ಗದ್ದೆಯ ಬದುವಿನ ಮೇಲೆ ರೈತರಂತೆ ನಡೆದ ಹುಲಿ- ಆತಂಕದಲ್ಲಿ ಹಳ್ಳಿಗರು

ಚಿಕ್ಕಮಗಳೂರು: ಇತ್ತೀಚೆಗೆ ತಾಲೂಕಿನ ಸಾರಾಗೋಡು ಬಳಿ ಹೊರನಾಡಿಗೆ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿತ್ತು. ಇಂದು ಮೂಡಿಗೆರೆ ತಾಲೂಕಿನಲ್ಲಿ ಒಂದೆಡೆ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದರೆ, ಮತ್ತೊಂದೆಡೆ ಗದ್ದೆಯಲ್ಲಿ ಹುಲಿ ಹೆಜ್ಜೆ ಕಂಡು ಹಳ್ಳಿಗರು ಕಂಗಾಲಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಬಿಳಗುಲಿ ಸಮೀಪದ ಗದ್ದೆಯ ಬದುವಿನ ಮೇಲೆ ಹುಲಿಯೊಂದು ಜನಸಾಮಾನ್ಯರಂತೆ ನಡೆದು ಹೋಗಿದೆ. ಹುಲಿ ಹೆಜ್ಜೆಯನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಬಿಳಗುಲಿ ಗ್ರಾಮದ ಉಮೇಶ್ ಅವರ ಗದ್ದೆಯಲ್ಲಿ ಭಾರೀ ಗಾತ್ರದ ಹುಲಿ ಹೆಜ್ಜೆ ಕಂಡಿದೆ. ಹುಲಿಯ ದೊಡ್ಡ ಹೆಜ್ಜೆಯ ಪಂಜ ಕಂಡ ಹಳ್ಳಿಗರು ಭಯಭೀತರಾಗಿದ್ದು, ಹೊಲ, ಗದ್ದೆ, ತೋಟಕ್ಕೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ನಾಯಕರು ನಮ್ಮವರೇ, ಯಾರೂ ಹಗುರವಾಗಿ ಮಾತನಾಡಬಾರದು : ಶೋಭಾ ಕರಂದ್ಲಾಜೆ

ಬಿಳಗಲಿ ಹಾಗೂ ಹುತ್ತಿನಕೊಳಲು ಗ್ರಾಮದಲ್ಲಿ ಹುಲಿ ಓಡಾಡಿರುವ ಶಂಕೆಯಿಂದ ಕತ್ತಲಾಗುತ್ತಿದ್ದಂತೆ ಜನ ಮನೆಯಿಂದ ಹೊರಬರೋದಕ್ಕೂ ಹೆದರುತ್ತಿದ್ದಾರೆ. ಬಿಳಗುಲಿ, ಹುತ್ತಿನಕೊಳಲು ಗ್ರಾಮವಷ್ಟೇ ಅಲ್ಲದೆ ಭಾರತೀಬೈಲು ಗ್ರಾಮದಲ್ಲೂ ಹುಲಿ ಹಾವಳಿ ಹೆಚ್ಚಿತ್ತು. ಜನ ಹಗಲಲ್ಲೂ ಓಡಾಡೋದಕ್ಕೆ ಭಯ ಬೀಳುತ್ತಿದ್ದರು. ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಿದ್ದ ಹುಲಿ ಹೊಲಗದ್ದೆಗಳಲ್ಲಿ ಓಡಾಡೋದನ್ನ ಸ್ಥಳಿಯರು ನೋಡಿ ಭಯಭೀತರಾಗಿದ್ದರು. ಈಗ ಮತ್ತೆ ಹುಲಿಯ ದೊಡ್ಡ ಹೆಜ್ಜೆ ಕಾಣಿಸಿಕೊಂಡಿದ್ದು, ಜನ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕಳೆದ ಕೆಲ ತಿಂಗಳಿಂದ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಈ ಮಧ್ಯೆ ಹುಲಿಯ ಹೆಜ್ಜೆ ಕಂಡು ಜನ ಕಂಗಾಲಾಗಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಿ ಹಳ್ಳಿಗರ ಆತಂಕವನ್ನ ದೂರ ಮಾಡುವಂತೆ ಆಗ್ರಹಿಸಿದ್ದಾರೆ.

Source: publictv.in Source link