ಉತ್ತರ ಅಫ್ಘಾನ್​​ನಲ್ಲಿ ತಾಲಿಬಾನ್​ಗೆ ಸೆಡ್ಡು -3 ಜಿಲ್ಲೆಗಳು ತಾಲಿಬಾನಿ ಉಗ್ರರ ತೆಕ್ಕೆಯಿಂದ ಸ್ವತಂತ್ರ

ಉತ್ತರ ಅಫ್ಘಾನ್​​ನಲ್ಲಿ ತಾಲಿಬಾನ್​ಗೆ ಸೆಡ್ಡು -3 ಜಿಲ್ಲೆಗಳು ತಾಲಿಬಾನಿ ಉಗ್ರರ ತೆಕ್ಕೆಯಿಂದ ಸ್ವತಂತ್ರ

ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಹುಟ್ಟಡಗಿಸಲು ಸದ್ದಿಲ್ಲದೇ ಟೀಂವೊಂದು ಸೆಟೆದು ನಿಂತಿದೆ. ಬಂದೂಕಿನ ನಳಿಕೆಯಡಿ ಸಿಲುಕಿ ಸಾವು-ಬದುಕಿನ ಮಧ್ಯೆ ನರಳಾಡುತ್ತಿರುವ ಸ್ಥಳೀಯರು ಮಾಡು ಇಲ್ಲವೇ ಮಡಿ ಎಂಬಂತೆ ಆಧುನಿಕ ರಕ್ತಪಿಪಾಸುಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಅಫ್ಘಾನ್​​​​​​ನಲ್ಲಿ ತಾಲಿಬಾನ್​ಗೆ ಸ್ಥಳೀಯರ ಸೆಡ್ಡು
ಬಗ್ಗಿದ್ರೆ ಒಂದು ಗುದ್ದು ಜಾಸ್ತಿ ಬೀಳುತ್ತೆ ಅನ್ನೋದನ್ನ ಅರಿತಂತಿರುವ ಅಫ್ಘಾನ್ ಪ್ರಜೆಗಳು ತಾಲಿಬಾನಿ ಉಗ್ರರ ವಿರುದ್ಧ ಸಿಡಿದಿದ್ದಾರೆ. ಸ್ಥಳೀಯರ ಕೆಚ್ಚೆದೆಯ ಹೋರಾಟದಿಂದ 3 ಜಿಲ್ಲೆಗಳು ತಾಲಿಬಾನ್​ ತೆಕ್ಕೆಯಿಂದ ಸ್ವತಂತ್ರವಾಗಿವೆ. ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ತಾಲಿಬಾನ್ ಕೈತಪ್ಪಿದೆ. ಪಂಜ್​​​ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆದಿದೆ. ಈ ಹಿಂದೆ ತಾಲಿಬಾನ್ ವಿರುದ್ಧ ನಾಗರಿಕರನ್ನು ಸಂಘಟಿಸಿ ತಾಲಿಬಾನಿಗಳಿಂದ ಹತ್ಯೆಯಾದ ಅಹ್ಮದ್ ಶಾ ಮಸೂದ್‌ ಪುತ್ರ, ಅಹ್ಮದ್ ಮಸೂದ್‌ ತಾಲಿಬಾನಿಗಳ ವಿರುದ್ಧ ಹೋರಾಟ ಸಂಘಟಿಸುತ್ತಿರೋದು ಇಲ್ಲಿ ವಿಶೇಷ.

blank

ತಾಲಿಬಾನ್​ಗಳ ವಿರುದ್ಧ ಧ್ವನಿ ಎತ್ತಿದ ಅಫ್ಘನ್​ ಮಹಿಳಾ ಸಂಸದೆ
ತಾಲಿಬಾನಿಗಳ ವಿರುದ್ಧ ಅಫ್ಘಾನ್​​​ನ ಮಹಿಳಾ ಸಂಸದೆ ಫರ್ಜಾನಾ ಕೊಚೈ ಸಿಡಿದು ನಿಂತಿದ್ದಾರೆ. ಜನ ನನ್ನನ್ನು ನಂಬಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು, ಮಕ್ಕಳ ಪರವಾಗಿ ಹೋರಾಡುವುದು ನನ್ನ ಆದ್ಯತೆ ಅಂತ ಸಾರಿದ್ದಾರೆ. ತಾಲಿಬಾನ್​ಗಳಿಂದ ಅಪಾಯವಿದ್ರೂ ಪಲಾಯನ ಮಾಡದೇ ಇಲ್ಲೇ ಇದ್ದು ತಾಯ್ನಾಡಿಗಾಗಿ ಹೋರಾಡುತ್ತೀನಿ ಅಂತ ದಿಟ್ಟ ಉತ್ತರ ನೀಡಿದ್ದಾರೆ.

ಪೊಲೀಸ್​ ಅಧಿಕಾರಿಯ ಬರ್ಬರ ಹತ್ಯೆ, ಪತ್ರಕರ್ತನ ಸಂಬಂಧಿಯ ದಾರುಣ ಕೊಲೆ
ತಾಲಿಬಾನಿ ಉಗ್ರರ ತಕ್ತದಾಹ ಇನ್ನೂ ತಣಿದಂತಿಲ್ಲ. ತಮ್ಮ ವಿರೋಧಿಗಳಿಗಾಗಿ ಬೀದಿ ಬೀದಿಗಳಲ್ಲಿ ಹುಡುಕುತ್ತಿರುವ ಉಗ್ರ​ರು, ಬಡಗೀಸ್ ಪ್ರಾಂತ್ಯದಲ್ಲಿ ಪೊಲೀಸ್​ ಅಧಿಕಾರಿ ಹಾಜಿ ಮುಲ್ಲಾ ಎಂಬುವವರನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ. ಅಧಿಕಾರಿಯ ಎರಡೂ ಕೈಗಳನ್ನು ಕಟ್ಟಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಬಂದೂಕಿನಿಂದ ಗುಂಡಿನ ಮಳೆಗರೆದಿದ್ದಾರೆ.. ಜೊತೆಗೆ ಪತ್ರಕರ್ತನಿಗಾಗಿ ಹುಡುಕಾಡಿದ ಉಗ್ರರು ಆತ ಸಿಗದಿದ್ದಾಗ ಸಂಬಂಧಿಯನ್ನ ಗುಂಡಿಕ್ಕಿ ಕೊಂದಿದ್ದಾರೆ. ಅಲ್ಲದೇ ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗಾಗಿ ಮನೆ-ಮನೆ ಶೋಧ ನಡೆಸುತ್ತಿದ್ದಾರೆ ಅಂತ ವರದಿ ಆಗಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಪಡಿಸಿಕೊಳ್ಳುವುದರ ಹಿಂದೆ ಪಾಕಿಸ್ತಾನ!
ಅಫ್ಘಾನಿಸ್ತಾನವನ್ನು ಉಗ್ರರು ವಶಪಡಿಸಿಕೊಳ್ಳುವಲ್ಲಿ ಪಾಕಿಸ್ತಾನದ ಪಾತ್ರ ಜಗತ್ತು ಅರಿತಿರುವ ಸತ್ಯ ಉಗ್ರರ ಸ್ವರ್ಗ ಪಾಕ್​​​ ನೆಲದಲ್ಲೇ ತಾಲಿಬಾನಿಗಳಿಗಾಗಿ ತಾಲೀಮು ನಡೆಸಲಾಗಿತ್ತು. ಲಷ್ಕರ್‌–ಎ–ತಯ್ಬಾ ಶಿಬಿರಗಳಲ್ಲಿ ತರಬೇತಿ ಪಡೆದ ಉಗ್ರರನ್ನು ತಾಲಿಬಾನ್‌ ನೆರವಿಗೆ ಪಾಕಿಸ್ತಾನ ಸೇನೆ ಕಳಿಸಿಕೊಟ್ಟಿರುವುದು ಹೊಸದಾಗಿ ಬೆಳಕಿಗೆ ಬಂದಿದೆ.

Source: newsfirstlive.com Source link