ತಾಲಿಬಾನಿಗಳ ಅಟ್ಟಹಾಸ; ‘ನಾವೀಗ ನಿರಾಶ್ರಿತರು’ ಎಂದು ಹಾಡುತ್ತಾ ನೋವು ತೋಡಿಕೊಂಡ ಮಹಿಳೆಯರು

ತಾಲಿಬಾನಿಗಳ ಅಟ್ಟಹಾಸ; ‘ನಾವೀಗ ನಿರಾಶ್ರಿತರು’ ಎಂದು ಹಾಡುತ್ತಾ ನೋವು ತೋಡಿಕೊಂಡ ಮಹಿಳೆಯರು

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದು ಸರ್ಕಾರ ರಚಿಸುವ ತರಾತುರಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದ ಜನರು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳಲು ವಿದೇಶಗಳತ್ತ ತೆರಳುತ್ತಿದ್ದಾರೆ.

ಈ ತಾಲಿಬಾನಿಗಳಿಂದ ಅತೀ ಹೆಚ್ಚು ತೊಂದರೆಗೆ ಸಿಲುಕುವುದು ಅಲ್ಲಿನ ಮಹಿಳೆಯರು. ಯಾಕಂದ್ರೆ ತಾಲಿಬಾನಿಗಳ ಪ್ರಕಾರ ಮಹಿಳೆಯರು ವಿದ್ಯಾವಂತರಾಗುವುದು, ಬಹಿರಂಗವಾಗಿ ಬುರ್ಖಾ ಇಲ್ಲದೆ ಕಾಣಿಸಿಕೊಳ್ಳುವುದು, ಮಾಡೆಲಿಂಗ್ ಅಥವಾ ಸಿನಿಮಾದಂಥ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವುದು ನಿಷಿದ್ಧ. ಹೀಗಾಗಿ ಅಲ್ಲಿನ ಮಹಿಳೆಯರ ಸ್ವತಂತ್ರವಾಗಿ ಬದುಕುವ ಹಕ್ಕನ್ನೇ ಕಸಿದುಕೊಂಡಂತಾಗುತ್ತದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಟ್ರೆಂಡಿಂಗ್ ಆಗಿದೆ. ಕಾಬೂಲ್​ನ ಏರ್ಪೋರ್ಟ್​ನ ರನ್​ವೇನಲ್ಲಿ ಕೆಲವು ಮಹಿಳೆಯರು ದಿಕ್ಕುತೋಚದಂತಾಗಿ ತಮಗಿನ್ನು ನೆಲೆಯೆಲ್ಲಿ ಎಂದು ಅಳುತ್ತಾ ಹಾಡುಹಾಡಿದ್ದಾರೆ. ಈ ವಿಡಿಯೋ ಎಂಥವರ ಹೃದಯವನ್ನೂ ಕರಗಿಸುವಂತಿದೆ.

ಈ ಹಾಡು ಅಫ್ಘಾನಿಸ್ತಾನದ ಜನಪ್ರಿಯ ಹಾಡಾಗಿದ್ದು ವ್ಯಕ್ತಿಯೊಬ್ಬ ನೆಲೆ ಕಳೆದುಕೊಂಡಾಗ ತನ್ನ ಪರಿಸ್ಥಿತಿಯನ್ನ ಹೇಳಿಕೊಳ್ಳುವ ಹಾಡಾಗಿದೆ. ಸರ್ಜಮಿನೆ-ಇ-ಮನ್(ನನ್ನ ತಾಯಿನೆಲ) ಹೆಸರಿನ ಈ ಹಾಡನ್ನು ದಾವೂದ್ ಸರ್ಖೋಶ್ ಎಂಬ ನಿರಾಶ್ರಿತನೋರ್ವ ರಚಿಸಿದ್ದು ಎನ್ನಲಾಗಿದೆ.

ಹಾಡಿನ ವಿಡಿಯೋದಲ್ಲಿ ಮಹಿಳೆಯರನ್ನು ಬಿಟ್ಟು ಪುರುಷರು ವಿಮಾನಗಳನ್ನ ಹತ್ತಲು ತೆರಳಿರುವುದು.. ಮತ್ತು ಮಹಿಳೆಯರು ಮತ್ತೊಂದು ವಿಮಾನಕ್ಕಾಗಿ ಕಾಯುತ್ತಾ ಹಾಡು ಹಾಡುತ್ತಿರುವ ಸನ್ನಿವೇಶ ದಾಖಲಾಗಿದೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋದಲ್ಲಿನ ಹಾಡು ಕೇಳಿದವರು ತಮ್ಮ ಸಿಂಪಥಿಯನ್ನು ವ್ಯಕ್ಯಪಡಿಸಿದ್ದಾರೆ. ಇಂಥ ಸ್ಥಿತಿ ಮತ್ಯಾರಿಗೂ ಎದುರಾಗುವುದು ಬೇಡ ಎಂದು ಹಲುಬಿದ್ದಾರೆ.

Source: newsfirstlive.com Source link