ಸರ್ಕಾರದ ಜಸ್ಟ್ ಪಾಸ್ ಆಫರ್ ತಿರಸ್ಕರಿಸಿದ ವಿದ್ಯಾರ್ಥಿನಿ

– ಇಡೀ ಕೊಪ್ಪಳದಲ್ಲಿ ಪರೀಕ್ಷೆ ಬರೆದ ಏಕೈಕ ಅಭ್ಯರ್ಥಿ

ಕೊಪ್ಪಳ: ಕೊರೊನಾ ಹಿನ್ನೆಲೆ ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ಬರೆಯದೇ ಎಲ್ಲರನ್ನೂ ಪಾಸ್ ಮಾಡಲಾಗಿದೆ. ಆದರೆ ವಿದ್ಯಾರ್ಥಿನಿಯೊಬ್ಬಳು ನಾನು ಚೆನ್ನಾಗಿ ಓದಿದ್ದೇನೆ. ನಿಮ್ಮ ಜಸ್ಟ್ ಪಾಸ್ ಆಫರ್ ಬೇಡ ಎಂದು ತಿರಸ್ಕರಿಸಿ ಗುರುವಾರ ಗಣಿತ ಪರೀಕ್ಷೆಯನ್ನು ಬರೆದಿದ್ದಾಳೆ. ಈ ಮೂಲಕ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಏಕೈಕ ಅಭ್ಯರ್ಥಿಯಾಗಿದ್ದಾಳೆ.

ಒಬ್ಬ ವಿದ್ಯಾರ್ಥಿಗಾಗಿ 26 ಜನ ಪರೀಕ್ಷಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಹೌದು, ವಿದ್ಯಾರ್ಥಿ ಭೂಮಿಕಾ ತಾವರಗೆರೆ ಗಂಗಾವತಿಯ ಅಕ್ಷರಾ ಶ್ರೀ ವೆಂಕಟೇಶ್ವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಇಂದಿನಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾಳೆ. ಕೊರೊನಾ ಕಾರಣದಿಂದಾಗಿ ಈ ವರ್ಷ ವಿದ್ಯಾರ್ಥಿಯ ಎಸ್‍ಎಸ್‍ಎಲ್‍ಸಿ, ಪ್ರಥಮ ಪಿಯುಸಿ, ಕಾಲೇಜಿನಲ್ಲಿ ಅಂತರ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಅಂಕ ನೀಡಿ ಪಾಸ್ ಮಾಡಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ ಭೂಮಿಕಾ ಸಹ ಶೇ.37 ರಷ್ಟು ಅಂಕ ಪಡೆದು ಪಾಸಾಗಿದ್ದಾಳೆ. ಆದರೆ ನಾನು ಚೆನ್ನಾಗಿ ಓದಿದ್ದೇನೆ, ನನಗೆ ಜಸ್ಟ್ ಪಾಸ್ ಆಗೋದು ಇಷ್ಟವಿಲ್ಲ. ನಾನು ಮತ್ತೆ ಪರೀಕ್ಷೆ ಬರೆಯುತ್ತೇನೆ ಎಂದು ಗಣಿತ ಪರೀಕ್ಷೆ ಬರೆದಿದ್ದಾಳೆ. ಇದನ್ನೂ ಓದಿ:ಕೋವಿಡ್‍ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಸಿಕ್ತು ಫೋನ್

ಗಂಗಾವತಿಯ ಸೆಂಟ್ ಪಾಲ್ಸ್ ಶಾಲೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದ ಭೂಮಿಕಾ, 2020ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ, ಪರೀಕ್ಷೆಗೆ ಹಾಜರಾಗಲು ಆಗಿರಲಿಲ್ಲ, ಅನಾರೋಗ್ಯದ ಕಾರಣಕ್ಕಾಗಿ ಪರೀಕ್ಷೆಯಿಂದ ದೂರ ಉಳಿದಿದ್ದರು. ಇದೇ ಹಿನ್ನೆಲೆ ಅವರನ್ನು ರಿಪೀಟರ್ಸ್ ಎಂದು ಕಡಿಮೆ ಅಂಕ ನೀಡಲಾಗಿದೆ. ನನಗೆ ಶೇ.85 ಕ್ಕಿಂತ ಅಧಿಕ ಅಂಕ ಪಡೆಯುವ ಸಾಮರ್ಥ್ಯ ಇದೆ. ಈ ಕಾರಣಕ್ಕಾಗಿ ಪಾಸಾಗಿರುವ ಆಫರ್ ತಿರಸ್ಕರಿಸಿ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಕಡಿಮೆ ಅಂಕ ಬರಲು ಕಾರಣ ರಿಪೀಟರ್ ಆಗಿದ್ದರಿಂದ ಪ್ರಾಯೋಗಿಕ ಪರೀಕ್ಷೆಯ ಅಂಕ ನೀಡಿಲ್ಲ. ಈಗ ಮತ್ತೆ ಪರೀಕ್ಷೆ ಬರೆಯುತ್ತಿರುವುದರಿಂದ ಪ್ರಾಯೋಗಿಕ ಪರೀಕ್ಷೆಗೂ ಅವಕಾಶ ನೀಡಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆಯ ನಿರ್ದೇಶಕರಿಂದ ಮಾರ್ಗದರ್ಶನ ಪಡೆಯಲಾಗುವುದು ಎಂದು ಡಿಡಿಪಿಯು ಹೇಳಿದ್ದಾರೆ.

blank

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 476 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಆದರೆ ಇಂದು ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರದಲ್ಲಿ ಗಂಗಾವತಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಾತ್ರ ಭೂಮಿಕಾ ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾರೆ. ಇಂದಿನ ಪರೀಕ್ಷಾ ವಿಷಯಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆ ಬರೆಯಬೇಕಾಗಿದ್ದ ಆ ವಿದ್ಯಾರ್ಥಿಯು ಸಹ ಪರೀಕ್ಷೆ ಬರೆದಿದ್ದಾಳೆ. ಒಬ್ಬ ವಿದ್ಯಾರ್ಥಿಯಾಗಿದ್ದರೂ ಪರೀಕ್ಷಾ ನಿಯಮದಂತೆ ಸುಮಾರು 20 ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಇಂದಿನ ದಿನಗಳಲ್ಲಿ ಪಾಸಾದರೆ ಸಾಕು ಎನ್ನುತ್ತಿರುವಾಗ ಪಾಸಾಗುವ ಆಫರ್ ತಿರಸ್ಕರಿಸಿ ವಿದ್ಯಾರ್ಥಿ ತಮ್ಮ ಓದಿನ ಸಾಮರ್ಥ್ಯ ಓರೆಗೆ ಹಚ್ಚಿದ್ದಾರೆ. ಇದನ್ನೂ ಓದಿ:ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

Source: publictv.in Source link