1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

ಕಾಬೂಲ್: ತಾಲಿಬಾನ್ ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ದೇಶ ತೊರೆದಿರುವ ಅಘ್ಘನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಮಾಜಿ ಅಧ್ಯಕ್ಷ ಘನಿ ಕುಟುಂಬದ ಸದಸ್ಯರ ಜೊತೆ ಯುಎಇಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕುಟುಂಬ ಸಮೇತ ಆಗಮಿಸಿದ್ದನ್ನು ಯುಎಇ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿಕೊಂಡಿದೆ. ಮಾನವೀಯತೆ ದೃಷ್ಟಿಯಿಂದ ಆಶ್ರಯ ನೀಡಲಾಗಿದೆ ಎಂದು ಯುಎಇ ಹೇಳಿದೆ.

ಆಗಸ್ಟ್ 15 ರಂದು ಘನಿ ದೇಶ ಬಿಡುವ ಸಮಯದಲ್ಲಿ 4 ಕಾರು, ಭಾರೀ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಪೂರಕ ಎಂಬಂತೆ ತಜಕಿಸ್ತಾನದಲ್ಲಿರುವ ಅಫ್ಘಾನ್ ರಾಯಭಾರಿ, ಅಶ್ರಫ್ ಘನಿ 16.9 ಕೋಟಿ ಡಾಲರ್(1,250 ಕೋಟಿ ರೂ.) ಹಣದ ಜೊತೆ ಪರಾರಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಸಂಪತ್ತನ್ನು ಕದ್ದ ಆರೋಪದ ಮೇಲೆ ಅಶ್ರಫ್ ಘನಿ, ಹಮ್ದಲ್ಲಾ ಮೊಹೀಬ್ ಮತ್ತು ಫಜಲ್ ಮೊಹಮ್ಮದ್ ಫಜ್ಲಿಯನ್ನು ಬಂಧಿಸಿಸುವಂತೆ ಇಂಟರ್ ಪೋಲ್ ಬಳಿ ಬಳಿ ತಜಕಿಸ್ತಾನದಲ್ಲಿರುವ ಅಫ್ಘಾನ್ ರಾಯಭಾರಿ ಮನವಿ ಮಾಡಿದ್ದಾರೆ ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವಾಹಿನಿ ವರದಿ ಮಾಡಿದೆ.

ಈ ಆರೋಪಕ್ಕೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಘನಿ, ನಾನು ದೇಶ ಬಿಟ್ಟು ಓಡಿ ಹೋಗಿಲ್ಲ. ಅಫ್ಘಾನಿಸ್ತಾನಕ್ಕೆ ಮತ್ತೆ ಮರಳಲು ಸಿದ್ಧನಿದ್ದೇನೆ. ಯಾವುದೇ ಹಣವನ್ನು ಕದ್ದುಕೊಂಡು ಹೋಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

ಉಗ್ರರು ಕಾಬೂಲ್ ನಗರ ಪ್ರವೇಶಿಸುತ್ತಿದ್ದಂತೆಯೇ ಜೀವಭಯದಲ್ಲಿದ್ದ ಅಧ್ಯಕ್ಷ ಘನಿ ಅವರು ಆತಂಕಕ್ಕೆ ಒಳಗಾದರು. ಮತ್ತಷ್ಟು ಸಮಯ ಇಲ್ಲಿದ್ದರೆ ನನ್ನನ್ನೇ ಉಗ್ರರು ಹತ್ಯೆ ಮಾಡಬಹುದು ಎಂದು ಭಾವಿಸಿ ಕುಟುಂಬ ಸಮೇತ ಘನಿ ವಿಶೇಷ ವಿಮಾನದ ಮೂಲಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಅಫ್ಘಾನಿಸ್ತಾನ ತೊರೆಯುವ ವೇಳೆ 4 ಕಾರಿನಲ್ಲಿ ಭಾರೀ ಪ್ರಮಾಣದ ದುಡ್ಡನ್ನು ತುಂಬಿದರು. ಉಳಿದ ಹಣವನ್ನು ಹೆಲಿಕಾಪ್ಟರ್ ನಲ್ಲಿ ಇರಿಸಿದರು. ಹಣವಿದ್ದ ಕಾರುಗಳನ್ನು ವಿಶೇಷ ವಿಮಾನದಲ್ಲಿ ಏರಿಸಿಕೊಂಡು ಪ್ರಯಾಣ ಬೆಳೆಸಿದರು. ಘನಿ ಅವರ ನಂಬಿಕಸ್ಥ ವ್ಯಕ್ತಿ ಇದ್ದ ಹೆಲಿಕಾಪ್ಟರ್ ಕೂಡ ಅದೇ ದಿಕ್ಕಿನಲ್ಲಿ ಹಿಂಬಾಲಿಸಿತು ಎಂದು ವರದಿಯಾಗಿತ್ತು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ 

ಕಾಬೂಲ್‍ನಿಂದ ಪರಾರಿಯಾದ ಅಶ್ರಫ್ ಘನಿ ತಜಕಿಸ್ತಾನದಲ್ಲಿ ಇದ್ದಾರೆ ಎಂದು ಮೊದಲು ವರದಿಯಾಗಿತ್ತು. ಆದರೆ ತಜಕಿಸ್ತಾನ ಸರ್ಕಾರ ಅಶ್ರಫ್ ತಮ್ಮ ದೇಶದಲ್ಲಿ ಇಲ್ಲ ಎಂದು ಹೇಳಿತ್ತು. ಬಳಿಕ ಒಮನ್ ದೇಶಕ್ಕೆ ಹಾರಿ ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

Source: publictv.in Source link