ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಅನುಮತಿ

ನವದೆಹಲಿ: ಎಂಟು ವಾರಗಳ ಕಾಲ ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ನ ನ್ಯಾ.ವಿನೀತ್ ಶರಣ್ ಪೀಠ ಅನುಮತಿ ನೀಡಿದೆ. ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಗೆ ಅನುಮತಿ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ವಿನೀತ್ ಶರಣ್ ಪೀಠ ಅನುಮತಿ ನೀಡಿದೆ.

ಅರ್ಜಿಯ ವಿಚಾರಣೆಯಲ್ಲಿ ಸಿಬಿಐ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದು ಎಂದು ವಾದ ಮಂಡಿಸಿದ್ದರು. ಬಳ್ಳಾರಿಯಲ್ಲಿ ಗಣಿ ಪ್ರಕರಣದ 47 ಸಾಕ್ಷಿಗಳ ಪೈಕಿ 47 ಮಂದಿಯೂ ಬಳ್ಳಾರಿಯ ಸ್ಥಳೀಯ ವ್ಯಕ್ತಿಗಳು. ಜನಾರ್ದನ ರೆಡ್ಡಿ ಬೇರೆಯವರ ಜಾಗದಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರೇ ಕೇಸ್ ಬಿದ್ದು ಹೋಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ. ಜನಾರ್ದನ ರೆಡ್ಡಿ ಬೆದರಿಕೆ ಹಾಕಿದ್ದಾರೆಂದು ಓರ್ವ ವ್ಯಕ್ತಿಯು ಪತ್ರ ಬರೆದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಎ.ಎಸ್.ಜಿ. ಮಾಧವಿ ದಿವಾನ್ ವಾದಕ್ಕೆ ಜನಾರ್ದನ ರೆಡ್ಡಿ ಪರ ವಕೀಲ ಮುಕುಲ್ ರೋಹಟಗಿ ಆಕ್ಷೇಪ ವ್ಯಕ್ತಪಡಿಸಿದರು.

ವಾದ ಮುಂದುವರಿಸಿದ ಮಾಧವಿ ದಿವಾನ್, ಆರೋಪಿ ಜನಾರ್ದನ ರೆಡ್ಡಿ ಜಡ್ಜ್ ಗೆ ಲಂಚ ನೀಡಿದ್ದಾರೆ. ಇಂಥ ಜನಾರ್ದನ ರೆಡ್ಡಿಯನ್ನ ಹೇಗೆ ನಂಬಲು ಸಾಧ್ಯ? ಸಾಕ್ಷಿಗಳಿಗೆ ಲಂಚ ನೀಡಿ ಉಲ್ಟಾ ಸಾಕ್ಷಿ ಹೇಳುವಂತೆ ಮಾಡ್ತಾರೆ. ಇದು ಕೇಸ್ ಮೇಲೆ ಬಹಳ ಪರಿಣಾಮ ಬೀರುತ್ತದೆ. ಜಡ್ಜ್ ಗಳು ಸ್ವತಂತ್ರವಾಗಿ ಇರಲು ಬಿಟ್ಟಿಲ್ಲ. ಇನ್ನೂ ಸಾಕ್ಷಿಗಳು ಮುಕ್ತವಾಗಿ ಸಾಕ್ಷಿ ಹೇಳಲು ಬಿಡಲ್ಲ. ಇದು ಈ ಕೇಸ್ ನ ಪ್ರಮುಖ ಅಂಶ. ಜಾಮೀನು ಷರತ್ತು ಮಾರ್ಪಡಿಸಲು ವಿಶ್ವಾಸ ಮೂಡಿಸುವ ಕೆಲಸ ಮಾಡಿಲ್ಲ. ಎಲ್ಲ ಪೂರಕ, ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈಗ ಕೋರ್ಟ್ ವಿಚಾರಣೆ ಅವರ ಕಡೆಯಿಂದಲೇ ವಿಳಂಬವಾಗಿದ್ದು, ಇದರ ಅನುಕೂಲ ಪಡೆಯಲು ಯತ್ನಿಸುತ್ತಿದ್ದಾರೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದಮಂಡನೆ ಮಂಡಿಸಿದ್ದರು.

blank

ಈ ಹಿಂದೆ ಸಚಿವ ಶ್ರೀರಾಮುಲು ಅವರ ತಾಯಿಯ ಪುಣ್ಯ ತಿಥಿಯಲ್ಲಿ ಪಾಲ್ಗೊಳ್ಳಲು 2020ರ ಆಗಸ್ಟ್ 30 ಮತ್ತು 31 ರಂದು ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅನುಮತಿ ನೀಡಲಾಗಿತ್ತು. 2019ರಲ್ಲಿ ಎರಡು ವಾರಗಳ ಕಾಲ ಬಳ್ಳಾರಿಯಲ್ಲಿ ಇರಬಹುದು ಎಂದು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಅಂದು ಜನಾರ್ದನ ರೆಡ್ಡಿ ಪತ್ನಿ ಅರುಣಾ ಅವರ ತಂದೆ ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯ ವಿಚಾರಣೆಗೆ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ರೆಡ್ಡಿ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಕಣ್ಣಂಚಿನಿಂದ ನೀರು ತನ್ನಷ್ಟಕ್ಕೆ ತಾನೇ ಹರಿಯುತ್ತಿದೆ- ರಾಮುಲುರ ತಾಯಿ ನಿಧನಕ್ಕೆ ಜನಾರ್ದನ ರೆಡ್ಡಿ ಸಂತಾಪ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರೆಡ್ಡಿಗೆ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿತ್ತು. 2016ರ ನವೆಂಬರ್ 6ರಂದು ಮಗಳ ಮದುವೆಯ ಹಿನ್ನೆಲೆಯಲ್ಲಿ ಬಳ್ಳಾರಿಗೆ ಒಂದು ವಾರದ ಮಟ್ಟಿಗೆ ತೆರಳಲು ಸುಪ್ರೀಂಕೋರ್ಟ್ ವಿಶೇಷ ಅನುಮತಿ ನೀಡಿತ್ತು. ಇದನ್ನೂ ಓದಿ: ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ: ಜನಾರ್ದನ ರೆಡ್ಡಿ

Source: publictv.in Source link