ಬದುಕಿನ ನಂಬಿಕೆ ಕಳೆದುಕೊಂಡ ಆಫ್ಘಾನ್ ಮಹಿಳೆಯರು.. ಗಗನಕ್ಕೇರಿದ ಬುರ್ಖಾ ರೇಟ್..!

ಬದುಕಿನ ನಂಬಿಕೆ ಕಳೆದುಕೊಂಡ ಆಫ್ಘಾನ್ ಮಹಿಳೆಯರು.. ಗಗನಕ್ಕೇರಿದ ಬುರ್ಖಾ ರೇಟ್..!

ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿಯ ಬೆಳವಣಿಗೆಗಳು ಬೆಚ್ಚಿ ಬೀಳಿಸುವಂತಿವೆ. 20 ವರ್ಷಗಳ ಕಾಲ ಸ್ವತಂತ್ರವಾಗಿ ಬದುಕಿದ ಮಹಿಳೆಯರಂತೂ ಚಿಂತಾಕ್ರಾಂತರಾಗಿದ್ದಾರೆ. ಅಫ್ಘಾನಿಸ್ತಾನ್‌ ವಶಕ್ಕೆ ಪಡೆಯುತ್ತಲೇ ತಾಲಿಬಾನಿ ಉಗ್ರರು ಸುದ್ದಿಗೋಷ್ಠಿ ನಡೆಸಿದ್ದಾರೆ.  ​

ಆ ಸುದ್ದಿಗೋಷ್ಠಿಯಲ್ಲಿ ತಾಲಿಬಾನಿಗಳು ಮಹಿಳೆಯರ ಬಗ್ಗೆ ಹೇಳಿದ್ದೇನು ಗೊತ್ತಾ? ತಾವು ಮಹಿಳೆಯರನ್ನ ಅವಕಾಶ ವಂಚಿತರನ್ನಾಗಿಸೋದಿಲ್ಲ. ಆದ್ರೆ ಶರಿಯಾ ಕಾನೂನಿನ ಪ್ರಕಾರ ಮಾತ್ರ ಅವಕಾಶ ಕೊಡ್ತೀವಿ.. ಹಿಂಸೆ ಕೊಡುವುದಿಲ್ಲ, ಉದ್ಯೋಗಕ್ಕೆ ಅಡ್ಡಿಪಡಿಸುವುದಿಲ್ಲ.. ಶರಿಯಾ ಕಾನೂನು ಎಲ್ಲೆಲ್ಲಿ ಅವಕಾಶ ನೀಡುತ್ತೋ ಅಲ್ಲಿ ಅವಕಾಶ ನೀಡ್ತೀವಿ.. ಶಾಲಾ ಕಾಲೇಜು ಬಂದ್‌ ಮಾಡುವುದಿಲ್ಲ ಹೀಗೆಲ್ಲ ಹೇಳುತ್ತಲೇ ಇದ್ದಾರೆ. ಇಂತಹ ಮಾತು ಅಫ್ಘಾನ್‌ ಪ್ರಜೆಗಳಿಗೆ ಮಾತ್ರವಲ್ಲ, ಇಡೀ ವಿಶ್ವದಲ್ಲಿರೋ ಜನರಿಗೆಲ್ಲ ಅಚ್ಚರಿ ಮೇಲೆ ಅಚ್ಚರಿ ಉಂಟು ಮಾಡಿ ಬಿಟ್ಟಿದೆ. ಆದ್ರೆ, ಈ ಹಿಂದೆ ತಾಲಿಬಾನಿಗಳ ಆಡಳಿತ ಕ್ರೌರ್ಯವನ್ನು ಕಣ್ಣಾರೆ ನೋಡಿದ ಮಹಿಳೆಯರಿಗೆ ನಂಬಿಕೆ ಬರ್ತಾ ಇಲ್ಲ.

ತಾಲಿಬಾನಿ ಹಿಡಿತಕ್ಕೆ ಸಿಗುತ್ತಿದ್ದಂತೆ ನಗರಗಳೆಲ್ಲಾ ನಿಶ್ಯಬ್ಧ
ಬಹುತೇಕ ಅಂಗಡಿಗಳು ಬಂದ್‌, ಆದ್ರೆ, ಅದೊಂದು ಅಂಗಡಿ ಓಪನ್‌

ಕಾಬುಲ್‌ ತಾಲಿಬಾನಿಗಳ ವಶವಾಗುತ್ತಲೇ ಅಲ್ಲಿಯ ಸರ್ಕಾರ ಪತನವಾಗುತ್ತದೆ. ಅಧ್ಯಕ್ಷನಾಗಿದ್ದ ಅಶ್ರಫ್‌ ಘನಿ ವಿದೇಶಕ್ಕೆ ಪರಾರಿಯಾಗುತ್ತಾನೆ. ಇದರಿಂದ ಇಡೀ ಅಫ್ಘಾನ್‌ನಲ್ಲಿ ಅರಾಜಕಥೆ ಸೃಷ್ಟಿಯಾಗಿ ಬಿಡುತ್ತದೆ. ಜನ ಮನೆ ಬಿಟ್ಟು ಹೊರಗೆ ಬರಲು ಭಯಪಡುತ್ತಾರೆ. ಹೀಗಾಗಿಯೇ ರಸ್ತೆಗಳೆಲ್ಲ ವಾಹನ ಸಂಚಾರ ಇಲ್ಲದೇ ಭಿಕೋ ಎನ್ನುತ್ತವೆ. ಅಂಗಡಿ ಮುಂಗಟ್ಟುಗಳು ಬಂದ್‌ ಆಗುತ್ತವೆ.

ಎಲ್ಲಾ ನಗರಗಳಲ್ಲಿಯೂ ಬುರ್ಖಾ ಅಂಗಡಿ ಓಪನ್‌
ಬುರ್ಖಾ ಖರೀದಿಗೆ ಮುಗಿ ಬಿದ್ದ ಮಹಿಳೆಯರು

ನಗರಗಳೆಲ್ಲಾ ನಿಶಬ್ಧವಾಗಿದ್ರೆ, ಬುರ್ಖಾ ಅಂಡಿಗಳ ಮುಂದೆ ಮಾತ್ರ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಯಾಕಂದ್ರೆ, ತಾಲಿಬಾನಿಗಳ ಆಡಳಿತ ಹೇಗಿರುತ್ತೆ? ಅವರು ಶರಿಯಾ ಕಾನೂನನ್ನು ತಮಗೆ ಬೇಕಾದ ಹಾಗೇ ಹೇಗೆ ಪರಿವರ್ತಿಸಿಕೊಳ್ಳುತ್ತಾರೆ ಅನ್ನೋದು ಅಫ್ಘಾನ್‌ ಮಹಿಳೆಯರು ಈ ಹಿಂದೆ ನೋಡಿದ್ದಾರೆ. ಇದೇ ಕಾರಣಕ್ಕೆ ಇನ್ಮೇಲೆ ಬುರ್ಖಾ ಧರಿಸದೇ ಎಲ್ಲಿಗೂ ಹೋಗಲಾಗದು ಅನ್ನೋದು ಅರಿವಾಗಿ ಬಿಟ್ಟಿದೆ. ಹೀಗಾಗಿ ಮಹಿಳೆಯರು ಎದ್ನೋ ಬಿದ್ನೋ ಅಂತ ಬುರ್ಖಾ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ಅಗತ್ಯ ವಸ್ತು ಖರೀದಿಗಿಂತ ಬುರ್ಖಾ ಖರೀದಿಗೆ ಆದ್ಯತೆ
ಶಾಲಾ ಕಾಲೇಜುಗಳು ಬಂದ್‌, ಬುರ್ಖಾ ಅಂಗಡಿ ಮುಂದೆ ಸರದಿ ಸಾಲು

ಅಫ್ಘಾನ್‌ ಜನ ದಿನ ಬಳಕೆ ವಸ್ತುಗಳ ಖರೀಗಿದೆ ಮುಗಿ ಬೀಳುತ್ತಿಲ್ಲ. ಯಾವುದೇ ಆತುರ ತೋರಿಸುತ್ತಿಲ್ಲ. ಅವರ ಎಲ್ಲಾ ಆತುರ ಬುರ್ಖಾ ಖರೀದಿ ಮೇಲೆ ಬಿದ್ದಿದೆ. ಹೀಗಾಗಿ ಬುರ್ಖಾ ಅಂಗಡಿಗಳ ಮುಂದೆ ಸರದಿ ಸಾಲುಗಳೇ ಇವೆ. ಅದರಲ್ಲಿಯೂ ಅರಾಜಕಥೆ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿದೆ. ಇಷ್ಟು ದಿನ ಮಹಿಳೆಯರು ತಮಗೆ ಬೇಕಾದಾಗ ಮಾತ್ರ ಬುರ್ಖಾ ಧರಿಸುತ್ತಾ, ಬೇಡವಾದಾಗ ಬೇರೆ ಡ್ರೆಸ್‌ ಹಾಕಿಕೊಳ್ಳುತ್ತಾ ಸಂಚಾರ ಮಾಡುತ್ತಿದ್ರು.

ಇದನ್ನೂ ಓದಿ: ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಬುರ್ಖಾ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ
ಬುರ್ಖಾಗಳಿಗೆ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯೂ ಏರಿ ಬಿಟ್ಟಿದೆ. ಇಲಿಗೆ ಪ್ರಾಣ ಸಂಕಟ ಅಂದ್ರೆ, ಬೆಕ್ಕಿಗೆ ಚೆಲ್ಲಾಟ ಅನ್ನೋ ಗಾದೆ ಇದೆಯಲ್ವ ಹಾಗಾಗಿದೆ ಅಫ್ಘನ್‌ ವ್ಯಾರಿಗಳ ಮತ್ತು ಮಹಿಳೆಯರ ಕಥೆ. ಮಹಿಳೆಯರಿಗೆ ಬುರ್ಖಾ ಅನಿವಾರ್ಯ ಆದ್ರೆ, ಇದೇ ಒಳ್ಳೆಯ ಸಮಯ ಅಂತ ಅಲ್ಲಿಯ ವ್ಯಾಪಾರಿಗಳು ಬೆಲೆಯನ್ನು ಏರಿಸಿ ಬಿಟ್ಟಿದ್ದಾರೆ. ಅದರಲ್ಲಿಯೂ ದಪ್ಪ ಇರುವ, ನೀಲಿ ಬಣ್ಣದ ಬುರ್ಖಾಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

ಬೆಡ್‌ ಶೀಟ್‌ ಅನ್ನೇ ಬುರ್ಖಾ ಮಾಡಿಕೊಳ್ಳುತ್ತೇವೆ ಅಂದ ಮಹಿಳೆ
ತಾಲಿಬಾನಿಗಳ ಕ್ರೂರ ನಡೆಗೆ ಅಫ್ಘಾನ್‌ ಮಹಿಳೆಯರು ಬೆದರಿ ಹೋಗಿದ್ದಾರೆ. ಈ ಬಗ್ಗೆ ಕಾಬುಲ್‌ ಮಹಿಳೆಯೊಬ್ಬರು ಹೇಳಿದ್ದು ಕೇಳಿದ್ರೆ ಅಲ್ಲಿಯ ಪರಿಸ್ಥಿತಿ ಅರ್ಥವಾಗಿ ಬಿಡುತ್ತೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು ಗೊತ್ತಾ? ತಮ್ಮ ಮನೆಯಲ್ಲಿ ಎರಡು ಬುರ್ಖಾ ಮಾತ್ರ ಇದೆ. ತಾನು ತನ್ನ ಸಹೋದರಿಯರು ಅದನ್ನು ಹಂಚಿಕೊಳ್ಳುತ್ತಾ ಇದ್ವಿ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅದನ್ನು ಧರಿಸುತ್ತಾ ಇದ್ವಿ. ಆದ್ರೆ, ಈಗ ತಾಲಿಬಾನಿಗಳು ಬುರ್ಖಾವನ್ನು ಕಡ್ಡಾಯ ಮಾಡಿಯೇ ಮಾಡುತ್ತಾರೆ. ಹೊರಗಡೆ ಹೋಗಿ ಬುರ್ಖಾ ಖರೀದಿಸಬೇಕು ಅಂದ್ರೆ ಹಣವಿಲ್ಲ. ಹೀಗಾಗಿ ವಿಧಿಯಿಲ್ಲದೇ ಮನೆಯಲ್ಲಿರೋ ಬೆಡ್‌ಶೀಟ್‌ಗಳನ್ನೇ ಬುರ್ಖಾ ರೀತಿ ಮಾಡಬೇಕಾಗಿದೆ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

1996ರಿಂದ 2001ರ ವರೆಗೆ ಮಹಿಳೆಯರು ಬುರ್ಖಾ ಧರಿಸದೇ ಹೊರಗೆ ಬಂದ್ರೆ ಚಾಟಿ ಏಟು ನೀಡುವುದು, ಗನ್‌ ತೋರಿಸಿ ಹೆದರಿಸುವುದನ್ನು ಮಾಡುತ್ತಿದ್ರು. ಹೀಗಾಗಿಯೇ ತಾಲಿಬಾನಿಗಳ ಆದೇಶವನ್ನು ಯಾವ ಮಹಿಳೆಯರೂ ಉಲ್ಲಂಘಿಸುವ ಧೈರ್ಯ ತೋರಿಸುತ್ತಿರಲಿಲ್ಲ. ಈಗಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ.

ಇದನ್ನೂ ಓದಿ: ಅಫ್ಘಾನ್​​ನಲ್ಲಿದ್ದ ಭಾರತೀಯರಿಗೆ ದೇವರಂತೆ ಕಂಡ್ರು ಜೈಶಂಕರ್, ದೋವಲ್ -ಮಿಡ್​ನೈಟ್​ ಆಪರೇಷನ್​​ ಕಹಾನಿ

Source: newsfirstlive.com Source link