ಹಿಂದೂ ದೇವತೆಗಳಿಗೆ ನಾನು ಅಪಮಾನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ – ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

ಹಿಂದೂ ದೇವತೆಗಳಿಗೆ ನಾನು ಅಪಮಾನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ – ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

ಬೆಂಗಳೂರು: ಹಿಂದೂ ದೇವತೆಗಳಿಗೆ ಆಕ್ಷೇಪರ್ಹ ಪದ ಬಳಕೆ ಮಾಡಿರುವ ಆರೋಪದ ಕುರಿತಾಗಿ ತಮ್ಮ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವ ಕಾರಣ, ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

ಪೊಲೀಸರ‌ ತನಿಖೆಗೆ ಸಂಪೂರ್ಣ ಸಹಕಾರ
ತಮ್ಮ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯವು ತನಿಖೆ ನಡೆಸಲು ಕೊಡಿಗೆಹಳ್ಳಿ ಪೊಲೀಸರಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವುದಾಗಿ ತಿಳಿಸಿದ್ದಾರೆ. ದೇಶದ ಕಾನೂನಿಗಿಂತ ಯಾರೂ ಕೂಡ ದೊಡ್ಡವರಿಲ್ಲ.ಈ ನೆಲದ ಜವಾಬ್ದಾರಿಯುತ ಪ್ರಜೆಯಾಗಿರುವ ನಾನು ನ್ಯಾಯಾಲಯ ನೀಡಿರುವ ಆದೇಶಕ್ಕೆ ಬದ್ದನಾಗಿದ್ದೇನೆ ಎಂದಿದ್ದಾರೆ.

ಹಿಂದೂ ಧರ್ಮ ಮತ್ತು ಆಚಾರ, ವಿಚಾರ ಸಂಪ್ರದಾಯ ಹಾಗೂ ದೇವತೆಗಳ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲೂ ಹಿಂದೂ ಧರ್ಮಕ್ಕಾಗಲಿ, ದೇವತೆಗಳ ಬಗ್ಗೆ ಅಪಮಾನ ಮಾಡುವ ಕೆಲಸ ಮಾಡಿಲ್ಲ. ಇದು ಅಚಾತುರ್ಯದಿಂದ ಆಗಿರುವ ಪ್ರಮಾದವೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಘಟನೆ ಕುರಿತಂತೆ ಜನತೆಯಲ್ಲಿ ಕ್ಷಮೆ ಕೇಳಿದ್ದೇನೆ
ವಾಟ್ಸಾಪ್ ಗ್ರೂಪ್‍ಗೆ ಕಣ್ತಪ್ಪಿನಿಂದ ಯಾರೋ ಕಳುಹಿಸಿದ ಸಂದೇಶವನ್ನು ಮರು ಫಾರ್ವರ್ಡ್ ಮಾಡಿದ್ದಾರೆ. ಈ ಅಚಾತುರ್ಯ ತಮ್ಮ ಗಮನಕ್ಕೆ ಬಂದ ತಕ್ಷಣ ಸಂದೇಶವನ್ನು ಡಿಲೀಟ್ ಮಾಡಲಾಗಿತ್ತು. ತಕ್ಷಣ ನಾನು ರಾಜ್ಯದ ಜನತೆಯ ಕ್ಷಮೆ ಕೇಳಿದ್ದೇನೆ ಎಂದು ಸಚಿವ ನಿರಾಣಿ ಅವರು ಹೇಳಿದ್ದಾರೆ.

ಅಚಾತುರ್ಯದಿಂದ ಬಂದಿದ್ದ ಮೆಸೇಜ್ ಫಾರ್ವರ್ಡ್ ಆಗಿದೆ. ನಾನು ಸರ್ವಧರ್ಮ ಸಹಿಷ್ಣುತೆಯನ್ನು ಗೌರವಿಸುತ್ತೇನೆ. ಯಾವುದೇ ಧರ್ಮದ ಬಗ್ಗೆ ಎಂದೂ ಹಗುರವಾಗಿ ಮಾತನಾಡಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ನಮ್ಮ ಕುಟುಂಬವು ತಲಾತಲಾಂತರದಿಂದಲೂ ಆಚಾರವಿಚಾರ, ಸಂಪ್ರದಾಯವನ್ನು ನಂಬಿಕೊಂಡು ಬಂದಿದೆ. ನಾವು ಎಂದಿಗೂ ಯಾವುದೇ ಧರ್ಮವನ್ನಾಗಲಿ, ಅಲ್ಲಿನ ನಂಬಿಕೆಗಳ ಬಗ್ಗೆ ಅಪಮಾನಿಸುವಂತಹ ಕೆಲಸವನ್ನು ಮಾಡಿಲ್ಲ. ನಾನು ಈಗಾಗಲೇ ಇದರ ಬಗ್ಗೆ ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದ್ದಾರೆ.

Source: newsfirstlive.com Source link