ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್​ ಲಭ್ಯ? -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ರೌಂಡಪ್​​​

ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್​ ಲಭ್ಯ? -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ರೌಂಡಪ್​​​

1. ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

blank

ಇಂದಿನಿಂದ ಸೆಪ್ಟಂಬರ್‌ 3ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ಈ ಬಾರಿ 18,414 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಾಜ್ಯದ 187 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ RTPCR ನೆಗೇಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, 72 ಗಂಟೆಗಳ ನೆಗೆಟಿವ್ ರಿಪೋರ್ಟ್ ನೀಡಬೇಕಾಗಿದೆ. ಡೆಸ್ಕ್​ಗೆ ಒಬ್ಬರಂತೆ ಪರೀಕ್ಷಾ ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಆತಂಕವಿಲ್ಲದೇ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

2. ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸಚಿವ ಸಮರ್ಥನೆ

ತೈಲ ಬೆಲೆ ಏರಿಕೆಯನ್ನ ಕೇಂದ್ರ ಪೆಟ್ರೋಲಿಯಂ ಸಚಿವ ಹರ್​ದೀಪ್​ ಸಿಂಗ್​ ಪುರಿ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ತೈಲ ಬೆಲೆ ಏರಿಕೆ ವಿಷಯವಾಗಿ ಕೇಂದ್ರ ಸರ್ಕಾರ ಸೂಕ್ಷ್ಮ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೆ. ದೇಶದಲ್ಲಿ ಇಂಧನಗಳ ಬೆಲೆ ಏರಿಕೆ ಮಾಡಬೇಕಾದ್ರೆ ನಮ್ಮ ಸರ್ಕಾರ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಳ್ಳುತ್ತೆ. ಪೆಟ್ರೋಲ್​, ಡೀಸೆಲ್​ಗಳ ಮೇಲೆ ಇರುವ ತೆರಿಗೆಗಳನ್ನ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ. ಇದು ನಮ್ಮ ಸರ್ಕಾರ ಚಾಣಾಕ್ಷತನವನ್ನು ತೋರಿಸುತ್ತೆ ಅಂತ ಹರ್​ದೀಪ್​ ಸಿಂಗ್​ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

3. ₹2 ಕೋಟಿ ವೆಚ್ಚದಲ್ಲಿ ಆಂಧ್ರ ಸಿಎಂ ದೇವಸ್ಥಾನ

blank

ನಿನ್ನೆಯಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತ ಮೋದಿಗಾಗಿ ದೇಗುಲ ನಿರ್ಮಾಣ ಮಾಡಿದ್ರು. ಈಗ ಆಂಧ್ರದ ಚಿತ್ತೂರಿನ ತಿರುಪತಿಯಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ದೇಗುಲವನ್ನ ವೈಎಸ್ಆರ್​ ಪಕ್ಷದ ಶಾಸಕ ಬಿ ಮಧುಸೂಧನ್ ರೆಡ್ಡಿ ನಿರ್ಮಿಸಿದ್ದಾರೆ. ಇತ್ತೀಚಿಗಷ್ಟೇ ಸಿಎಂ ಬಡವರ ಏಳಿಗೆಗಾಗಿ ವಿಶೇಷವಾಗಿ ನವರತ್ನಲು ಯೋಜನೆ ಜಾರಿ ಮಾಡಿದ್ದರು. ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಛದಲ್ಲಿ ನಿರ್ಮಾಣವಾಗಿರುವ ದೇಗುಲಕ್ಕೆ ನವರತ್ನ ಆಲಯಂ ಅಂತ ಹೆಸರಿಡಲಾಗಿದೆ. ದೇಗುಲದಲ್ಲಿ ಜಗನ್​ ಅವರ ಚಿನ್ನದ ಪ್ರತಿಮೆ ಇರಿಸಲಾಗಿದೆ.

4. ಭಾರತದ ಆಮದು-ರಫ್ತು ಸ್ಥಗಿತ, ಡ್ರೈ ಪ್ರೂಟ್​ ಬೆಲೆ ಏರಿಕೆ

ಅಫ್ಘಾನಿಸ್ತಾನ್​ ವಶಕ್ಕೆ ಪಡೆದ ಬೆನ್ನಲ್ಲೇ ತಾಲಿಬಾನ್​ ಭಾರತದ ಜೊತೆಗಿನ ಎಲ್ಲ ಆಮದು ಮತ್ತು ರಫ್ತು ವ್ಯವಹಾರ ಸ್ಥಗಿತಗೊಳಿಸಿದೆ. ಪಾಕಿಸ್ತಾನ ಸಾರಿಗೆ ಮಾರ್ಗದ ಮೂಲಕ ನಡೆಯುವ ಎಲ್ಲ​ ಆಮದು-ರಫ್ತು ವ್ಯವಹಾರವನ್ನು ಸದ್ಯ ತಾಲಿಬಾನ್​ ತಡೆಹಿಡಿದಿದೆ. ಈ ಬೆನ್ನಲ್ಲೇ ಭಾರತದಲ್ಲಿ ಡ್ರೈ ಫ್ರೂಟ್​ಗಳ ಬೆಲೆ ಏರಿಕೆ ಆಗಿದೆ. ಭಾರತವು ಅಪ್ಘಾನಿಸ್ತಾನದಿಂದ ಬಾದಾಮಿ, ಪಿಸ್ತಾ, ಅಂಜೂರ ಹೀಗೆ ಮುಂತಾದ ಡ್ರೈ ಪ್ರೂಟ್​ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದ್ರೆ ತಾಲಿಬಾನಿಗಳು ಅಪ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಭಾರತಕ್ಕೆ ಸರಬರಾಜು ಆಗ್ತಿದ್ದ ಡ್ರೈ ಫ್ರೂಟ್​ ಸ್ಥಗಿತಗೊಳಿಸಿದೆ ಅಂತ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

5. ‘ಶೀಘ್ರವೇ ನನ್ನ ದೇಶಕ್ಕೆ ವಾಪಾಸ್ಸಾಗಲಿದ್ದೇನೆ’

blank

ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಫೇಸ್​ಬುಕ್​ನಲ್ಲಿ ಮಾತನಾಡಿರುವ ಅಶ್ರಫ್ ಘನಿ, ದೇಶದ ಸುರಕ್ಷತೆಯನ್ನು, ದೇಶದ ಭದ್ರತಾ ಪಡೆಗಳಿಗೆ ವಹಿಸಿ ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಸದ್ಯಕ್ಕೆ, ನಾನು ಎಮಿರೇಟ್ಸ್‌ನಲ್ಲಿದ್ದು, ಶೀಘ್ರದಲ್ಲೇ ಅಫ್ಘಾನಿಸ್ತಾನಕ್ಕೆ ವಾಪಸಾಗುವ ಕುರಿತು ಯೋಚಿಸುತ್ತಿದ್ದೇನೆ ಎಂದಿದ್ದಾರೆ.

6. ಅಫ್ಘನ್​ನಲ್ಲಿ ಸಮ್ಮಿಶ್ರ ಸರ್ಕಾರ ರಚನೆ?
ಅಫ್ಘನಿಸ್ತಾನದಲ್ಲಿ ನೂತನ ಸರ್ಕಾರ ರಚನೆಗಾಗಿ ತಾಲಿಬಾನ್​ ಕಮಾಂಡರ್​ ಆಗಿರುವ ಅನಾಸ್​ ಹಕ್ಕಾನಿ ಅಫ್ಘನ್​ನ ಮಾಜಿ ಅಧ್ಯಕ್ಷ ಹಮೀದ್​ ಕರ್ಜೈಯನ್ನು ಭೇಟಿಯಾಗಿದ್ದಾರೆ. ತನ್ನದೇ ಸರ್ಕಾರ ರಚನೆಯಾದರೆ ಜಾಗತೀಕ ಮಟ್ಟದಲ್ಲಿ ಮಾನ್ಯತೆ ದೊರೆಯುವುದಿಲ್ಲ ಎಂಬುದನ್ನು ಅರಿತಿರುವ ತಾಲಿಬಾನ್​ಗಳು ಹಿಂದಿನ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಹಲವರನ್ನು ಸೇರಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಹಾಗಾಗಿ ಅಫ್ಘನ್​ನಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಎಲ್ಲಾ ಸಾಧ್ಯತೆಗಳು ಇವೆ.

7. ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್​ ಲಭ್ಯ?

blank

ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಬಹುದು ಅಂತ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕಿ ಪ್ರಿಯಾ ಅಬ್ರಹಾಂ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟಿಟಿ ವೇದಿಕೆಯ ಸಂದರ್ಶನದಲ್ಲಿ ಭಾಗಿಯಾಗಿದ್ದ ಪ್ರಿಯಾ ಅಬ್ರಹಾಂ 2 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು 3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗಗಳ ಫಲಿತಾಂಶ ಶೀಘ್ರವಾಗಿ ದೊರೆಯಲಿದ್ದು, ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್​ ಲಸಿಕೆ ನೀಡಬಹುದು ಅಂತ ತಿಳಿಸಿದ್ದಾರೆ.

8. ಮೋದಿಗೆ ಧನ್ಯವಾದ ಹೇಳಿದ ‘ಚಿನ್ನದ ಹುಡುಗ’

ಪ್ರಧಾನಿ ನರೇಂದ್ರ ಮೋದಿಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಟ್ವೀಟ್​ ಮಾಡುವ ಮೂಲಕ ಧನ್ಯವಾದ ಹೇಳಿದ್ದಾರೆ. ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಂತರ ನೀರಜ್​ ಚೋಪ್ರಾ, ಭಾರತದ ಕ್ರೀಡಾಪಟುಗಳು ಹಾಗೂ ಅಥ್ಲೀಟ್​ಗಳನ್ನು ಸದಾ ಪ್ರೇರೆಪಿಸಿ ಹಾಗೂ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಅಂತ ಮೋದಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗೂ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ದಕ್ಕೆ ಬಹಳ ಸಂಸತವಾಯಿತು ಅಂತ ತಿಳಿಸಿದ್ದಾರೆ.

9. ಟೆಸ್ಟ್​ ಱಂಕಿಂಗ್​ ಪಟ್ಟಿಯಲ್ಲಿ ರಾಹುಲ್​ಗೆ​ 37ನೇ ಸ್ಥಾನ

blank

ಲಾರ್ಡ್ಸ್​ ಮೈದಾನದಲ್ಲಿ ಭರ್ಜರಿ ಶತಕ ಸಿಡಿಸಿದ ಕೆ.ಎಲ್​ ರಾಹುಲ್​, ಐಸಿಸಿ ಟೆಸ್ಟ್​ ಱಂಕಿಂಗ್​ ಪಟ್ಟಿಯಲ್ಲಿ 37ನೇ ಸ್ಥಾನಕ್ಕೆ ಏರಿದ್ದಾರೆ. ಈ ಮೊದಲು 56ನೇ ಸ್ಥಾನದಲ್ಲಿದ್ದ ರಾಹುಲ್​ 19 ಸ್ಥಾನಗಳ ಜಿಗಿತದಿಂದ 37ನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 5ನೇ ಸ್ಥಾನದಲ್ಲಿ ಇದ್ದರೆ, ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ತಲಾ 4 ವಿಕೆಟ್​ ಪಡೆದಿದ್ದ ಸಿರಾಜ್​, ಬೌಲಿಂಗ್​ನಲ್ಲಿ 18 ಸ್ಥಾನಗಳ ಜಿಗಿತದಿಂದ 38ನೇ ಸ್ಥಾನಕ್ಕೇರಿದ್ದಾರೆ.

10. ಸೋನು ಸೂದ್​​ಗಾಗಿ ಸೈಕಲ್​ನಲ್ಲೇ ಪರ್ವತ ಏರಿದ ಅಭಿಮಾನಿ

blank

ಬಾಲಿವುಡ್ ನಟ ಸೋನು ಸೂದ್​ ಸಹಾಯ ಗುಣ ಮೆಚ್ಚಿ ಅನೇಕ ಮಂದಿ ಅವರಿಗೆ ವಿಭಿನ್ನವಾಗಿ ಸಲಾಂ ಹೇಳಿದ್ದಾರೆ. ಅದರಂತೆ ಇಲ್ಲೊಬ್ಬ ಅಭಿಮಾನಿ ಆಫ್ರಿಕಾ ಖಂಡದ ಅತಿ ಎತ್ತರದ ಕಿಲಿಮಂಜಾರೋನ ಪರ್ವತವನ್ನ ಸೈಕಲ್​ನಲ್ಲಿ ಏರುವ ಮೂಲಕ ವಿಭಿನ್ನವಾಗಿ ಧನ್ಯವಾದ ತಿಳಿಸಿದ್ದಾರೆ. ಉಮಾ ಸಿಂಗ್​ ಎಂಬ ವ್ಯಕ್ತಿ, ಪರ್ವತದ ತುತ್ತ ತುದಿಯಲ್ಲಿ ನಿಂತು ಸೋನು ಸೂದ್​ರವರ ಪೋಸ್ಟರ್​ ಹಿಡಿದು ಗೌರವ ಸಲ್ಲಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಸೋನು ಸೂದ್​ ಆಶ್ಚರ್ಯಗೊಂಡಿದ್ದು, ನಾನು ಸಹ ಈಗ ಕಿಲಿಮಂಜಾರೊನ ಪರ್ವತ ಏರಿದಷ್ಟೇ ಹೆಮ್ಮೆ ಆಗ್ತಿದೆ ಅಂತ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link