ಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿಸುವ ಕನಸು ಹೊತ್ತು ಕಾಂಗ್ರೆಸ್ ಸೇರ್ಪಡೆ: ದ್ವಾರಕಾನಾಥ್

ಬೆಂಗಳೂರು: ದೇಶದಲ್ಲಿ ಫ್ಯಾಸಿಸ್ಟ್ ಹಾಗೂ ಮತಾಂಧ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದೆ. ಸಣ್ಣ ಹಾಗೂ ಹಿಂದುಳಿದ ಸಮುದಾಯಗಳನ್ನು ಈ ಪ್ಯಾಸಿಷ್ಟ್ ಶಕ್ತಿಗಳು ಸೆಳೆಯುತ್ತಿವೆ, ಈ ಸನ್ನಿವೇಶದಲ್ಲಿ ಈ ಸಣ್ಣ ಸಮುದಾಯಗಳನ್ನು ಕಮ್ಯೂನಲಿಸಂನಿಂದ ಉಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವ ಮೂಲಕ ಈ ಸಮುದಾಯಗಳ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದಾಗಿ ಡಾ.ಸಿ.ಎಸ್ ದ್ವಾರಕಾನಾಥ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ದ್ವಾರಕಾನಾಥ್, ಸಣ್ಣ ಸಮುದಾಯದ ಸಮಸ್ಯೆಗಳ ನಿವಾರಣೆಯ ನಿಟ್ಟಿನಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ದೇಶದಲ್ಲಿ ಇತ್ತೀಚೆಗೆ ಈ ಸಮುದಾಯದ ಪರವಾಗಿ ಧ್ವನಿ ಎತ್ತುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್

ಫ್ಯಾಸಿಸ್ಟ್ ಸಂಸ್ಕೃತಿ ಹೆಚ್ಚಾಗಿರುವ ಸಂದರ್ಭದಲ್ಲಿ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತುವ ಶಕ್ತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಜೊತೆಗೆ ಕೈಜೋಡಿಸಿದ್ದೇನೆ. ದೇವರಾಜ್ ಅರಸು ಅವರು ರಾಜಕೀಯದಿಂದ ಜಾತಿಗಳ ಸಮೀಕರಣ ಮತ್ತು ಸಂಪನ್ಮೂಲಗಳ ಕ್ರೊಢೀಕರಣ ಸಾಧ್ಯ ಎಂದು ಹೇಳಿದ್ದರು. ಜಾತಿಗಳ ಸಮೀಕರಣ ಹಾಗೂ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ: ಪುಟ್ಟರಾಜು

Source: publictv.in Source link