿಸುತ್ತಿದ್ದೇನೆ’
ಇನ್ನು ಅಫ್ಘಾನಿಸ್ತಾನವನ್ನು ತಾಲಿಬಾನ್​ಗಳು ವಶಪಡಿಸಿಕೊಳ್ಳುತ್ತಿದ್ದಂತೆ ದೇಶ ಬಿಟ್ಟು ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ, ಫೇಸ್​ಬುಕ್​ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸದ್ಯಕ್ಕೆ ಎಮಿರೇಟ್ಸ್‌ನಲ್ಲಿದ್ದು ಶೀಘ್ರದಲ್ಲೇ ದೇಶಕ್ಕೆ ವಾಪಸಾಗುವ ಸುಳಿವು ಕೊಟ್ಟಿದ್ದಾರೆ.. ಜೊತೆಗೆ ಹಮೀದ್ ಕರ್ಜೈ ತಾಲಿಬಾನಿಗಳ ಜೊತೆ ನಡೆಸುತ್ತಿರುವ ಮಾತುಕತೆಯನ್ನು ಸ್ವಾಗತಿಸಿ ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ..

‘ಹೆಲಿಕಾಫ್ಟರ್​ನಲ್ಲಿ ಹಣ ತಂದಿದ್ದು ಸುಳ್ಳು’
25 ವರ್ಷಗಳ ಹಿಂದೆ ತಾಲಿಬಾನಿಗಳು ನಡೆಸಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಅನ್ನೋ ಉದ್ದೇಶದಿಂದ ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದಲ್ಲ. ದೇಶದ ಸುರಕ್ಷತೆಯನ್ನು ಭದ್ರತಾ ಪಡೆಗಳಿಗೆ ವಹಿಸಿ ದೇಶ ತೊರೆದೆ. ದೇಶ ಬಿಟ್ಟು ಬರುವಾಗ ಬಟ್ಟೆ ಬಿಟ್ರೆ ಬೇರೇನನ್ನೂ ತಂದಿಲ್ಲ. ಕಾರು, ಹೆಲಿಕಾಪ್ಟರ್ ತುಂಬ ಹಣ ತೆಗೆದುಕೊಂಡು ಬಂದಿದ್ದೇನೆ ಅನ್ನೋದು ಸತ್ಯಕ್ಕೆ ದೂರವಾದದ್ದು. ಸದ್ಯಕ್ಕೆ ಎಮಿರೇಟ್ಸ್‌ನಲ್ಲಿದ್ದು ಶೀಘ್ರದಲ್ಲೇ ದೇಶಕ್ಕೆ ವಾಪಸಾಗುವ ಕುರಿತು ಯೋಚಿಸುತ್ತಿದ್ದೇನೆ.

-ಅಶ್ರಫ್ ಘನಿ, ಅಫ್ಘಾನಿಸ್ತಾನದ ಅಧ್ಯಕ್ಷ

ಸದ್ಯ ಅಫ್ಘಾನಿಸ್ತಾನವನ್ನು ಆಳ್ವಿಕೆ ಮಾಡಲು ತಾಲಿಬಾನಿಗಳು ಮುಂದಾಗಿದ್ದು ಆಡಳಿತ ಮಂಡಳಿ ರಚಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಸರ್ಕಾರದ ರಚನೆ ಬಗ್ಗೆ ಅಫ್ಘನ್​ ರಾಜಕಾರಣಿಗಳ ಜೊತೆ ಚರ್ಚೆ ಕೂಡ ನಡೆಸಿದ್ದಾರೆ.

ಭಾರತದಲ್ಲಿ ಡ್ರೈ ಫ್ರೂಟ್ಸ್​ ಬೆಲೆ ಹೆಚ್ಚಳ
ಇನ್ನು ಅಫ್ಘಾನ್​​ನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ ಅದರ ಎಫೆಕ್ಟ್​ ಭಾರತದ ಮೇಲಾಗಿದೆ. ಭಾರತದೊಂದಿಗೆ ಆಮದು ಮತ್ತು ರಫ್ತು ರದ್ದಾಗಿದ್ದರಿಂದ ಡ್ರೈ ಫ್ರೂಟ್ ಸರಬರಾಜು ಸ್ಥಗಿತಗೊಂಡು ಬೆಲೆ ಏರಿಕೆ ಆಗಿದೆ. ಪಾಕಿಸ್ತಾನ ಸಾರಿಗೆ ಮಾರ್ಗದ ಮೂಲಕ ನಡೆಯುವ ಎಲ್ಲ​ ಆಮದು-ರಫ್ತು ವ್ಯವಹಾರವನ್ನು ಸದ್ಯ ತಾಲಿಬಾನ್​ ತಡೆಹಿಡಿದಿದ್ದರಿಂದ ಆಮದನ್ನು ನಿಲ್ಲಿಸಿದ್ದೇವೆ ಅಂತ ಭಾರತೀಯ ರಫ್ತು ಸಂಸ್ಥೆಯ ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಹೇಳಿದ್ದಾರೆ.

ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ಉಗ್ರರು ರಣಕೇಕೆ ಹಾಕುತ್ತಿದ್ದು ಬಂದೂಕು ಹಿಡಿದುಕೊಂಡು ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮಾತು ಕೇಳದವರನ್ನು ಮುಲಾಜಿಲ್ಲದೇ ಹೊಡೆದುರುಳಿಸುತ್ತಿದ್ದಾರೆ. ಮಹಿಳೆಯರಿಗೆ ಹಕ್ಕು ಕೊಡುತ್ತೇವೆ ಅಂತ ಹೇಳ್ತಾನೇ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಇವರ ಕ್ರೌರ್ಯಕ್ಕೆ ಅಫ್ಘನ್​ ನಲುಗಿ ಹೋಗಿದೆ. ಮಾತುಕತೆ ಮೂಲಕವೋ ಅಥವಾ ಅವರದೇ ಭಾಷೆಯಲ್ಲೋ ವಿಶ್ವನಾಯಕರು ಒಂದಾಗಿ ಮುಟ್ಟಿನೋಡಿಕೊಳ್ಳುವ ಪೆಟ್ಟು ನೀಡಬೇಕಿದೆ.

Source: newsfirstlive.com Source link