ಕನ್ನಡ ಭಾಷಾ ಕಲಿಕೆ ಪರಿಣಾಮಕಾರಿ ಅನುಷ್ಠಾನವಾಗಲಿ – ಶಿಕ್ಷಣ ಸಚಿವರಿಗೆ ಮನವಿ

ಬೆಂಗಳೂರು: ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ 2017-18ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಆದರೆ ಕೆಲ ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಮನವಿ ಮಾಡಿದರು.

2017-18ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿ 2020-21ನೇ ಶೈಕ್ಷಣಿಕ ವರ್ಷಕ್ಕೆ 4ನೇ ತರಗತಿ ಮಕ್ಕಳಿಗೆ ಈ ನಿಯಮದಡಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿರಬೇಕಿತ್ತು. ಆದರೆ ರಾಜ್ಯದಲ್ಲಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿವೆ. ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದಿಂದ ಪ್ರಾಧಿಕಾರಕ್ಕೆ ಬಂದಿರುವ ಅಧಿಕೃತ ಮಾಹಿತಿ ಅನ್ವಯ 2021-22ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಸುಮಾರು 823 ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಖರೀದಿಸಲು ಅಧಿಕೃತ ಪಟ್ಟಿ ಸಲ್ಲಿಸಿರುವುದಿಲ್ಲ. ಹೀಗಾಗಿ ಈ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿರುವುದು ಅನುಮಾನ ಬರುವಂತಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿನ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎನ್‍ಇಪಿ ಮೂಲಕ ಶಿಕ್ಷಣದಲ್ಲಿ ಸುಧಾರಣೆ: ಬಿ.ಸಿ.ನಾಗೇಶ್

1,2,3 ಮತ್ತು 4ನೇ ತರಗತಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲಾಗಿದೆಯೇ ಪರಿಶೀಲಿಸುವುದು. ತರಗತಿಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಸಕ್ಷಮ ಪ್ರಾಧಿಕಾರದಿಂದ ಖರೀದಿಸಲಾಗಿದೆಯೇ? ಅಗತ್ಯ ದಾಖಲೆಗಳನ್ನು ಸಂಗ್ರಹಿಸುವುದು. ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅರ್ಹ ಶಿಕ್ಷಕರನ್ನು ನೇಮಕ ಮಾಡಿರುವ ಬಗ್ಗೆ ಹಾಗೂ ಶಿಕ್ಷಕರಿಗೆ ನಿಯಮಾನುಸಾರ ತರಗತಿಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಪರಿಶೀಲಿಸುವುದು. ವಿದ್ಯಾರ್ಥಿಗಳಿಗೆ 100 ಅಂಕದ ಕನ್ನಡ ಪರೀಕ್ಷೆಯನ್ನು ನಡೆಸಿರುವ ಬಗ್ಗೆ, ಅದರಂತೆ ಮೌಲ್ಯಮಾಪನ ಮಾಡಿರುವ ಬಗ್ಗೆ ಹಾಗೂ ಮೌಲ್ಯಮಾಪನದಂತೆ ಅಂಕಪಟ್ಟಿಯನ್ನು ವಿತರಿಸಿರುವ ಬಗ್ಗೆ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸುವುದು.

blank

ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರಂತೆ ಉಳಿದೆಲ್ಲಾ ಅಗತ್ಯ ಪರಿಶೀಲನೆಗಳನ್ನು ನಡೆಸುವುದು. ಈ ಬಗ್ಗೆ 15 ದಿನಗಳೊಳಗಾಗಿ ಪ್ರಾಧಿಕಾರಕ್ಕೆ ವಿಸ್ತೃತ ವರದಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ಸಂಬಂಧ ಶೀಘ್ರದಲ್ಲಿಯೇ ನೂತನ ಶಿಕ್ಷಣ ಸಚಿವರೊಂದಿಗೆ ಉನ್ನತ ಮಟ್ಟದ ಸಮಿತಿ ಸಭೆ ಕರೆಯಲಾಗುವುದು ಎಂದು ಉಪನಿರ್ದೇಶಕರುಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರಿಗೆ ಇದೇ ವೇಳೆ ಪ್ರಾಧಿಕಾರದ ಅಧ್ಯಕ್ಷರು ಮಾಹಿತಿ ನೀಡಿದರು. ಇದನ್ನೂ ಓದಿ: ಮಕ್ಕಳಿಗೆ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ: ಟಿ.ಎಸ್ ನಾಗಾಭರಣ

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಹಾಜರಿದ್ದರು.

Source: publictv.in Source link