ನಾಸಾದ ಪ್ರಶಸ್ತಿಗೆ ಸಿದ್ದಾಪುರದ ವಿದ್ಯಾರ್ಥಿ ದಿನೇಶ್ ವಸಂತ ಹೆಗಡೆ ಆಯ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಶಿಗುಳಿ ಗ್ರಾಮದ ದಿನೇಶ್ ವಸಂತ ಹೆಗಡೆ, ನಾಸಾದ ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅನುದಾನದಲ್ಲಿ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದಿನೇಶ್ ವಸಂತ ಹೆಗಡೆಯವರು ಅಮೆರಿಕದ ಹಂಟ್ಸ್‍ವಿಲ್‍ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ. ಅವರೊಂದಿಗೆ ಕ್ಯಾಥರೀನ್ ಡೇವಿಡ್ಸನ್ ಎಂಬವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಬ್ಬರೂ ಭಾರತೀಯ ರೂಪಾಯಿಯಂತೆ ತಲಾ 1 ಕೋಟಿ 42 ಸಾವಿರ ವಿದ್ಯಾರ್ಥಿವೇತನ ಪಡೆಯಲಿದ್ದಾರೆ.

ಪ್ರಸ್ತುತ ದಿನೇಶ್ ಅವರು `ಯು.ಎ.ಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್’ನ ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಾಹ್ಯಾಕಾಶ ಹವಾಮಾನದ ಕುರಿತು ಸಂಶೋಧನೆ ಮುಂದುವರಿಸಲು ಈ ಅನುದಾನ ನೀಡಲಾಗಿದೆ. ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ ಎಂಬುದು ಅವರ ಸಂಶೋಧನೆಯ ವಿಷಯವಾಗಿದ್ದು ಅವರಿಗೆ ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಮತ್ತು ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕ ಡಾ.ನಿಕೊಲಾಯ್ ಪೊಗೊರೆಲೋವ್ ಮಾರ್ಗದರ್ಶಕರಾಗಿದ್ದಾರೆ.

ಸಿದ್ದಾಪುರ ತಾಲೂಕಿನ ವಾಜಗದ್ದೆ ಸರ್ಕಾರಿ ಶಾಲೆ ಹಾಗೂ ಹಾರ್ಸಿಕಟ್ಟಾದ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್‍ಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂ.ಎಸ್‍ಸಿ ಪದವಿ ಪಡೆದಿದ್ದಾರೆ. ಇದನ್ನೂ ಓದಿ: ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

Source: publictv.in Source link