ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

ಚಿತ್ರ: ಗ್ರೂಫಿ
ನಿರ್ದೇಶನ : ಡಿ. ರವಿ ಅರ್ಜುನ್
ನಿರ್ಮಾಪಕ: ಕೆ.ಜಿ.ಸ್ವಾಮಿ
ಛಾಯಾಗ್ರಹಕ: ಲಕ್ಷೀಕಾಂತ್
ಸಂಗೀತ: ವಿಜೇತ್ ಕೃಷ್ಣ
ತಾರಾಬಳಗ: ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಇತರರು

ಯುವ ಜನತೆಯ ಜೀವಕ್ಕೆ ಮಾರಕವಾಗುತ್ತಿರುವ ಸೆಲ್ಫೀ ಗೀಳಿನ ಬಗ್ಗೆ ಸಿನಿಮಾ ಬೆಳಕು ಚೆಲ್ಲುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಿನಿಮ್ಯಾಟಿಕ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಚಿತ್ರದ ನಾಯಕ ಕಾರ್ತಿಕ್ ಒಬ್ಬ ಫೋಟೋ ಜರ್ನಲಿಸ್ಟ್. ಪ್ರಕೃತಿ ಸೌಂದರ್ಯವನ್ನು ಪ್ರೀತಿಸುವ ಕಾರ್ತಿಕ್ ಸದಾ ತನ್ನ ಕ್ಯಾಮೆರಾ ಕಣ್ಣಲ್ಲಿ ಅದರ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ನಿರತನಾಗಿರುತ್ತಾನೆ. ಕ್ಯಾಮೆರಾ ಹಿಡಿದು ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾನೆ. ಹೀಗಿರುವಾಗ ಒಮ್ಮೆ ಒಂದಷ್ಟು ಸ್ನೇಹಿತರು ಆತನಿಗೆ ಪರಿಚಯವಾಗುತ್ತಾರೆ. ಅವರೆಲ್ಲರದ್ದು ಒಂದೊಂದು ರೀತಿಯ ಸ್ವಭಾವ. ನಾಯಕಿ ಭುವಿಗೆ ಸದಾ ಸೆಲ್ಫೀ ತೆಗೆದುಕೊಳ್ಳುವ ಹುಚ್ಚು, ಭಯದಲ್ಲೇ ಬದುಕುವ ಪುನೀತ್, ಹೊಸತನಕ್ಕೆ ಹಾತೊರೆಯುವ ಪೂರ್ವಿ ಹೀಗೆ ಒಬ್ಬೊಬ್ಬರದ್ದು ಒಂದು ನೇಚರ್. ಇವರೆಲ್ಲರೂ ಒಂದು ಸುಂದರ ತಾಣದಲ್ಲಿ ಭೇಟಿಯಾಗಿ ಸ್ನೇಹಿತರಾಗುತ್ತಾರೆ. ಆನಂತರ ಏನೆಲ್ಲ ಘಟನೆ ನಡೆಯುತ್ತೆ ಎನ್ನುವುದೇ ಗ್ರೂಫಿ ಸಿನಿಮಾದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

ಛಾಯಾಗ್ರಾಹಕ ಲಕ್ಷೀಕಾಂತ್ ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬ ನೀಡುತ್ತದೆ. ನಿಸರ್ಗದ ಮಡಿಲಲ್ಲೇ ಚಿತ್ರೀಕರಣ ನಡೆದಿರುವುದರಿಂದ ಅದನೆಲ್ಲ ಸೊಗಸಾಗಿ ಸೆರೆಹಿಡಿದು ತೆರೆ ಮೇಲೆ ತಂದಿದ್ದಾರೆ. ನಿಸರ್ಗ ಸೌಂದರ್ಯದ ಜೊತೆ ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ವಿಜೇತ ಕೃಷ್ಣ ಸಂಗೀತದಲ್ಲಿ ಒಂದೆರಡು ಹಾಡುಗಳು ಮನಸಿಗೆ ಮುದ ನೀಡುತ್ತವೆ. ನಿರ್ದೇಶಕ ಡಿ. ರವಿ ಅರ್ಜುನ್ ಸಿನಿಮಾ ಪ್ರೀತಿ ಬಗ್ಗೆ ಮೆಚ್ಚುಗೆ ಸೂಚಿಸಲೇಬೇಕು. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

ಫೋಟೋ ಜರ್ನಲಿಸ್ಟ್ ಆಗಿ ನಾಯಕ ಆರ್ಯನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಪದ್ಮಶ್ರೀ ಜೈನ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಿತರ ಪಾತ್ರಗಳಲ್ಲಿ ನಟಿಸಿರುವ ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸ್ನೇಹ, ಪ್ರೀತಿ, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಎಳೆಗಳನ್ನು ಒಳಗೊಂಡಿರುವ ಈ ಚಿತ್ರ ನೋಡುಗರಿಗೆ ಥ್ರಿಲ್ ನೀಡೋದ್ರ ಜೊತೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ. ಒಟ್ನಲ್ಲಿ ಒಂದೊಳ್ಳೆ ಅನುಭವ ಗ್ರೂಫಿ ಚಿತ್ರ ನೀಡೋದ್ರಲ್ಲಿ ಡೌಟೇ ಇಲ್ಲ.

ರೇಟಿಂಗ್: 3.5/5

Source: publictv.in Source link