ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ರೂ ಧಾರವಾಡ ಪ್ರವೇಶಿಸುವಂತಿಲ್ಲ!

ಬೆಂಗಳೂರು: ಗಣಿಧಣಿ ಜನಾರ್ದನ ರೆಡ್ಡಿ ಬೆನ್ನಲ್ಲೇ ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಹಬ್ಬದ ಸಿಹಿ ಸಿಕ್ಕಿದೆ. ಬಿಗ್ ರಿಲೀಫ್ ಸಿಕ್ಕರೂ ವಿನಯ್ ಕುಲಕರ್ಣಿಗೆ ಸದ್ಯಕ್ಕೆ ಧಾರವಾಡ ಪ್ರವೇಶಿಸುವಂತಿಲ್ಲ.

ಹೌದು. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ರೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಸಾಕ್ಷ್ಯನಾಶ ಕೇಸ್‍ನಲ್ಲಿ ವಿನಯ್‍ಗೆ ಬೇಲ್ ಸಿಕ್ಕಿರಲಿಲ್ಲ. ಆದರೆ ಆ ಪ್ರಕರಣದಲ್ಲೂ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ನಿಂದ ಜಾಮೀನು ಮಂಜೂರು ಮಾಡಿದೆ.

ವಿನಯ್‍ಗೆ ಜಾಮೀನು ಸಿಕ್ಕರೂ ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ. ವಾರಕ್ಕೆ ಎರಡು ಬಾರಿ ಸಿಬಿಐ ಮುಂದೆ ಹಾಜರಾಗಬೇಕು. ಐಒ ಮುಂದೆ ಹಾಜರಾಗಿ ಸಹಿ ಮಾಡಬೇಕು. ಜಾಮೀನಿಗೆ ಇಬ್ಬರು ಶ್ಯೂರಿಟಿ ಬಾಂಡ್ ನೀಡಬೇಕು. ಪ್ರಕರಣದ ಸಾಕ್ಷಿ ನಾಶ ಮಾಡಬಾರದು. ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಅಂತ ಕೋರ್ಟ್ ಷರತ್ತು ವಿಧಿಸಿದೆ. ಇದನ್ನೂ ಓದಿ: ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಅನುಮತಿ

ವಿನಯ್ ಕುಲಕರ್ಣಿಗೆ ಜಾಮೀನು ಸಿಗುತ್ತಿದ್ದಂತೆ ಧಾರವಾಡದಲ್ಲಿ ಬೆಂಬಲಿಗರ ಸಂಭ್ರಮಾಚರಣೆ ನಡೆಸಿದ್ರು. ಪಟಾಕಿ ಸಿಡಿಸಿ ಬೆಂಬಲಿಗರು ವಿಜಯೋತ್ಸವ ನಡೆಸಿದ್ರು. ಒಟ್ಟಿನಲ್ಲಿ ಇಬ್ಬರು ಮಾಜಿ ಸಚಿವರಿಗೆ ವರಮಹಾಲಕ್ಷ್ಮಿ ಹಬ್ಬದ ಸಿಹಿ ಸಿಕ್ಕಿದ್ದು, ಕುಟುಂಬಸ್ಥರು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

Source: publictv.in Source link