ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

ಕಾಬೂಲ್: ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ಪಡೆದಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ನಿಂತಿಲ್ಲ. ಈಗ ಭಾರತೀಯ ರಾಯಭಾರ ಕಚೇರಿಗೆ ದಾಳಿ ಮಾಡಿ ದಾಖಲೆಗಳನ್ನು ಹುಡುಕಾಡಿದ್ದಾರೆ ಎಂದು ವರದಿಯಾಗಿದೆ.

ಹೇರತ್ ಮತ್ತು ಕಂದಹಾರ್ ನಲ್ಲಿರುವ  ಭಾರತದ ರಾಯಭಾರ ಕಚೇರಿಗೆ ದಾಳಿ ಮಾಡಿರುವ ತಾಲಿಬಾನ್ ಉಗ್ರರು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ ಮತ್ತು ರಾಯಭಾರ ಕಚೇರಿಯಲ್ಲಿದ್ದ ವಾಹನಗಳನ್ನು ಕೊಂಡೊಯ್ದಿದ್ದಾರೆ. ಕಾಬೂಲ್ ಮತ್ತು ಜಲಾಲಬಾದ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿದ್ಯಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.

ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಮತ್ತು ತಾಲಿಬಾನ್‍ನ ಉಪನಾಯಕ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಸ್ ಹಕ್ಕಾನಿ ನೇತೃತ್ವದ ಹಕ್ಕಾನಿ ನೆಟ್‍ವರ್ಕ್‍ನ ಸುಮಾರು 6 ಸಾವಿರ ಕಾರ್ಯಕರ್ತರು ರಾಜಧಾನಿಯಾದ ಕಾಬೂಲ್ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಎನ್‍ಡಿಎಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಮನೆ ಮನೆಯಲ್ಲೂ ತಾಲಿಬಾನ್ ಬಂದೂಕುಧಾರಿಗಳು ಹುಡುಕಾಡುತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿಲುಕಿಕೊಂಡಿದ್ದು ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ವಿದೇಶಾಂಗ ಸಚಿವಾಲಯ ಮಾಡುತ್ತಿದೆ. ಇದನ್ನೂ ಓದಿ: ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ 

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡು ನಾಲ್ಕು ದಿನವಾದ್ರೂ ಇನ್ನೂ ಅಲ್ಲಿ ಸರ್ಕಾರ ರಚನೆ ಆಗಿಲ್ಲ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದೇ ಹರಸಾಹಸವಾಗಿದೆ. ಪ್ರತಿ ಚೆಕ್‍ಪೋಸ್ಟ್‍ಗಳಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ಮಾಡ್ತಿರುವ ಕಾರಣ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಜೀವಭಯದಿಂದಾಗಿ ಕಾಬೂಲ್‍ನಲ್ಲಿ ಸಿಲುಕೊಂಡಿರುವ ಕೆಲವು ಭಾರತೀಯರು ಮನೆಬಿಟ್ಟು ಹೊರಬರಲು ಸಿದ್ಧರಿಲ್ಲ.

ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ರಾಯಭಾರ ಕಚೇರಿಗೆ 10 ಕಿಲೋ ಮೀಟರ್ ದೂರವಿದೆ. ವಿಮಾನ ನಿಲ್ದಾಣಕ್ಕೆ ಅಮೆರಿಕ ಸೈನಿಕರ ಪಹರೆ ಇದ್ದರೂ ಹೊರಗಿನ ಭದ್ರತೆ ಅಮೆರಿಕ ಸೈನಿಕರ ಕೈಯಲ್ಲಿ ಇಲ್ಲ. ಹೀಗಾಗಿ ತಾಲಿಬಾನಿಗಳ ಸ್ಥಳೀಯ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು ಕೂಡಾ ಸವಾಲಾಗಿದೆ ಎಂದು ವರದಿ ಆಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

ನಾಲ್ಕು ದಿನಗಳ ಹಿಂದೆ ಭಾರತದ ರಾಜತಾಂತ್ರಿಕ ಸಿಬ್ಬಂದಿ, ಸೈನಿಕರನ್ನು ಕರೆತರುವ ವೇಳೆ ಚೆಕ್‍ಪೋಸ್ಟ್ ನಲ್ಲಿ ತಾಲಿಬಾನಿಗಳು ತಡೆಹಾಕಿದ್ದರು. ಆ ಬಳಿಕ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕರೆತರಲು ಭಾರತಕ್ಕೆ 1 ದಿನ ಹಿಡಿದಿತ್ತು.

Source: publictv.in Source link