ತಾಲಿಬಾನಿಗಳಿಗೆ IMF ಗುನ್ನಾ; ‘ಆರ್ಥಿಕ ಚಕ್ರವ್ಯೂಹ’ದ ಸ್ಟ್ರೋಕ್​ಗೆ ಉಗ್ರ ಸಂಘಟನೆ ಕಂಗಾಲು..!

ತಾಲಿಬಾನಿಗಳಿಗೆ IMF ಗುನ್ನಾ; ‘ಆರ್ಥಿಕ ಚಕ್ರವ್ಯೂಹ’ದ ಸ್ಟ್ರೋಕ್​ಗೆ ಉಗ್ರ ಸಂಘಟನೆ ಕಂಗಾಲು..!

ಅಫ್ಘಾನ್‌ ವಶಪಡಿಸಿಕೊಂಡು ತಾಲಿಬಾನಿ ಉಗ್ರರು ಕೇಕೆ ಹಾಕುತ್ತಾ ಕ್ರೌರ್ಯ ಮೆರೆಯುತ್ತಿದ್ದಾರೆ. ಆದ್ರೆ, ಜಾಗತಿಕ ಮಟ್ಟದಲ್ಲಿ ತಾಲಿಬಾನಿಗಳ ವಿರುದ್ಧ ಆರ್ಥಿಕ ಚಕ್ರವ್ಯೂಹವೊಂದು ಸದ್ದಿಲ್ಲದೇ ರಚನೆಯಾಗುತ್ತಿದೆಯಾ? ಅನ್ನೋ ಗುಮಾನಿ ಬಲವಾಗ್ತಿದೆ. ಅದರಿಂದ ತಾಲಿಬಾನ್‌ ಹೊರಬರುವುದು ಅಷ್ಟು ಸುಲಭವಿಲ್ಲ!

ಅಫ್ಘಾನ್‌ನಲ್ಲಿ ಇರುವುದು 3 ಕೋಟಿ 90 ಲಕ್ಷ ಜನಸಂಖ್ಯೆ. ಇಲ್ಲಿಯ ಜನರಿಗೆ ಆದಾಯ ತರುವ ಬಹುದೊಡ್ಡ ಆದಾಯದ ಮಾರ್ಗ ಅಂದ್ರೆ ಕೃಷಿ. ಅದ್ರಲ್ಲೂ ಸೇಬು, ಕಲ್ಲಂಗಡಿ, ಡ್ರೈ ಫ್ರೂಟ್ಸ್​​ ರಫ್ತು.. ಅದನ್ನು ಹೊರತು ಪಡಿಸಿದ್ರೆ ಕೊಂಚ ಪ್ರಮಾಣದ ಮೈನಿಂಗ್.. ವಿಶೇಷ ಅಂದ್ರೆ ಕಳೆದ ದಶಕದಲ್ಲಿ ಅಫ್ಘಾನಿಸ್ತಾನ ಶೇ.50ರಷ್ಟು ರಫ್ತು ಮಾಡಿದ್ದು.. ಕೇವಲ ಭಾರತ ದೇಶವೊಂದಕ್ಕೇ.. ಅಂದ್ರೆ ಇನ್​ಡೈರೆಕ್ಟಾಗಿ ಭಾರತವೇ ಅಫ್ಘಾನಿಸ್ತಾನವನ್ನೂ ಪಾಲನೆ ಮಾಡುತ್ತಿದ್ದುದು ಸುಳ್ಳಲ್ಲ..!

blank

ಹಾಗೆ ನೋಡಿದ್ರೆ, ಮೂಲತಃ ಲ್ಯಾಂಡ್​ ಲಾಕ್​ ದೇಶವಾಗಿರೋ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬರಡು ಭೂಮಿ ಕೂಡ ಇದೆ. ವ್ಯಾಪಾರ ವಹಿವಾಟು ಹೆಚ್ಚು ಪ್ರಗತಿ ಕಾಣದ ಈ ದೇಶದಲ್ಲಿ, ಬಹುದೊಡ್ಡ ಯುವ ಸಮೂಹ ಆದಾಯಕ್ಕಾಗಿ ಮಾದಕ ದ್ರವ್ಯ ಬೆಳೆ, ಕಳ್ಳಸಾಗಾಣಿಕೆ ಮತ್ತು ಮಾರಾಟದ ಮೇಲೆ ಅವಲಂಬಿತವಾಗಿದೆ. ಅದ್ರಲ್ಲೂ ಇಲ್ಲಿ ಅಫೀಮು, ಓಪಿಯಂ, ಹಷೀಷ್ ಮುಂತಾದ ಮಾದಕ ವಸ್ತುಗಳು ಇಲ್ಲಿನ ಭಯೋತ್ಪಾದನೆ, ಇಲ್ಲಿಗಲ್​ ಆರ್ಮ್ಸ್​ ರೇಸ್​​ನ ಬೆನ್ನೆಲುಬು. ಇದನ್ನು ಹೊರತು ಪಡಿಸಿದ್ರೆ ಅಂತಾರಾಷ್ಟ್ರೀಯ ಅನುದಾನ ಕೂಡ ಅಫ್ಘಾನಿಸ್ತಾನದ ಆರ್ಥಿಕ ಶಕ್ತಿಯಾಗಿತ್ತು.. ಆದ್ರೆ ಈಗ ಪರಿಸ್ಥಿತಿ ಭಯಾನಕ ಟ್ವಿಸ್ಟ್​ ಪಡೆದಿದೆ.

ಕಳೆದ 20 ವರ್ಷಗಳಿಂದ ಅಫ್ಘಾನ್‌ನಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಇತ್ತು. ಹೀಗಾಗಿಯೇ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಭಾರತ ಸೇರಿದಂತೆ ಬಲಿಷ್ಠ ರಾಷ್ಟ್ರಗಳಿಂದ ಆರ್ಥಿಕ ನೆರವು ಹರಿಯುತ್ತಿತ್ತು. ಎನ್‌ಜಿಓಗಳು ಆರ್ಥಿಕ ನೆರವು ನೀಡುತ್ತಿದ್ವು. ಆದ್ರೆ, ಈಗ ಪರಿಸ್ಥಿತಿ ಹಾಗಿಲ್ಲ. ತಾಲಿಬಾನಿ ಅನ್ನೋದು ಉಗ್ರಗಾಮಿ ಸಂಘಟನೆಯಾಗಿರೋದ್ರಿಂದ ಯಾವ ದೇಶವೂ ಆರ್ಥಿಕ ನೆರವು ನೀಡಲು ಮುಂದೆ ಬರುತ್ತಿಲ್ಲ. ಯಾವ ಎನ್‌ಜಿಒಗಳು ಸಾಹಯಕ್ಕೆ ಮುಂದಾಗುತ್ತಿಲ್ಲ. ಇಷ್ಟೇ ಅಲ್ಲ, ತಾಲಿಬಾನಿಗಳನ್ನು ಆರ್ಥಿಕವಾಗಿ ಕಟ್ಟಿ ಹಾಕಲು ಜಾಗತಿಕವಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ ಇದನ್ನೇ ಬಳಸಿಕೊಂಡು ಭಾರತದ ಪ್ರಭಾವ ಕುಂದಿಸಲು ಚೀನಾ ಮತ್ತೊಂದು ಹೆಜ್ಜೆ ಇಟ್ಟಿದೆ.

ಸಾಲ ನೀಡಲ್ಲ, ಸಂಪನ್ಮೂಲ ನೆರವಿಲ್ಲವೆಂದ ಐಎಂಎಫ್‌
ಐಎಂಎಫ್‌ ಘೋಷಣೆಗೆ ಕಂಗಾಲಾದ ತಾಲಿಬಾನ್‌

ಜಗತ್ತಿನ 190 ರಾಷ್ಟ್ರಗಳಿಗೆ ಸಾಲ ನೀಡುವುದು, ಇತರೆ ಸಂಪನ್ಮೂಲದ ನೆರವು ನೀಡುವುದನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದ್ರೆ ಐಎಂಎಫ್‌ ಮಾಡುತ್ತದೆ. ಪ್ರಾಕೃತಿಕ ವಿಕೋಪದಿಂದ, ಯುದ್ಧ ಅಥವಾ ಇನ್ಯಾವುದೇ ಕಾರಣದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವಿಗಾಗಿ ದೇಶಗಳು ಐಎಂಎಫ್‌ ಮೊರೆ ಹೋಗುತ್ತವೆ. ತಮಗೆ ಹಣಕಾಸಿನ ನೆರವು ನೀಡುವಂತೆ ಕೇಳಿಕೊಳ್ಳುತ್ತವೆ. ತನಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಐಎಮ್‌ಎಫ್‌ ಹಣಕಾಸಿನ ನೆರವು ನೀಡುತ್ತದೆ. ಆದ್ರೆ ಈಗ ತಾಲಿಬಾನ್​ ಸರ್ಕಾರಕ್ಕೆ ತಾನು ಸಾಲ ನೀಡಲ್ಲ, ಸಂಪನ್ಮೂಲಗಳ ನೆರವು ನೀಡುವುದಿಲ್ಲ ಅಂತ ಐಎಂಎಫ್‌ ಘೋಷಣೆ ಮಾಡಿದೆ.

blank

ಐಎಂಎಫ್‌ ಹಣಕಾಸಿನ ನೆರವು ನೀಡಲ್ಲ ಅಂದಿದ್ದೇಕೆ?
ತಾಲಿಬಾನಿ ಸರ್ಕಾರಕ್ಕೆ ಹಣಕಾಸಿನ ನೆರವು ನೀಡುವುದಿಲ್ಲ ಅಂತ ಕಡ್ಡಿ ಮುರಿದಂತೆ ಐಎಂಎಫ್‌ ಹೇಳಿದೆ. ಈ ಬಗ್ಗೆ ಐಎಂಎಫ್‌ ನೀಡಿದ ಸ್ಪಷ್ಟನೆ ಏನು ಅಂದ್ರೆ, ಅಫ್ಘಾನ್‌ ಸರ್ಕಾರದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸ್ಪಷ್ಟತೆಯ ಕೊರತೆ ಇದೆ. ಇದರ ಪರಿಣಾಮ ತಾಲಿಬಾನ್‌ ಸರ್ಕಾರ ಎಸ್‌ಡಿಆರ್‌ ಅಥವಾ ಐಎಂಎಫ್‌ ಸಂಪನ್ಮೂಲವನ್ನು ಬಳಕೆ ಮಾಡಲು ಸಾಧ್ಯವಿಲ್ಲ ಅಂತ ತಿಳಿಸಿದೆ. ಒಮ್ಮೆ ತಾಲಿಬಾನ್​ ಸರ್ಕಾರಕ್ಕೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಮಾನ್ಯತೆ ನೀಡಿದ್ರೆ, ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಪಾಕಿಸ್ತಾನ, ಚೀನಾ, ರಷ್ಯಾ ಮಾತ್ರ ಮಾನ್ಯತೆ ನೀಡುವ ಮಾತನಾಡಿವೆ. ಆದ್ರೆ, ಆ ರಾಷ್ಟ್ರಗಳು ಕೂಡ ಅಧಿಕೃತವಾಗಿ ಏನ್ನನ್ನೂ ಹೇಳಿಲ್ಲ

ಅಫ್ಘಾನ್‌ನ ಬಹುಕೋಟಿ ಸಂಪತ್ತಿಗೆ ಬ್ರೇಕ್‌
ಅಫ್ಘಾನ್‌ ಖಾತೆಯನ್ನು ಮುಟ್ಟುಗೋಲು ಹಾಕಿದ ಅಮೆರಿಕ

ತಾಲಿಬಾನಿಗಳಿಗೆ ಬಹುದೊಡ್ಡ ಆಶಾಕಿರಣವಾಗಿದ್ದು, ದಿ ಅಫ್ಘಾನಿಸ್ತಾನ್‌ ಬ್ಯಾಂಕ್‌ನಲ್ಲಿ ಇರೋ ಸಂಪತ್ತು ಆಗಿತ್ತು. ಹೌದು, ಈ ಬ್ಯಾಂಕ್‌ನಲ್ಲಿ 9 ಬಿನಿಯನ್‌ ಡಾಲರ್‌ ಅಂದ್ರೆ 6.68 ಲಕ್ಷ ಕೋಟಿ ಸಂಪತ್ತು ಇತ್ತು. ಅದರಲ್ಲಿ 5.19 ಲಕ್ಷ ಕೋಟಿಯಷ್ಟು ಹಣ ಚಿನ್ನ, ಬಾಂಡ್‌, ನಗದು ರೂಪದಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ನಲ್ಲಿ ಹೂಡಿಕೆ ಮಾಡಿತ್ತು. ಇದೀಗ ಅಮೆರಿಕ ಆ ಹಣವನ್ನು ಸೀಜ್‌ ಮಾಡಿದೆ. ಹೀಗಾಗಿ ತಾಲಿಬಾನಿಗಳ ಖಜಾನೆಗೆ ಆಶಾಕಿರಣವಾಗಿದ್ದ ಬಹುಕೋಟಿಯ ಸಂಪತ್ತನ್ನ ಅಮೆರಿಕ ವಶಕಪಡಿಸಿಕೊಂಡು ಬಿಟ್ಟಿದೆ.

ಆರ್ಥಿಕ ನೆರವು ನೀಡಲು ಬಲಿಷ್ಠ ರಾಷ್ಟ್ರಗಳು ಹಿಂದೇಟು
ತಾಲಿಬಾನಿಗಳಿಗೆ ನೆರವು ನೀಡಿದ್ರೆ ಮನೆ ಹಿತ್ತಲಲ್ಲಿ ಹಾವು ಸಾಕಿದಂತೆ

ಹಿಂದೊಮ್ಮೆ ಅಮೆರಿಕದ ವೈಟ್‌ಹೌಸ್‌ನಲ್ಲಿ ಹಿಲರಿ ಕ್ಲಿಂಟನ್‌ ಆಡಿದ ಮಾತು ಭಾರೀ ಅರ್ಥವನ್ನು ಪಡೆದುಕೊಂಡಿತ್ತು. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ದೃಷ್ಟಿಯಲ್ಲಿ ಅವರು ಆ ಮಾತನ್ನು ಹೇಳಿದ್ರು. ಅದೇನಂದ್ರೆ, ಭಯೋತ್ಪಾಕದ ಸಂಘಟನೆಗಳಿಗೆ ನೆರವು ನೀಡುವುದು, ಅವರನ್ನು ಪ್ರೋತ್ಸಾಹಿಸುವುದು ಮನೆಯ ಹಿತ್ತಲಿನಲ್ಲಿ ವಿಷದ ಹಾವು ಸಾಕಿದಂತೆ ಅಂದಿದ್ರು. ಆ ಮಾತಿನ ಅರ್ಥ ಅಂದ್ರೆ, ಮನೆಯ ಹಿತ್ತಲಿನಲ್ಲಿ ವಿಷಕಾರಿ ಹಾವನ್ನು ಸಾಕಿದ್ರೆ ಮುಂದೊಂದು ದಿನ ಅದು ತಮಗೆ ಕಚ್ಚುತ್ತದೆ, ಪ್ರಾಣ ತೆಗೆಯುತ್ತದೆ ಅನ್ನೋದು ಆಗಿತ್ತು. ಭಯೋತ್ಪಾದನೆ ಸಂಘಟನೆಗಳಿಗೆ ಈ ಮಾತು ಅಕ್ಷರಶಃ ನಿಜವಾಗಿದೆ. ಇದೇ ಉದ್ದೇಶಕ್ಕೆ ಅಮೆರಿಕ, ಬ್ರಿಟನ್‌, ಜರ್ಮನಿ, ಭಾರತ ಸೇರಿದಂತೆ ಯಾವುದೇ ರಾಷ್ಟ್ರ ಕೂಡ ತಾಲಿಬಾನಿಗಳಿಗೆ ನೆರವು ನೀಡುವ ಸಾಧ್ಯತೆ ಇಲ್ಲ.

blank

1.4 ಕೋಟಿ ಜನರಿಗೆ ಆಹಾರವಿಲ್ಲ
ಆಹಾರ ಒದಗಿಸುವುದೇ ದೊಡ್ಡ ಸಮಸ್ಯೆ

ಒಂದು ಕಡೆ ತಾಲಿಬಾನಿಗಳು ಕ್ರೂರ ಪ್ರವೃತ್ತಿಯನ್ನು ಮುಂದುವರಿಸಿದ್ರೆ, ಮತ್ತೊಂದೆಡೆ ಆ ದೇಶದ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಅದರಲ್ಲಿಯೂ ಕಳೆದ ಎರಡು ವರ್ಷದಿಂದ ತೀವ್ರ ಬರಗಾಲ ಕಾಡುತ್ತಿದೆ. ಇದರಿಂದ ಬೆಳೆದ ಬೆಳೆಯು ನಾಶವಾಗಿ ರೈತರು ಚಿಂತಾಜನಕ ಸ್ಥಿತಿಯಲ್ಲಿ ಜೀವನ ಮಾಡ್ತಾ ಇದ್ದಾರೆ. ವ್ಯಾಪಾರಿಗಳ ಪರಿಸ್ಥಿತಿಯೂ ಹೇಳತೀರದು. ಇದರ ಜೊತೆ ಕೊರೊನಾ ಸೋಂಕಿನಿಂದ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿ ಬಿಟ್ಟಿದೆ. ಆದ್ರೆ, ಇಷ್ಟು ದಿನಗಳ ಕಾಲ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಸೇರಿದಂತೆ ವಿವಿಧ ಸೌಲಭ್ಯಗಳ ನೆರವು ಹರಿದು ಬರ್ತಿತ್ತು. ಆದ್ರೆ, ಈಗ ಅದೆಲ್ಲದ್ದಕ್ಕೂ ಬ್ರೇಕ್‌ ಬಿದ್ದಿದ್ದೆ. ಇದರ ಪರಿಣಾಮ 1.4 ಕೋಟಿ ಜನಕ್ಕೆ ತಿನ್ನಲು ಆಹಾರ ಸಿಗುತ್ತಿಲ್ಲ ಅಂತ ವಿಶ್ವಸಂಸ್ಥೆ ತಿಳಿಸಿದೆ. ತಾಲಿಬಾನಿಗಳಿಂದ ಅರಾಜಕತೆ ಸೃಷ್ಟಿಯಾಗಿರೋ ಪರಿಣಾಮ ಆಹಾರವನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ತುರ್ತಾಗಿ 20 ಕೋಟಿ ಅಮೆರಿಕನ್‌ ಡಾಲರ್‌ ಅಗತ್ಯ ಇದೆ ಅಂತ ವಿಶ್ವಸಂಸ್ಥೆ ತಿಳಿಸಿದೆ.

blank

ಕೆಲಸಕ್ಕೆ ಹೋಗುತ್ತಿಲ್ಲ ಸರ್ಕಾರಿ ಅಧಿಕಾರಿಗಳು
ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ ಜನ
ಆರ್ಥಿಕ ಸುಧಾರಣೆ ಹೇಗೆ ಸಾಧ್ಯ?

ಒಂದು ದೇಶದ ಆಡಳಿತ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ. ಈ ಮೂರು ಅಂಗಗಳು ಕಾರ್ಯನಿರ್ವಹಿಸಬೇಕು. ಯಾವುದಾದ್ರೂ ಒಂದು ಅಂಗ ತನ್ನ ಕಾರ್ಯವನ್ನು ನಿಲ್ಲಿಸಿದ್ರೂ ಎದುರಾಗುವ ಸಮಸ್ಯೆ ಗಂಭೀರ ಸ್ವರೂಪದಾಗಿರುತ್ತದೆ. ಆಡಳಿತ ವ್ಯವಸ್ಥೆಯೇ ಅಲ್ಲೊಲ್ಲ ಕಲ್ಲೊಲ್ಲ ಆಗಿ ಬಿಡುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ತಾಲಿಬಾನಿಗಳು ಆಫ್ಘಾನ್‌ ವಶಪಡಿಸಿಕೊಂಡ ಮೇಲೆ ಅರಾಜಕತೆ, ಹಿಂಸೆ, ಕ್ರೌರ್ಯ ಹೆಚ್ಚಾಗಿ ಬಿಟ್ಟಿದೆ. ಇದರ ಪರಿಣಾಮ ಸರ್ಕಾರಿ ನೌಕರರು ಮನೆ ಬಿಟ್ಟು ಹೊರಗೆ ಬರ್ತಾ ಇಲ್ಲ, ಹೀಗಾಗಿ ಸರ್ಕಾರಿ ಕಚೇರಿಗಳೆಲ್ಲ ಖಾಲಿ ಖಾಲಿ ಹೊಡೆಯುತ್ತವೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಅದರಲ್ಲಿಯೂ ಮಹಿಳೆಯರು ಮನೆ ಬಿಟ್ಟು ಹೊರಬರಲು ಭಯ ಬೀಳುತ್ತಿದ್ದಾರೆ. ಹೀಗಾದ್ರೆ ತಾಲಿಬಾನಿಗಳ ಆಡಳಿತ ಹೇಗೆ? ಆರ್ಥಿಕ ಸುಧಾರಣೆಗೆ ತಾಲಿಬಾನಿಗಳು ಏನು ಮಾಡ್ತಾರೆ?

ತಾಲಿಬಾನಿಗಳ ವಿರುದ್ಧ ಆರ್ಥಿಕ ಚಕ್ರವ್ಯೂಹ
ಚಕ್ರವ್ಯೂಹದಿಂದ ಹೊರಬರುವುದು ಸುಲಭವಲ್ಲ

blank

ಅಮೆರಿಕ ಮತ್ತು ನ್ಯಾಟೋ ಪಡೆ 20 ವರ್ಷಗಳ ಕಾಲ ದಾಳಿ ನಡೆಸಿದ್ರೂ ತಾಲಿಬಾನಿಗಳನ್ನು ಮಟ್ಟ ಹಾಕಲು ಸಾಧ್ಯವಾಗಿರಲಿಲ್ಲ. ಆದ್ರೆ, ಅಮೆರಿಕ ಸೇನೆ ಹಿಂದೆ ಸರಿಯುತ್ತಲೇ ತಾಲಿಬಾನಿಗಳು ಅಫ್ಘಾನ್‌ ಅನ್ನು ವಶಪಡಿಸಿಕೊಂಡ್ರು. ಇನ್ನೇನು ಸರ್ಕಾರ ರಚಿಸಿಕೊಂಡು ಆಡಳಿತ ನಡೆಸಲು ಸಜ್ಜಾಗಿದ್ದಾರೆ. ಆದ್ರೆ, ತಾಲಿಬಾನಿಗಳಿಗೆ ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಯಾಕಂದ್ರೆ, ಜಾಗತಿಕ ಮಟ್ಟದಲ್ಲಿ ತಾಲಿಬಾನಿಗಳನ್ನು ಆರ್ಥಿಕವಾಗಿ ಕಟ್ಟಿಹಾಕುವ ವ್ಯವಸ್ಥಿತ ಕಾರ್ಯ ಆರಂಭವಾಗಿದೆ. ಭಾರತ ಕೂಡ ಸದ್ಯ ಅಫ್ಘಾನಿಸ್ತಾನದಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಇದೇ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗಿರೋ ಚೀನಾ, ಭಾರತದ ಪ್ರಭಾವವನ್ನು ಇಡೀ ಏಷ್ಯಾದಲ್ಲೇ ಕಟ್ಟಿಹಾಕುವ ಯೋಜನೆ ರೂಪಿಸಿದೆ ಎನ್ನಲಾಗ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಅಧ್ಯಯನ ನಡೆಸಿರೋ ಇಂಡಿಪೆಂಡೆಂಟ್ ರೀಸರ್ಚರ್​ ಆದಿತ್ಯ ಜಿಎಸ್​​, ಕೂಡ ಚೀನಾ ಏನು ಮಾಡುತ್ತಿದೆ? ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಭಾರತದ ಪ್ರಭಾವ ತಗ್ಗಿಸಲು ಚೀನಾ ಮಾಸ್ಟರ್​ ಪ್ಲಾನ್​​
ತಾಲಿಬಾನ್‌ ಆರ್ಥಿಕ ಸಂಕಷ್ಟವೇ ಚೀನಾಕ್ಕೆ ಮೇನ್​ ರೋಡ್
ಇದು ಅಧಿಕಾರ ಬದಲಾವಣೆಯಲ್ಲ, ವ್ಯವಸ್ಥೆ ಬದಲಾವಣೆ

ಇಂದು ವಿಶ್ವವೇ ತಾಲಿಬಾನಿಗಳ ವಿರುದ್ಧ ನಿಂತಿದೆ. ಆದ್ರೆ, ಚೀನಾ ಮತ್ತು ಪಾಕಿಸ್ತಾನಗಳು ಮಾತ್ರ ತಾಲಿಬಾನಿಗಳ ನೆರವಿಗೆ ನಿಂತಿದ್ದಾರೆ. ಆದರ ಹಿಂದೆ ಚೀನಾ ಮತ್ತು ಪಾಕಿಸ್ತಾನಗಳ ಹಿತಾಸಕ್ತಿಗಳು ಅಡಗಿವೆ. ಅದರಲ್ಲಿಯೂ ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ತಗ್ಗಿಸಲು ಚೀನಾ ಹವಣಿಸುತ್ತಲೇ ಇದೆ. ಅದಕ್ಕಾಗಿಯೇ ತಾಲಿಬಾನಿಗಳಿಗೆ ಚೀನಾ ಬೆಂಬಲಿಸುವ ಮಾತನ್ನು ಆಡುತ್ತಿದೆ. ಚೀನಾ, ಪಾಕಿಸ್ತಾನ ನಡುವಿನ ಎಕನಾಮಿಕ್ಸ್‌ ಕಾರಿಡಾರ್‌ ಅಫ್ಘಾನಿಸ್ತಾನ್‌ವರೆಗೂ ವಿಸ್ತರಣೆಯಾಗಬಹುದು. ಬೆಲ್ಟ್‌ ರೋಡ್‌ ಇನಿಷಿಯೇಟಿವ್​ ಆಗುತ್ತದೆ. ಹಾಗೇ ಚೀನಾ ಪ್ರಭಾವ ಬೆಳೆಯಬಹುದು. ಒಂದು ರೀತಿಯಲ್ಲಿ ಭಾರತವನ್ನು ಕಟ್ಟಿಹಾಕುವ ಉದ್ದೇಶದಿಂದಲೇ ತಾಲಿಬಾನಿಗಳ ನೆರವಿಗೆ ಚೀನಾ ಮುಂದಾಗುತ್ತೆ ಅಂತ ಇಂಡಿಪೆಂಡೆಂಟ್​​ ರಿಸರ್ಚರ್ ಅದಿತ್ಯ ಜಿಎಸ್‌ ಅಭಿಪ್ರಾಯ ಪಟ್ಟಿದ್ದಾರೆ.
-ಆದಿತ್ಯ ಜಿಎಸ್, ಇಂಡಿಪೆಂಡೆಂಟ್​​ ರಿಸರ್ಚರ್

blank
ಆದಿತ್ಯ ಜಿಎಸ್, ಇಂಡಿಪೆಂಡೆಂಟ್​​ ರಿಸರ್ಚರ್

ಒಟ್ಟಾರೆಯಾಗಿ ನಾವು ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನ ಗಮನಿಸಿದಾಗ ಒಂದೆಡೆ ತಾಲಿಬಾನ್​ ತನ್ನ ಅಧಿಕಾರ ಸುಸೂತ್ರವಾಗಿ ನಡೆಯಬೇಕು ಅಂದ್ರೆ, ಬಲಿಷ್ಠ ಆರ್ಥಿಕತೆಯನ್ನ ನೀಡಬೇಕಾಗುತ್ತೆ. ಇದೇ ಅವಕಾಶ ಬಳಸಿಕೊಳ್ಳಲು ಮುಂದಾಗಿರೋ ಚೀನಾ, ಭಾರತ ಪ್ರಭಾವವನ್ನ ಕುಗ್ಗಿಸಲು ಏನೆಲ್ಲಾ ಬೇಕು ಅದನ್ನ ಮಾಡಲು ಯತ್ನಿಸುತ್ತಿದೆ. ಇನ್ನೊಂದೆಡೆ ಭಾರತ ಕೂಡ ತನ್ನದೇ ಆದ ದಾಳ ಚಲಾಯಿಸಿದ್ದು, ಅಫ್ಘಾನಿಯರ ಮನ ಗೆಲ್ಲಲು ಮುಂದಾಗಿದೆ.

ಗನ್‌ ಹಿಡಿದು ಅಧಿಕಾರ ಚುಕ್ಕಾಣಿ ಹಿಡಿದರೋ ತಾಲಿಬಾನ್​ಗೆ ಅಧಿಕಾರ ನಡೆಸೋದು ಅಷ್ಟು ಸುಲಭಸಾಧ್ಯವಲ್ಲ. ಖಂಡಿತವಾಗಿ ತಾಲಿಬಾನಿಗಳ ವಿರುದ್ಧ ಆರ್ಥಿಕ ಚಕ್ರವ್ಯೂಹ ರಚನೆಯಾಗುತ್ತಿದೆ. ತಾಲಿಬಾನ್‌ ಅದರಿಂದ ಹೇಗೆ ಹೊರಬರುತ್ತೆ ಅನ್ನೋದು ಒಂದು ಪ್ರಶ್ನೆಯಾಗಿದ್ರೆ, ತಾಲಿಬಾನ್​ಗೆ ಸಹಾಯ ಮಾಡೋ ವೇಶ ತೊಟ್ಟಿರೋ ಚೀನಾ ಬರೋಬ್ಬರಿ 75 ಲಕ್ಷ ಕೋಟಿ ರೂಪಾಯಿ ಸಂಪತನ್ನ ತನ್ನದಾಗಿಸೋ ಮತ್ತೊಂದು ಚಕ್ರವ್ಯೂಹವನ್ನ ಕೂಡ ನಿರ್ಮಿಸಿದೆ.

ಇದನ್ನೂ ಓದಿ: ಚೀನಾ-ತಾಲಿಬಾನ್-ಪಾಕಿಸ್ತಾನ ದುಷ್ಟಕೂಟ ಒಂದಾದ್ರೆ ಭಾರತದ ಮೇಲೆ ಏನು ಪರಿಣಾಮ ಬೀರುತ್ತೆ?

Source: newsfirstlive.com Source link