‘ನಾನ್ಯಾಕೆ ದೇಶ ತೊರೆದೆ ಅಂದ್ರೆ..’ -ಅಫ್ಘಾನ್ ಅಧ್ಯಕ್ಷ ಘನಿ ಈಗ ಎಲ್ಲಿದ್ದಾರೆ ಗೊತ್ತಾ?

‘ನಾನ್ಯಾಕೆ ದೇಶ ತೊರೆದೆ ಅಂದ್ರೆ..’ -ಅಫ್ಘಾನ್ ಅಧ್ಯಕ್ಷ ಘನಿ ಈಗ ಎಲ್ಲಿದ್ದಾರೆ ಗೊತ್ತಾ?

ತಾಲಿಬಾನಿಗಳ ಕೈಗೆ ಅಫ್ಘಾನ್ ಸಿಕ್ಕರೇ ಹೀಗೆ ಅಗುತ್ತೆ ಅನ್ನೋದು ಗೊತ್ತಿದ್ದ ವಿಷಯವೇ. ಅದರಂತೆ ಆ ಕ್ರೂರ ಮೃಗಗಳ ಅಟ್ಟಹಾಸದ ಕಿಚ್ಚು ಹೆಚ್ಚಿದೆ. ಅಫ್ಘಾನ್ ಸರ್ಕಾರವನ್ನು ಸೂಕ್ಷ್ಮವಾಗಿ ಕರೆದೊಯ್ಯುತ್ತಿದ್ದ ಹಿಂದಿನ ನಾಯಕರು ಎಲ್ಲಿ ಹೋದರೂ ಅಲ್ಲಿನ ಹೊಸ ಕಾನೂನು ಏನೆಲ್ಲ ಹೇಳ್ತಿದೆ? ಅಫ್ಘಾನ್ ಸ್ತ್ರೀಯರು ತಮ್ಮ ಸ್ವಾತಂತ್ರಕ್ಕೆ ಹೇಗೆಲ್ಲ ಬೇಡುತ್ತಿದ್ದಾರೆ?

2 ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆ ಎನ್ನುವ ಭಾವನೆ ಅಫ್ಘಾನ್ ನೆಲದಲ್ಲಿ ಹುಟ್ಟಿಕೊಳ್ತಿದೆ. ಪ್ರತಿ ಒಬ್ಬರ ಕೈಗಳಲ್ಲಿ ಬಂದೂಕಗಳು, ನಡು ರಸ್ತೆಗಳಲ್ಲಿ ಮರಣ ಕಹಳೆ, ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಬಲಾತ್ಕಾರ. ಉಸಿರಾಡುವುದಕ್ಕೂ ಅನುಮತಿ ಪಡೆಯಬೇಕು ಅನ್ನುವ ಪರಿಸ್ಥಿತಿಗೆ ಅಫ್ಘಾನ್ ಬಂದು ತಲುಪಿದೆ. ಅಮೆರಿಕ ಸೇನೆ ದೇಶದಲ್ಲಿ ಇರುವವರೆಗೂ ಎಲ್ಲೋ ಇಲಿಗಳಂತೆ ಅವಿತು ಕುಳಿತ್ತಿದ್ದ ಕ್ರೂರಿ ತಾಲಿಬಾನ್ ಗಳು, ಸೇನೆ ಹಿಂಪಡೆದ ಕ್ಷಣದಿಂದ ತನ್ನ ಅಟ್ಟಹಾಸ ಮೆರೆಯಲು ಸಿಂಹಗಳ ಮುಖವಾಡ ಧರಿಸಿದ ಶ್ವಾನಗಳಂತೆ ವರ್ತಿಸುತ್ತಿದ್ದಾರೆ. ಈಗ ತಾಲಿಬಾನ್ ಮೃಗಗಳಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ಅವರಾಡಿದ್ದೆ ಆಟ, ನಡೆದದ್ದೆ ದಾರಿ ಅನ್ನೋ ಹಾಗಾಗಿದೆ. ಇವರ ಈ ಅಟ್ಟಹಾಸದ ನಡುವೆ ಬಲಿಯಾಗುತ್ತಿರುವವರು ಮುಗ್ಧ ಅಫ್ಘಾನ್ ಪ್ರಜೆಗಳು.

blank

ಒಂದು ದೇಶ ಅಲ್ಲಿನ ಪ್ರಜೆ ನೆಮ್ಮದಿಯಿಂದ ಉಸಿರಾಡಬೇಕು ಎಂದರೆ, ಸ್ವಾತಂತ್ರ ಅನ್ನೋದು ಬಹಳ ಮುಖ್ಯವಾಗುತ್ತದೆ. ಅಫ್ಘಾನ್​ನಲ್ಲಿ ಮೊದಲಿನಿಂದಲೂ ತಾಲಿಬಾನ್​ಗಳ ಅಟ್ಟಹಾಸ ಮಿತಿ ಮೀರಿತ್ತು. ಅವರ ದೌರ್ಜನ್ಯವನ್ನು ಎಡೆಮುರಿ ಕಟ್ಟಿದ ವಿಶ್ವದ ಬಲಿಷ್ಟ ರಾಷ್ಟ್ರಗಳು, ಅಫ್ಘಾನ್ ನೆಲದಲ್ಲಿ ಸುಸಜ್ಜಿತವಾದ ಸರ್ಕಾರವನ್ನು ನಿರ್ಮಿಸಲು ಸಹಾಯಕವಾಗಿದ್ದರು. ಎಲ್ಲೆಡೆ ಅಫ್ಘಾನ್ ಜನಗಳಿಗೆ ವಿಧ್ಯಾಭ್ಯಾಸ, ಮಹಿಳೆಯರಿಗೆ ಸುರಕ್ಷತೆ, ಬಲಿಷ್ಟವಾದ ಆರ್ಮಿ ಹೀಗೆ ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಕೊಟ್ಟರು. ಈ ಎಲ್ಲ ಸೌಕರ್ಯಗಳನ್ನು ಸೃಷ್ಟಿಸಿಕೊಟ್ಟ ಆ ಅಫ್ಘಾನ್ ಸರ್ಕಾರ ಎಲ್ಲಿ ಹೋಯ್ತು ? ತಾಲಿಬಾನಿಗಳ ಅಟ್ಟಹಾಸಕ್ಕೆ ಸೋತು ಕೈ ಚೆಲ್ಲಿ ಬಿಟ್ರಾ ? ಈ ಪ್ರಶ್ನೆ ಸಹಜವಾಗೆ ಮೂಡುತ್ತೆ. ಆದ್ರೆ ಅಫ್ಘಾನ್ ಅದ್ಯಕ್ಷ ಅಶ್ರಫ್ ಘನಿ ಈಗ ಎಲ್ಲಿದ್ದಾರೆ ಗೊತ್ತಾ ?

ದುಬೈನಲ್ಲಿ ಆಶ್ರಯ ಪಡೆದ ಅಧ್ಯಕ್ಷ ಅಶ್ರಫ್ ಘನಿ
ಸುರಕ್ಷಿತ ಜಾಗದಲ್ಲಿ ಕುಳಿತು ಸಂದೇಶ ಕಳಿಸಿದ ಅಧ್ಯಕ್ಷ

ಹೌದು, ಅಫ್ಘಾನ್ ಮರು ನಿರ್ಮಾಣಕ್ಕೆ ಪಣ ತೊಟ್ಟು, ಹೊಸ ಕಾನೂನಿಗೆ ಬದ್ಧರಾಗಿ ದುಡಿದ ಅಧ್ಯಕ್ಷ ಅಶ್ರಫ್ ಘನಿ ಈಗ ದುಬೈನಲ್ಲಿ ತಮ್ಮ ಕುಟುಂಬದ ಜೊತೆ ಆಶ್ರಯ ಪಡೆದಿದ್ದಾರೆ. ಅಫ್ಘಾನ್​ನ ಕಾಬೂಲ್ ತಾಲಿಬಾನಿಗಳ ವಶವಾಗುತ್ತಿದ್ದಂತೆ, ಅಶ್ರಫ್ ಘನಿ ಗಂಟು ಮೂಟೆ ಕಟ್ಟಿಕೊಂಡು ಎಮಿರೇಟ್ಸ್​ಗೆ ಹಾರಿ ಬಿಟ್ಟಿದ್ದಾರೆ. ಇವರೊಬ್ಬರೇ ಅಲ್ಲ ಅಫ್ಘಾನ್ ಸಚಿವಾಲಯದ ಎಲ್ಲ ನಾಯಕರು ಅಫ್ಘಾನ್ ತೊರೆದು ಪರಾರಿಯಾಗಿದ್ದಾರೆ. ತಾಲಿಬಾನಿಗಳು ರಾಷ್ಟ್ರ ರಾಜಧಾನಿಗೆ ಕಾಲಿಟ್ಟಿದ್ದೆ ತಡ ಮುಂದೆ ಏನಾಗಬಹುದು ಎನ್ನುವ ಆಲೋಚನೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ದುಬೈನ ಸುರಕ್ಷಿತ ಜಾಗದಲ್ಲಿ ಕುಳಿತು ಅಶ್ರಫ್ ಘನಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆ ಮೂಲಕ ವಿಡೀಯೋ ಹರಿ ಬಿಟ್ಟಿದ್ದಾರೆ.

blank

ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎನ್ನುತ್ತಾರೆ ಘನಿ
ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆ ಅಧ್ಯಕ್ಷ

ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳುತ್ತಿದ್ದಾರೆ. ದೇಶದ ಸುರಕ್ಷತೆಯನ್ನು ದೇಶದ ಭದ್ರತಾ ಪಡೆಗಳ ಮೇಲೆ ವಹಿಸಿ ನಾನು ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಈ ವೇಳೆ ಅಧಿಕಾರಿಗಳು ಕೂಡ ಸಂಭಾವ್ಯ ರಕ್ತಪಾತದ ಕುರಿತು ಎಚ್ಚರಿಕೆ ನೀಡಿದ್ದರು. 25 ವರ್ಷಗಳ ಹಿಂದೆ ನಡೆದಿದ್ದ ತಾಲಿಬಾನಿಗಳಿಂದ ರಕ್ತಪಾತ ಮತ್ತೆ ಸಂಭವಿಸಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಹೀಗಾಗಿ ಅನಿವಾರ್ಯವಾಗಿ ನಾನು ದೇಶ ತೊರೆದೆ ಎಂದು ಅಶ್ರಫ್ ಆ ವಿಡೀಯೋದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದ್ದಾರೆ.

ಕಾಬೂಲ್ ಅಧ್ಯಕ್ಷರ ಅರಮನೆಯಲ್ಲಿ ಗೌಪ್ಯ ದಾಖಲೆಗಳಿವೆ
ಬಟ್ಟೆಗಳನ್ನು ಹೊರತು ಪಡಿಸಿ, ನಾನು ಇಲ್ಲಿಗೆ ಏನು ತಂದಿಲ್ಲ

ಅಶ್ರಫ್ ಪರಾರಿ ಆಗುತ್ತಿದ್ದ ಸುದ್ದಿ ಕೇಳುತ್ತಿದ್ದಂತೆ, ಅಧ್ಯಕ್ಷರು ಸರ್ಕಾರದ ಖಜಾನೆಯಿಂದ ದುಡ್ಡು, ವಡವೆಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಇದೇ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ ಅಶ್ರಫ್, ತಾನು ಅಫ್ಘಾನ್ ತೊರೆಯುವಾಗ ಬಟ್ಟೆಗಳನ್ನು ಹೊರೆತು ಪಡಿಸಿ ಬೇರೆ ಏನನ್ನು ತಂದಿಲ್ಲ, ನನ್ನ ಮುಖ್ಯ ಆಸ್ತಿಗಳಾದ ಪುಸ್ತಕಗಳನ್ನು ಸಹ ಕೈಬಿಟ್ಟು ಬಂದಿದ್ದೇನೆ. ಅಲ್ಲದೇ ಕಾಬೂಲ್ ಅಧ್ಯಕ್ಷೀಯ ಅರಮನೆಯಲ್ಲಿ ಅಫ್ಘಾನ್​ಗೆ ಸಂಬಂಧಿಸಿದ ಕೆಲವು ಗೌಪ್ಯ ದಾಖಲೆಗಳನ್ನು ಬಿಟ್ಟು ಬಂದಿದ್ದೇನೆ ನಮ್ಮ ದೇಶದ ಗೌಪ್ಯ ದಾಖಲೆಗಳು ಇತರರ ಕೈಯಲ್ಲಿದೆ ಎಂದು ನೋವನ್ನು ತೊಡಿಕೊಂಡರು. ಅಲ್ಲದೆ ಘನಿಗೆ ಮತ್ತೆ ತನ್ನ ದೇಶಕ್ಕೆ ಮರಳಲು ಆಸೆ ಇದೆ. ಪರಿಸ್ಥಿತಿ ಸುಧಾರಿಸಿದ ಮೇಲೆ ತಾನು ದೇಶಕ್ಕೆ ವಾಪಸ್ಸಾಗುವುದಾಗಿ ಹೇಳಿದ್ದಾರೆ.

blank

ತಾಲಿಬಾನ್​ಗಳು ರಸ್ತೆ ಮಧ್ಯೆ ನೇಣು ಬಿಗಿಯುವ ಭೀತಿ ಘನಿಗಿತ್ತು
ಮಾಜಿ ಅಧ್ಯಕ್ಷ ನಜೀಬುಲ್ಲಾ ರನ್ನು ಹತ್ಯೆ ಮಾಡಿದ ರೀತಿ ಘನಿ ಕೊಲೆ ಪ್ಲಾನ್

1994ರಲ್ಲಿ ಅಧ್ಯಕ್ಷರ ಅರಮನೆಯಲ್ಲಿದ್ದ ಮಾಜಿ ಅಧ್ಯಕ್ಷ ನಜೀಬುಲ್ಲರನ್ನು ತಾಲಿಬಾನಿಗಳು, ಅವರ ಕಾಲುಗಳನ್ನು ಕಟ್ಟಿ ಎಳೆದು ಹೋಗಿದ್ದರು. ಕೊನೆಗೆ ನಜೀಬುಲ್ಲಾ ಹಾಗು ಅವರ ಸಹೋದರನನ್ನು ರಸ್ತೆ ಮಧ್ಯೆ ನೇಣು ಬೀಗಿದು ಹತ್ಯೆ ಮಾಡಿದ್ದರು ತಾಲಿಬಾನಿಗಳು. ಇದಾಗಿ 25 ವರ್ಷಗಳಾದ ಮೇಲೆ ತಾಲಿಬಾನಿಗಳು ಮತ್ತೆ ಅಫ್ಘಾನ್ ಮೇಲೆ ಆಕ್ರಮಣ ಮಾಡಿದ್ದಾರೆ. ತಾಲಿಬಾನಿ ಸೈನ್ಯ ಕಾಬೂಲ್​ಗೆ ಪ್ರವೇಶಿಸುತ್ತಿರುವ ಹೊತ್ತಿಗಾಗಲೇ ರಕ್ಷಣಾ ಪಡೆ ಅಶ್ರಫ್ ರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದಕ್ಕಾಗಿ ದುಬೈ ಮೊರೆ ಹೋಗಿದ್ದಾರೆ.

ಅನುಕಂಪದ ಆಧಾರದ ಮೇಲೆ ಎಮರೇಟ್ಸ್ ಅಶ್ರಫ್ ರವರಿಗೆ ಆಶ್ರಯ ನೀಡಿದೆ. ಆದರೆ ಅಂದು ಘನಿರವರು ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದರೆ, ಕ್ರೂರ ಇತಿಹಾಸ ಮತ್ತೆ ಮರುಕಳಿಸುತ್ತಿತ್ತು. ಇದರಿಂದ ಇನ್ನಷ್ಟು ರಕ್ತಪಾತಗಳು ಅಫ್ಘಾನ್ ನೆಲದಲ್ಲಿ ಸಂಬವಿಸ ಬಹುದು ಎಂದು ಅಶ್ರಫ್ ದೂರ ಉಳಿದಿದ್ದಾರೆ.

ಅಫ್ಘಾನ್​ನಲ್ಲಿ ತಾಲಿಬಾನಿಗಳ ರಣ ಕೇಕೆ ಹೆಚ್ಚಾಗುತ್ತಿದೆ. ಅಲ್ಲಿ ತಾಲಿಬಾನಿಗಳು ಸರ್ಕಾರ ರಚಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹೈಬತುಲ್ಲಾ ಅಖುಂಡಜಾದ ನೂತನ ಅಧ್ಯಕ್ಷ ಎನ್ನುವಂತೆ ಮಾತುಗಳು ಕೇಳಿ ಬರ್ತಿದೆ. ಇದಕ್ಕೆ ಸಹಕಾರ ಕೋರಿ ಮಹಿಳೆಯರಿಗೆ ತಾಲಿಬಾನಿಗಳಿಂದ ಯಾವುದೇ ತೊಂದರೆ ಆಗುವುದಿಲ್ಲ, ನಾವು ಬದಲಾಗಿದ್ದೇವೆ ಎನ್ನುವ ಹೇಳಿಕೆಗಳನ್ನು ನೀಡಿದ್ದರು. ಆದರೆ ಕೊಟ್ಟ ಮಾತನ್ನು ಮರೆತು, ಕ್ರೌರ್ಯ ಮೆರೆಯುತ್ತಿದ್ದಾರೆ ತಾಲಿಬಾನಿಗಳು. ಮಹಿಳೆಯರನ್ನು ಮನಸೋ ಇಚ್ಛೆ ಕಾಣುತ್ತಿದ್ದಾರೆ. ತಮ್ಮ ದುಷ್ಟ ಕಣ್ಣುಗಳಿಂದ ಸ್ತ್ರಿಯರಿಗೆ ಹಲವು ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಮೌನದಿಂದ ಕೊಟ್ಟ ನೋವನ್ನು ಸಹಿಸಿಕೊಳ್ಳುತ್ತಿದ್ದ ಮಹಿಳೆಯರು, ಇದೀಗ ಮೌನ ಮುರಿದಿದ್ದಾರೆ.

ಮೌನ ಮುರಿದು ಉಗ್ರರ ವಿರುದ್ಧ ತಿರುಗಿ ಬಿದ್ದ ಸ್ತ್ರೀಶಕ್ತಿ
ಸಮಾನ ಹಕ್ಕು ಕೇಳಿ ಘೋಷಣೆ ಕೂಗಿದ ಮಹಿಳೆಯರು

ಸ್ತ್ರೀಯರಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ಸಮಾನತೆ‘ ಬೇಕು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ತಾಲಿಬಾನ್ ನಡೆಸುವ ಕಾನೂನಿನಲ್ಲಿ, ಮಹಿಳೆಯರಿಗೆ ಆಸ್ಫದವೇ ಇಲ್ಲ. ಅವರುಗಳು ಒಬ್ಬ ಕಾವಲುಗಾರ ನಿಲ್ಲದೆ ಮನೆಯ ಬಾಗಿಲನ್ನು ಸಹ ದಾಟುವ ಹಾಗಿಲ್ಲ. ಆದರೆ ಇಲ್ಲಿ ಸಣ್ಣ ಗುಂಪಿನಲ್ಲಿ ಬುರ್ಖಾ ತೊಟ್ಟ ಮಹಿಳೆಯರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉಗ್ರರು ವೆಪನ್ಸ್ ಹಿಡಿದು ನಿಲ್ಲಿಸುವಂತೆ ಹೇಳುತ್ತಿದ್ದರು, ಎದೆ ಗುಂದದೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿದ್ದಾರೆ.

blank

ಇದೀಗ ತಾಲಿಬಾನ್​ಗಳು ನೂತನ ಅಧ್ಯಕ್ಷನ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿವೆ. ಸದ್ಯಕ್ಕೆ ಹೈಬತುಲ್ಲಾ ಅಖುಂಡಜಾದ ಪಟ್ಟಕ್ಕೇರಲು ಸಿದ್ಧರಾಗುತ್ತಿದ್ದಾರೆ. ಇವರ ಜೊತೆಗೆ ತಾಲಿಬಾನ್ ಗ್ರೂಪ್​ನ ಸ್ಥಾಪಕ ಅಬ್ದುಲ್ ಘನಿ ಬಾರ್ದಾರ್, ತಾಲಿಬಾನಿ ಗುಂಪಿನ ಸಂಸ್ಥಾಪಕನ ಮಗ ಮಾವ್ಲವಿ ಯಕೂಬ್ ಹೀಗೆ ಹಲವರ ಲಿಸ್ಟ್ ಇವರ ಮುಂದಿದೆ. ಸರ್ಕಾರ ಸ್ಥಾಪನೆ ಆಗಲೇ ಬೇಕು ಅದರೇ ಹೇಗಿರಲಿದೆ ಇವರ ಕಾನೂನು ಎನ್ನುವುದು ಎಲ್ಲರ ಕುತೂಹಲ. ಆದಕ್ಕೆ ಉತ್ತರವಾಗಿ ತಾಲಿಬಾನ್ ನಾಯಕ ವಹೀದುಲ್ಲಾ ಹಷಿಮಿ ಉತ್ತರವನ್ನು ನೀಡಿದ್ದಾರೆ.

ಪ್ರಜಾಪ್ರಭುತ್ವ ಅನ್ನೋದು ತಾಲಿಬಾನಿಗಳಲ್ಲಿ ಇಲ್ಲವೇ ಇಲ್ಲ
ಶರಿಯಾ ಕಾನೂನಿನ ಹೊರೆತು ಇನ್ಯಾವ ಕಾನೂನಿನ ಚರ್ಚೆ ಇಲ್ಲ

ಮುಂದೆ ಯಾವುದೆ ಸರ್ಕಾರ ಪಟ್ಟಕ್ಕೆ ಬಂದರೂ ಅದರಲ್ಲಿ ಶರಿಯಾ ಕಾನೂನಿನ ಹೊರೆತಾಗಿ ಬೇರೆ ಯಾವ ಕಾನೂನಿಗೂ ಅವಕಾಶ ಇರುವುದಿಲ್ಲ. ಪ್ರಜಾಪ್ರಭುತ್ವ ಅನ್ನೋದು ಅಫ್ಘಾನ್ ಜನರಿಗಾಗಲೀ, ತಾಲಿಬಾನಿಗಳಿಗಾಗಲಿ ಹೋಲುವುದಿಲ್ಲ. ಅದನ್ನು ನಾವ್ಯಾರು ಅನುಸರಿಸುವುದಿಲ್ಲ ಎಂದು ಹೇಳಿ ಬಿಟ್ಟಿದ್ದಾರೆ. ಇದೇ ಕಾನೂನಿನ ಬಲದಿಂದ 1996 ರಿಂದ 2001ರವರೆಗೆ ಯಶಸ್ವಿಯಾಗಿ ಆಳ್ವಿಕೆ ಮಾಡಿದ್ದೆವೆ. ಈಗ ಕಾನೂನು ಬದಲಿಸಿದರೆ ಆ ವೇಳೆ ಹುತಾತ್ಮರಾದವರಿಗೆ ಅವಮಾನ ಮಾಡಿದಂತೆ ಎಂದು ತಾಲಿಬಾನ್ ಗುರುಗಳಾದ ವಹೀದುಲ್ಲಾ ಹಷಿಮಿ ಹೇಳುತ್ತಿದ್ದಾರೆ.

ತಾಲಿಬಾನ್ ವಿಮಾನಗಳಿಗೆ ಪೈಲಟ್ ಗಾಗಿ ಆಹ್ವಾನ
ಅಫ್ಗಾನ್ ಸೇನೆಗೆ ಮರು ಸೇರ್ಪಡೆಯಾಗಿ ಎಂದು ಕೋರಿಕೆ

ತಾಲಿಬಾನ್​ನಲ್ಲಿ ಉಗ್ರರು, ಶಸ್ತ್ರಾಸ್ತ್ರ ಪ್ರವೀಣರಲ್ಲ, ಅವರು ಮಕ್ಕಳ ಆಟಿಕೆಯಂತೆ ಗನ್​ಗಳನ್ನು ಕೈಯಲ್ಲಿ ಹಿಡಿದು ಅಡ್ಡಾಡುತ್ತಿದ್ದಾರೆ. ಆದರೆ ತಾಲಿಬಾನಿಯರಿಗೂ ವೆಪನ್ಸ್ ಉಪಯೋಗಿಸುವ ಕಲೆ ಇರುವ ಸೈನಿಕರು ಬೇಕು. ಇದಕ್ಕಾಗಿ ಅಫ್ಘಾನ್ ಸೇನೆಯಲ್ಲಿದ್ದ ವೀರರನ್ನು ತಾಲಿಬಾನ್​​ಗಳಿಗೆ ದುಡಿಯಲು ಆಹ್ವಾನಿಸುತ್ತಿದ್ದಾರೆ. ಜೊತೆಗೆ ವಿಮಾನವನ್ನು ಚಲಿಸುವ ಪೈಲಟ್​ಗಳ ಅನಿವಾರ್ಯವೂ ತಾಲಿಬಾನಿಗಳಿಗಿದೆ. ಈ ಹಿಂದೆ ಇದ್ದ ಅಫ್ಘಾನ್ ಸರ್ಕಾರ ಇಂಗ್ಲೆಂಡ್, ಟರ್ಕಿ, ಹಾಗೂ ಅಮೆರಿಕಾದಲ್ಲಿ ಸೇನೆಗೆ ಅಭ್ಯಾಸ ಮಾಡಿಸಿದ್ದರು. ಆ ಸೇನೆಯನ್ನೆ ತಾಲಿಬಾನ್ ಗಳಿಗೆ ದುಡಿಯಲು ಕೋರಿಕೆ ಇಡಲಾಗಿದೆ. ಅದರ ಜೊತೆಗೆ ಅಫ್ಘಾನ್ ಸೇನೆಯಲ್ಲಿ ದುಡಿದ ಹಾಗಲ್ಲ ತಾಲಿಬಾನ್ ಗೆ ದುಡಿಯುವುದು, ಇಲ್ಲಿ ಕೆಲವು ಷರತ್ತುಗಳನ್ನು ಪಾಲಿಸ ಬೇಕು ಎನ್ನುತ್ತಿದ್ದಾರೆ ತಾಲಿಬಾನ್ ನಾಯಕ.

blank

ಒಟ್ಟಿನಲ್ಲಿ. ತಾಲಿಬಾನಿಗಳು, ಕೆಲಸ ಗೊತ್ತಿಲ್ಲದಿದ್ದರೂ ಪದವಿ ಇರಲಿ ಎನ್ನುವ ಹಾಗೆ ಪಟ್ಟ ಹತ್ತಿ ನಿಂತಿದ್ದಾರೆ. ಆ ಸ್ಥಾನದಲ್ಲಿ ಕುಳಿತು, ಅಲ್ಲೆ ನಿರಂತರವಾಗಿ ಉಳಿಯಲು ಏನು ಮಾಡಬೇಕು ಎನ್ನುವುದನ್ನು ಯೋಚಿಸಿದಂತಾಗಿದೆ. ಒಂದು ದೇಶವನ್ನು ಕಟ್ಟುವುದು ಸುಲಭದ ಮಾತಲ್ಲ. ಇದಕ್ಕೆ ಅದರದೇಯಾದ ಶ್ರಮ ಬೇಕು. ತಾಕತ್ತು ಬೇಕು. ಆದ್ರೆ ತಾಲಿಬಾನಿಗಳಿಗೆ ಈ ಚಿಂತೆ ಇಲ್ಲ. ಇದರ ನಡುವೆ ಅವರ ಪ್ರತ್ಯೇಕ ಕಾನೂನು. ಎಲ್ಲವೂ ಕೂಡಿಸಿ ನೋಡುತ್ತಿದ್ದರೆ ಇವರ ಆಡಳಿತ ಹೇಗೆ ಉರುಳಿ ಹೋಗುತ್ತೋ ಅಂತಾ ಕಾಯುವ ಸ್ಥಿತಿ ಇದೆ. ಅದು ಅತ್ಯಂತ ಕಡಿಮೆ ಅವಧಿಯಲ್ಲಿ ಆದರೂ ಆಶ್ಚರ್ಯವಿಲ್ಲ. ಉಗ್ರರ ಬಳಿ ಕಸಿದು ಕೊಂಡ ಅಧಿಕಾರ ಒಂದು ಬಿಟ್ಟರೆ ಬೇರೇನೂ ಇಲ್ಲ. ಆ ಅಫ್ಘಾನಿಸ್ತಾನವನ್ನು ಮರುಸೃಷ್ಟಿ ಮಾಡಲು ಅಶ್ರಫ್ ಘನಿ ಪಟ್ಟ ಶ್ರಮ ಹೇಳಲು ಅಸಾಧ್ಯ. ಇದೀಗ ದೂರದಲ್ಲೆಲ್ಲೂ ಕುಳಿತು ಈ ಆರ್ಭಟವನ್ನು ನೋಡುತ್ತಿದ್ದಾರೆ. ಈ ದಂಡುಕೋರರ ಅಟ್ಟಹಾಸ ಯಾವಾಗ ಕೊನೆ ಕಾಣುತ್ತೋ ಅಂತಾ ಇಡೀ ಅಫ್ಘಾನಿಸ್ತಾನದ ಮುಗ್ಥ ನಾಗರೀಕರು ನಿರೀಕ್ಷಿಸುತ್ತಿದ್ದಾರೆ.

Source: newsfirstlive.com Source link