ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಜನಾಶೀರ್ವಾದ ಯಾತ್ರೆ ನಗರಕ್ಕೆ ತಲುಪಿದ್ದು, ಇಂದು ಉಡುಪಿಯಲ್ಲಿ 11 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಜನಾಶೀರ್ವಾದ ಕಾರ್ಯಕ್ರಮ ಆರಂಭವಾಗಿದೆ.

ಇಂದು ಬೆಳಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಕೈಗೊಂಡರು. ಕಿಂಡಿಯ ಮೂಲಕ ಕಡಗೋಲು ಕೃಷ್ಣನ ದರ್ಶನ ಮಾಡಿದ ಸಚಿವೆ, ರಥಬೀದಿಯಲ್ಲಿರುವ ಅಷ್ಟ ಮಠಗಳಿಗೆ ಭೇಟಿ ನೀಡಿದರು. ಅನಂತೇಶ್ವರ, ಚಂದ್ರಮೌಳೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರ್ಯಾಯ ಅದಮಾರು ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಅಲ್ಲ, ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತಿದ್ದಾರೆ: ಶೋಭಾ ಕರಂದ್ಲಾಜೆ

ಈ ಸಂದರ್ಭ ಪರ್ಯಾಯ ಶ್ರೀಗಳು ನೂತನ ಸಚಿವರಿಗೆ ಅದಮಾರು ಸ್ವಾಮೀಜಿ ಗೌರವ ಸಮರ್ಪಣೆ ಮಾಡಿದರು. ಅದಮಾರು ಹಿರಿಯ ಸ್ವಾಮೀಜಿ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಅದಮಾರು ಮಠದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೃಷಿಕಾರ್ಯ ಕೃಷ್ಣನಿಗೆ ಪ್ರಿಯವಾದ ಕೆಲಸ. ಕೃಷಿ ಖಾತೆ ನನಗೆ ಸಿಕ್ಕಿದೆ, ಇದು ನನ್ನ ಸೌಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ರೈತರಿಗೆ ಬಹಳ ಸಹಾಯ ಮಾಡಲು ಅವಕಾಶವಾಗಿದೆ ಎಂದು ಹೇಳಿದರು.

ರೈತರ ಆದಾಯ ದ್ವಿಗುಣ ಮಾಡಬೇಕು ಎಂಬುದು ಪ್ರಧಾನಿಗಳ ಸಂಕಲ್ಪ. ಪರ್ಯಾಯ ಮಠವು ಕೃಷಿಗೆ ಆದ್ಯತೆ ಕೊಟ್ಟಿದೆ. ಹಲವಾರು ರೈತಪರವಾದ ಕೆಲಸಗಳಿಗೆ ಕೃಷಿ ಪ್ರಧಾನ ಕೆಲಸಗಳಿಗೆ ಮಠ ಬೆಂಬಲ ನೀಡುತ್ತಿದೆ. ಮೋದಿ ಅವರ ಕೈ ಬಲಪಡಿಸಲು ದೇವರ ಆಶೀರ್ವಾದ ಬೇಕು. ಸ್ವಾಮೀಜಿಗಳ ಆಶೀರ್ವಾದ ಬೇಕು ಎಂದು ಹೇಳಿದರು.

Source: publictv.in Source link