ರಾಯರ ದರ್ಶನ ಪಡೆದ ಕೇಂದ್ರ ಸಚಿವ ಭಗವಂತ ಖೂಬಾ

ರಾಯಚೂರು: ಜನಾಶೀರ್ವಾದ ಯಾತ್ರೆಯಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾ, ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದರು.

ರಾಯರ ವೃಂದಾವನಕ್ಕೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು. ನಿನ್ನೆ ತಡರಾತ್ರಿವರೆಗೂ ರಾಯಚೂರಲ್ಲಿ ಜನಾಶೀರ್ವಾದ ಯಾತ್ರೆ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದ ಸಚಿವ ಖೂಬಾ, ಬೆಳಗ್ಗೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಇಂದು ಬಳ್ಳಾರಿ ಹಾಗೂ ಕೊಪ್ಪಳದಲ್ಲಿಯೂ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

ದೂರು ದಾಖಲು
ಆಗಸ್ಟ್ 18ರಂದು ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ವೇಳೆ ಕೋವಿಡ್ ನಿಯಮಗಳ ಉಲ್ಲಂಘನೆ ಹಿನ್ನೆಲೆ ಪ್ರಕರಣ ದಾಖಲಾಗಿದೆ. ರಾತ್ರಿ 9.30ರ ಬಳಿಕವೂ ನಗರದಲ್ಲಿ ಮೆರವಣಿಗೆ ಹಾಗೂ ಸಭೆ ನಡೆಸುವ ಮೂಲಕ ನೈಟ್ ಕಫ್ರ್ಯೂ ಉಲ್ಲಂಘನೆ ಮಾಡಿದ್ದರು. ಹೀಗಾಗಿ ವೀರಶೈವ ಕಲ್ಯಾಣ ಮಂಟಪದ ವ್ಯವಸ್ಥಾಪಕರು ಹಾಗೂ ಮಾಲೀಕರ ವಿರುದ್ಧ ನಗರದ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

ರಾಯಚೂರು ಪೊಲೀಸರಿಂದ ಬಿಜೆಪಿ ಮುಖಂಡರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದು, ಕಾರ್ಯಕ್ರಮ ಆಯೋಜಿಸಿ ನಿಯಮ ಉಲ್ಲಂಘಿಸಿದ್ದ ಆಯೋಜಕರ ಮೇಲೆ ಪ್ರಕರಣ ದಾಖಲಾಗಿಲ್ಲ. ಕಲ್ಯಾಣ ಮಂಟಪದವರ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ರಾತ್ರಿ 9ರ ನಂತರವೂ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಸಭೆ ಮಾಡಲಾಗಿತ್ತು. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

Source: publictv.in Source link