ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ್ರೂ ಡೋಂಟ್​​ ಕೇರ್​​; ಎಗ್ಗಿಲ್ಲದೇ ನಡೆಯುತ್ತಿದೆ ಜಾನುವಾರುಗಳ ಮಾರಾಟ

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ್ರೂ ಡೋಂಟ್​​ ಕೇರ್​​; ಎಗ್ಗಿಲ್ಲದೇ ನಡೆಯುತ್ತಿದೆ ಜಾನುವಾರುಗಳ ಮಾರಾಟ

ಹಾಸನ: ಕಳೆದ ಹದಿನೈದು ದಿನಗಳ ಹಿಂದೆ 38 ಮಂಗಗಳ ಮಾರಣ ಹೋಮವಾಗಿತ್ತು. ನಂತರ ಹೈಕೋರ್ಟ್ ಮೂಕ ಪ್ರಾಣಿಗಳ ಸಾವಿಗೆ ಕಾರಣ ಕೇಳಿ ಜಿಲ್ಲಾಡಳಿತಕ್ಕೆ ಛಾಟಿ ಬೀಸಿತ್ತು. ಬಳಿಕ ಎಚ್ಚಿತ್ತುಕೊಂಡ ಜಿಲ್ಲಾಡಳಿತ ಮಂಗಳ ಸಾವಿಗೆ ಕಾರಣರಾದ ಐವರನ್ನ ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ರು. ಈ ಘಟನೆ ಮಾಸುವ ಮುನ್ನವೇ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 18ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ.

50ಕ್ಕೂ ಹೆಚ್ಚು ಕರುಗಳನ್ನ ಉಸಿರಾಡದಂತೆ ಬಾಯಿ ಕಟ್ಟಿ ಮತ್ತು ಓಡಾಡದಂತೆ ಹಗ್ಗದಿಂದ ಕಾಲುಗಳನ್ನ ಕಟ್ಟಿದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ತಡರಾತ್ರಿ ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿ ನಡೆದಿರೋ ಘಟನೆಯಲ್ಲಿ 18ಕ್ಕೂ ಹೆಚ್ಚು ಕರುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಬೋಲೆರೋ ಗೂಡ್ಸ್ ವಾಹನ (KA 13C 9833) ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

blank

ಇನ್ನು, ದುರ್ಘಟನೆಯಲ್ಲಿ ಸುಮಾರು 18ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಅಪಘಾತದ ಶಬ್ಧಕ್ಕೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ ಸಣ್ಣಪುಟ್ಟ ಗಾಯಗಳಾಗಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಇನ್ನುಳಿದ 23ಕ್ಕೂ ಹೆಚ್ಚು ಕರುಗಳನ್ನ ರಕ್ಷಿಸಿದ್ದಾರೆ. ವಿಷಯ ತಿಳಿದ ಸ್ಥಳೀಯ ಶಾಸಕ ಲಿಂಗೇಶ್ ಮತ್ತು ಪಶುವೈದ್ಯಾಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ಕರುಗಳಿಗೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ.

ಘಟನೆಯಿಂದ ಮನನೊಂದ ಶಾಸಕ ಲಿಂಗೇಶ್ ತಮ್ಮ ಮೊಬೈಲ್​​ನಲ್ಲಿ ಸೆಲ್ಫಿ ಮೂಲಕ ಸ್ಥಳದ ಚಿತ್ರಣವನ್ನ ವಿಡಿಯೋ ಮಾಡಿದ್ದಾರೆ. ಈಗ ವಿಡಿಯೋ ಫುಲ್​​​ ವೈರಲ್​​ ಆಗಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ಗೋಹತ್ಯೆ ನಿಂತಿಲ್ಲ. ಪ್ರತಿ ಹೋಬಳಿಗೆ ಒಂದರಂತೆ ಗೋ-ಶಾಲೆ ತೆರೆಯುತ್ತೇವೆಂದು ಹೇಳಿದ್ದರು. ಆದ್ರೆ ಅಂತಹ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ತಕ್ಷಣ ಇಂತಹ ಕೃತ್ಯವೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೇಲೂರು ಶಾಸಕ ಲಿಂಗೇಶ್ ಆಗ್ರಹಿಸಿದ್ರು.

ಇದನ್ನೂ ಓದಿ: ಚಿಕ್ಕ ವಾಹನದಲ್ಲಿ 100 ಕರುಗಳನ್ನು ಸಾಗಿಸುತ್ತಿದ್ದ ರಾಕ್ಷಸರು; ವಾಹನ ಪಲ್ಟಿಯಾಗಿ 50 ಕಂದಮ್ಮಗಳ ಸಾವು

ಜೊತೆಗೆ ಇಂತಹ ಪ್ರಕರಣಕ್ಕೆ ಕೆಲವು ರೈತರು ಪರೋಕ್ಷವಾಗಿ ಸಾಥ್ ನೀಡುತ್ತಾರೆ. ಗಂಡು ಕರುಗಳು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಕರುಗಳನ್ನು ಮಾರಾಟ ಮಾಡಿಬಿಡುತ್ತಾರೆ. ಹೀಗಾಗಿ ಇದು ನಿಲ್ಲಬೇಕಾದ್ರೆ ಪ್ರತಿ ಹೋಬಳಿಯಲ್ಲಿಯೂ ಗೋಶಾಲೆಯನ್ನು ಶೀಘ್ರವಾಗಿ ತೆರೆಯಬೇಕು. ಅಥವಾ ಕಸಾಯಿ ಖಾನೆಗೆ ಮಾರಾಟ ಮಾಡುವ ಬದಲು ನಮ್ಮ ಜಮೀನಿಗೆ ತಂದು ಕರುಗಳನ್ನು ಬಿಡಿ ಎಂದು ಶಾಸಕರು ಮನವಿ ಮಾಡಿದ್ರು. ಬದುಕುಳಿದ ಕರುಗಳನ್ನ ಅರಸೀಕೆರೆ ಮತ್ತು ಮೈಸೂರು ಗೋಶಾಲೆಗಳಿಗೆ ಸ್ಥಳಾಂತರ ಮಾಡಲಾಯ್ತು.

blank

ಒಟ್ಟಿನಲ್ಲಿ ಸರ್ಕಾರವೇನೋ ಗೋ-ಹತ್ಯೆ ಕಾಯ್ದೆ ನಿಷೇದ ಮಾಡಿದೆ. ಆದ್ರೆ ಆಹಾರಕ್ಕಾಗಿ ಬಳಕೆ ಮಾಡೋ ಜನ್ರು ಮಾತ್ರ ಎಂತಹ ಕಠಿಣ ಕಾಯ್ದೆ ಬಂದ್ರು ಡೋಂಟ್ ಕೆರೆ ಅಂತಿದ್ದಾರೆ. ಪ್ರತಿ ಗ್ರಾಮೀಣ ಭಾಗದ ದನಗಳ ಸಂತೆಯಲ್ಲಿಯೂ ಸಣ್ಣಕರುಗಳು ಮತ್ತು ಅನಾರೋಗ್ಯ ಪೀಡಿತ ಜಾನುವಾರುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕುವವರೆಗೆ ಮೌನಕ್ಕೆ ಶರಣಾಗಿರೋದು ವಿಪರ್ಯಾಸವೇ ಸರಿ

ವಿಶೇಷ ವರದಿ: ಕಿರಣ್, ನ್ಯೂಸ್​​ಫಸ್ಟ್​

Source: newsfirstlive.com Source link