ಅಫ್ಘಾನ್​ ಸ್ವತಂತ್ರ ದಿನದಂದೇ ತಾಲಿಬಾನಿಗಳ ಅಟ್ಟಹಾಸ -ತಂದೆ ಸಾವಿಗೆ ಉಗ್ರರ ವಿರುದ್ಧ ತೊಡೆ ತಟ್ಟಿದ ಪುತ್ರ

ಅಫ್ಘಾನ್​ ಸ್ವತಂತ್ರ ದಿನದಂದೇ ತಾಲಿಬಾನಿಗಳ ಅಟ್ಟಹಾಸ -ತಂದೆ ಸಾವಿಗೆ ಉಗ್ರರ ವಿರುದ್ಧ ತೊಡೆ ತಟ್ಟಿದ ಪುತ್ರ

ಅಫ್ಘಾನಿಸ್ತಾನದಲ್ಲಿ ಉಗ್ರರು ಅಕ್ಷರಶಃ ರಾಕ್ಷಸರಂತೆ ವರ್ತಿಸಿದ್ದಾರೆ. ಬೀದಿ ಬೀದಿಯಲ್ಲಿ ಬಂದೂಕು ಹಿಡಿದುಕೊಂಡು ತಿರುಗಾಡ್ತಿದ್ದು ತಮ್ಮ ವಿರೋಧಿಗಳನ್ನು ಸದೆಬಡಿಯಲು ದುರ್ಬಿನ್​ ಹಾಕ್ಕೊಂಡು ತಲಾಶ್​ ನಡೆಸ್ತಿದ್ದಾರೆ. ಈ ನಡುವೆ ಯುವಕನೊಬ್ಬ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ತಾಲಿಬಾನ್ ವಿರುದ್ಧ ಸಿಡಿದೆದ್ದಿದ್ದಾನೆ.

ತಾಲಿಬಾನ್​ ಉಗ್ರರ ಅಟ್ಟಹಾಸಕ್ಕೆ ಅಫ್ಘಾನಿಸ್ತಾನ ಅಕ್ಷರಶಃ ನರಕವಾಗಿದೆ. ಎಲ್ಲಿ ನೋಡಿದ್ರೂ ಆಧುನಿಕ ರಕ್ಕಸರ ಬಂದೂಕಿನ ನಳಿಕೆಗಳು ಗಹಗಹಿಸಿ ನಗುತ್ತಿವೆ. ಅಮಾಯಕರು ಬೀದಿ ಬೀದಿಗಳಲ್ಲಿ ದಾರುಣವಾಗಿ ಕೊಲ್ಲಲ್ಪಡುತ್ತಿದ್ದಾರೆ. ಯಾರನ್ನೂ ದ್ವೇಷಿಸಲ್ಲ, ಎಲ್ಲರನ್ನೂ ಕ್ಷಮಿಸಿದ್ದೇವೆ. ಮಹಿಳೆಯರಿಗೆ ಹಕ್ಕುಗಳನ್ನು ಕೊಡುತ್ತೇವೆ ಅಂತ ಪುಂಖಾನುಪುಂಖವಾಗಿ ಆಶ್ವಾಸನೆ ಕೊಟ್ಟ ಉಗ್ರರು ಅದರ ತದ್ವಿರುದ್ಧವಾಗಿ ನಡೆದುಕೊಳ್ತಿದ್ದಾರೆ. ತಮ್ಮ ವಿರೋಧಿಗಳಿಗಾಗಿ ಬೀದಿ ಬೀದಿಯಲ್ಲಿ ಗಸ್ತು ತಿರುಗುತ್ತಿದ್ದಾರೆ.

blank

ಅಮೆರಿಕ ಮತ್ತು ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದವರಿಗಾಗಿ ತಾಲಿಬಾನ್ ಉಗ್ರರು ತೀವ್ರವಾಗಿ ತಲಾಶ್​ ಶುರುಮಾಡಿದ್ದಾರೆ. ಈಗಾಗಲೇ ತಾಲಿಬಾನಿಗಳು ತಮಗೆ ಬೇಕಾದ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆಂದು ವಿಶ್ವಸಂಸ್ಥೆ ಅಪಾಯ ಮೌಲ್ಯಮಾಪನ ಸಮಾಲೋಚಕರ ವರದಿ ತಿಳಿಸಿದೆ. ಆಫ್ಘಾನ್ ಮಿಲಿಟರಿ, ಪೊಲೀಸ್ ಮತ್ತು ಗುಪ್ತಚರ ಘಟಕಗಳ ಕೇಂದ್ರ ಸ್ಥಾನದಲ್ಲಿ ಕೆಲಸ ಮಾಡಿದವರು ಹೆಚ್ಚಿನ ಅಪಾಯದಲ್ಲಿದ್ದಾರಂತೆ. ಇನ್ನು ಈ ಹಿಂದೆ ನ್ಯಾಟೋ ಮತ್ತು ಅಮೆರಿಕ ಪಡೆಗಳ ಮತ್ತು ಅವರ ಮಿತ್ರರೊಂದಿಗೆ ಕೆಲಸ ಮಾಡಿದ್ದ ವ್ಯಕ್ತಿಗಳು ಕುಟುಂಬ ಸದಸ್ಯರೊಂದಿಗೆ ಚಿತ್ರಹಿಂಸೆ ಗುರಿ ಆಗುವ ಭೀತಿಯಲ್ಲಿದ್ದಾರೆ ಅಂತ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್ ನೆಲ್ಲೆಮನ್ ತಿಳಿಸಿದ್ದಾರೆ.

ವಿಮಾನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಫುಟ್​ಬಾಲ್​ ಆಟಗಾರ
ಇನ್ನು ಮೊನ್ನೆಯಷ್ಟೇ ಉಗ್ರರಿಗೆ ಹೆದರಿ ದೇಶ ಬಿಟ್ಟು ವಿಮಾನದ ಮೇಲೆಲ್ಲ ಪರಾರಿಯಾಗುವಾಗ ಬಿದ್ದು ಹಲವರು ಸಾವನ್ನಪ್ಪಿದ್ದರು. ಹೀಗೆ ಸಾವನ್ನಪ್ಪಿದವರ ಪೈಕಿ ಅಫ್ಘಾನಿಸ್ತಾನದ ಪರವಾಗಿ ಆಡಿದ ಯುವ ಫುಟ್​ಬಾಲ್​ ಆಟಗಾರ ಝಕಿ ಅನ್ವಾರಿ ಸಾವನ್ನಪ್ಪಿದ್ದಾರೆಂಬ ಭಯಾನಕ ವರದಿ ಹೊರಬಿದ್ದಿದೆ.

ಇಷ್ಟು ಮಾತ್ರವಲ್ಲದೆ ಅಫ್ಘಾನಿಸ್ತಾನದ ಖ್ಯಾತ ನಿರೂಪಕಿ ಶಬನಮ್​ ದವ್ರಾನ್​ಗೆ ಕೆಲಸ ಮಾಡದಿರುವಂತೆ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ನಮ್ಮ ಪ್ರಾಣ ಅಪಾಯದಲ್ಲಿದೆ ಅಂತ ಶಬನಮ್​ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.

blank

ಸ್ವತಂತ್ರ ದಿನದಂದೇ ರಕ್ತದೋಕುಳಿ, ದೇಶದ ಹೆಸರು ಬದಲಾವಣೆ
ಆಗಸ್ಟ್‌ 19 ಅಫ್ಘಾನ್ ಸ್ವಾತಂತ್ರ್ಯ ದಿನಾಚರಣೆಯಂದೇ ತಾಲಿಬಾನಿಗಳು ರಕ್ತದೋಕುಳಿ ಆಡಿದ್ದಾರೆ. ಅಫ್ಘಾನಿಸ್ತಾನದ ರಾಷ್ಟ್ರಧ್ವಜ ಹಿಡಿದು ತಾಲಿಬಾನ್​ ವಿರುದ್ಧ ಪ್ರತಿಭಟನೆ ನಡೆಸಿದ ಜನರ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದು ಅಟ್ಟಹಾಸ ಮೆರೆದಿದ್ದು, ಅನೇಕರು ಮೃತಪಟ್ಟಿದ್ದಾರೆ. ಇನ್ನು ಸ್ವತಂತ್ರ್ಯ ದಿನದಂದೇ ಉಗ್ರರು ಅಫ್ಘಾನಿಸ್ತಾನದ ಹೆಸರನ್ನು ‘ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಅಫ್ಘಾನಿಸ್ತಾನ’ ಅಂತ ಬದಲಿಸಿದ್ದಾರೆ. ಇದೇ ವೇಳೆ ತಾಲಿಬಾನ್‌ನಿಂದ ಹತ್ಯೆಗೀಡಾದ ಹೋರಾಟಗಾರರ ಪುತ್ರ ಅಹ್ಮದ್ ಮಸೂದ್ ಹೆಚ್ಚಿನ ಶಸ್ತ್ರಾಸ್ತ್ರ ಒದಗಿಸಬೇಕೆಂದು ಅಮೆರಿಕಕ್ಕೆ ಮನವಿ ಮಾಡಿದ್ದಾನೆ.

blank

ಉಗ್ರರನ್ನ ಕೊರೊನಾಗೆ ಹೋಲಿಸಿದ ಸಚಿವ ಜೈಶಂಕರ್​
ಕ್ರೂರತ್ವದಲ್ಲಿ ಉಗ್ರರು ಕೊರೊನಾವನ್ನು ಮೀರಿಸಿದ್ದಾರೆ ಅಂತ ವಿದೇಶಾಂಗ ಸಚಿವ ಜೈಶಂಕರ್​​ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಅವರು, ಕೊರೊನಾ ಹಾಗೂ ಉಗ್ರರು ಎರಡರಿಂದಲೂ ಜಗತ್ತಿಗೆ ವಿಪತ್ತಿದೆ. ಅಫ್ಘಾನ್ ನಾಗರಿಕರನ್ನು ರಕ್ತಪಾತದಿಂದ ತಪ್ಪಿಸುವುದು ಎಲ್ಲರ ಜವಾಬ್ದಾರಿ ಅಂತ ಹೇಳಿದ್ದಾರೆ.

ಅತ್ತ ಅಫ್ಘಾನಿಸ್ತಾನದಲ್ಲಿ ಹುಕುಮತ್​ ನಡೆಸೋಕೆ ಉಗ್ರರು ಹಕೀಕತ್​ ನಡೆಸ್ತಿದ್ರೆ ಇತ್ತ ಯುರೋಪ್​ ಯೂನಿಯನ್​​​​, ತಾಲಿಬಾನಿಗಳ ಆಡಳಿತವನ್ನು ಮಾನ್ಯ ಮಾಡಲ್ಲ ಅನ್ನೋ ಮೂಲಕ ಶಾಕ್​ ಕೊಟ್ಟಿದೆ. ಒಟ್ಟಾರೆ, ತಾಲಿಬಾನಿಗಳಿಂದ ವಿಶ್ವಕ್ಕೆ ತಲೆಬ್ಯಾನಿ ಶುರುವಾಗಿದೆ. ಕೂಡಲೇ ಇದಕ್ಕೆ ಮದ್ದು ಕಂಡು ಹಿಡಿಯದಿದ್ರೆ ಇದು ಗಂಭೀರ ಸ್ವರೂಪ ಪಡೆದ್ರೂ ಅಚ್ಚರಿಪಡಬೇಕಿಲ್ಲ.

Source: newsfirstlive.com Source link