ವಿಚಾರಣಾಧೀನ ಖೈದಿ ಜೈಲಿನಲ್ಲಿ ಸಾವು

ರಾಯಚೂರು: ಮಗನ ಕೊಲೆ ಆರೋಪದಲ್ಲಿ ಜೈಲುಪಾಲಾಗಿದ್ದ ಖೈದಿ ಏಕಾಏಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕು ಕಾರಾಗೃಹದಲ್ಲಿ ನಡೆದಿದೆ.

ಹನುಮಂತ(70) ಮೃತಪಟ್ಟಿರುವ ವಿಚಾರಣಾಧೀನ ಖೈದಿ. ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಜುಲೈ 28 ರಂದು ಕೊಲೆ ಪ್ರಕರಣ ನಡೆದಿತ್ತು. ಆರೋಪಿ ಹನುಮಂತನನ್ನು ಜುಲೈ 29ರಂದು ವಶಕ್ಕೆ ಪಡೆದಿದ್ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ 18 ವರ್ಷದ ಮಗ ಭೀಮಣ್ಣನನ್ನು ಕಾಲುವೆಗೆ ನೂಕಿ ಕೊಲೆ ಮಾಡಿರುವ ಆರೋಪವನ್ನು ಹನುಮಂತ ಎದುರಿಸುತ್ತಿದ್ದ. ಇದನ್ನೂ ಓದಿ: ಕೇಂದ್ರ ಸಚಿವ ಭಗವಂತ್ ಖೂಬಾ ನೇತೃತ್ವದಲ್ಲಿ ರಾಯಚೂರಿನಲ್ಲಿ ಜನಾಶೀರ್ವಾದ ಯಾತ್ರೆ

ಆಗಸ್ಟ್ 18 ರಂದು ಹನುಮಂತ ಹಠಾತ್ತನೆ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಆರೋಪಿ ಮೃತ ದೇಹ ಇರಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತನ ಸಂಬಂಧಿಕರು ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ವಿಚಾರಣಾಧೀನ ಖೈದಿ ಸಾವಿನ ಕಾರಣ ತಿಳಿದು ಬರಲಿದೆ.

Source: publictv.in Source link