ಮಂಗಳೂರಿನಲ್ಲಿ ನಡೀತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಅರಗ ಜ್ಞಾನೇಂದ್ರ

– ಎನ್.ಐ.ಎ ಕಚೇರಿ ಸ್ಥಾಪಿಸುವ ಬಗ್ಗೆ ಕೇಂದ್ರದ ಜೊತೆ ಚರ್ಚೆ

ಮಂಗಳೂರು: ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎನ್.ಐ.ಎ ಕೇಂದ್ರ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಯೋತ್ಪಾದಕ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇಂದ್ರದ ಜೊತೆ ಮಾತನಾಡಿ ಎನ್.ಐ.ಎ ಕಚೇರಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿಗಿಲ್ಲ ಬಿಡುಗಡೆ ಭಾಗ್ಯ

ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಅತಂತ್ರ ವಿಚಾರದ ಕುರಿತು ಮಾತನಾಡಿ, ಕೇಂದ್ರ ಸರ್ಕಾರದಿಂದ ಕರೆತರುವ ವ್ಯವಸ್ಥೆಯಾಗುತ್ತಿದೆ. ರಾಜ್ಯದಿಂದ ನೋಡಲ್ ಆಫೀಸರ್ ನೇಮಕ ಮಾಡಿದ್ದೇವೆ. ಸಿ.ಐ.ಡಿಯಲ್ಲಿ ಕರ್ತವ್ಯದಲ್ಲಿರುವ ಉಮೇಶ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದೇವೆ. ಈ ಹಿಂದೆ ವಿದೇಶದಲ್ಲಿ ಅತಂತ್ರರಾಗಿದ್ದ ಕನ್ನಡಿಗರನ್ನು ಕರೆ ತಂದಿದ್ದಾರೆ. ಸಂಕಷ್ಟದಲ್ಲಿರುವವರು ಅವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದರು.

ಇದೇ ವೇಳೆ ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಾಟ ವಿಚಾರದ ಸಂಬಂಧ ಮಾತನಾಡಿ, ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಕೊಡಗು ಮಲೆನಾಡು ಭಾಗದಲ್ಲಿ ಇಂತಹ ಸಂಪ್ರದಾಯ ಇದೆ. ಇನ್ನೂ ಕೆಲವೆಡೆ ಇಂತಹ ಸಂಪ್ರದಾಯಗಳು ಇರಬಹುದು. ಭಗವಂತ್ ಖೂಬಾ ಬಂದ ಸಂದರ್ಭದಲ್ಲೂ ಖುಷಿಗೆ ಗಾಳಿಯಲ್ಲಿ ಗುಂಡು ಹಾರಾಟ ಮಾಡಿರಬಹುದು. ಆದರೆ ಇದು ಸಾರ್ವಜನಿಕವಾಗಿ ಮಾಡಿದ್ದು ತಪ್ಪು. ಇದರಿಂದ ಯಾರಿಗಾದೂ ತಾಗಿ ಅನಾಹುತವಾಗಬಹುದು. ಈ ಬಗ್ಗೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ ಎಂದರು.

Source: publictv.in Source link