ಜೈಲಿಗೆ ಬಂದು ಸಾಕಷ್ಟು ಓದುವುದನ್ನು ಕಲಿತೆ, ಇದು ನನ್ನ ಜೀವನದಲ್ಲಿ ಅತೀ ದೊಡ್ಡ ಬದಲಾವಣೆ: ವಿನಯ್ ಕುಲಕರ್ಣಿ

– ಜೈಲಿನಿಂದ ಹೊರ ಬಂದ ಬಳಿಕ ಮೊದಲ ಪ್ರತಿಕ್ರಿಯೆ

ಬೆಳಗಾವಿ: ಬರೋಬ್ಬರಿ 9 ತಿಂಗಳ ಜೈಲು ವಾಸದ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದು, ಆದೇಶ ಪ್ರತಿ ತಲುಪಿದ ಹಿನ್ನೆಲೆ ಇಂದು ಹೈಲಿನಿಂದ ಹೊರ ಬಂದಿದ್ದಾರೆ.

ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಾನು ನಿರ್ದೋಷಿಯಾಗಿ ಹೊರಗೆ ಬರುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ನಮ್ಮ ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಹೋರಾಟ ಮಾಡಿ ಸಂಪೂರ್ಣವಾಗಿ ಈ ಹೋರಾಟದಿಂದ ಹೊರಗೆ ಬರುತ್ತೇನೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬಸ್ಥರು ನನ್ನ ಸಂಬಂಧ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ.

ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕ್ಷೇತ್ರದ ಜನ, ನನ್ನನ್ನು ನಂಬಿದವರಿಗಾಗಿ ಎಂತಹದ್ದೇ ಹೋರಟವಾದರೂ ಮಾಡಲು ನಾನು ಸಿದ್ಧ. ಬರೋಬ್ಬ 9 ತಿಂಗಳು 16 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಇದೊಂದು ಟಾಸ್ಕ್, ನಿಭಾಯಿಸಿದ್ದೇನೆ. ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ಇನ್ನೊಂದು ಖುಷಿ ವಿಚಾರ ಎಂದರೆ ನನಗೆ ಓದುವ ಹವ್ಯಾಸ ಇರಲಿಲ್ಲ. ಆದರೆ ಜೈಲಿಗೆ ಬಂದ ಮೇಲೆ ಸಾಕಷ್ಟು ಓದುವುದನ್ನು ಕಲಿತಿದ್ದೇನೆ. ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಂಡುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಕುರಿತು ಹಲವಾರು ವಿಚಾರಗಳನ್ನು ಅರಿತಿದ್ದೇನೆ ಎಂದರು.

blank

ಹೊರ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿದ್ದು, ಜನ ಜಾತ್ರೆ ಉಂಟಾಗಿದೆ. ಅಲ್ಲದೆ ಕಾರ್ ನಲ್ಲೇ ವಿನಯ್ ಕುಲಕಣಿಯವರನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಗಿದೆ. ಅಭಿಮಾನಿಗಳು ಕಿಕ್ಕಿರಿದು ತುಂಬಿದು ಹಾರ ಹಾಕಿ, ಹೂವು ಎರಚಿ ಸಂಭ್ರಮಿಸುತ್ತಿದ್ದಾರೆ.

ಇದೀಗ ವಿನಯ್ ಕುಲಕರ್ಣಿ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಮಠದ ಅಲ್ಲಮಪ್ರಭು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ರುದ್ರಾಕ್ಷಿಮಠಕ್ಕೆ ಭೇಟಿ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಂಬ್ರಾ ಏರ್‍ಪೋರ್ಟ್‍ಗೆ ತೆರಳಿ ಮಧ್ಯಾಹ್ನ 3.40ರ ಫ್ಲೈಟ್‍ಗೆ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.

ವಿನಯ್ ಕುಲಕರ್ಣಿಯವರಿಗೆ ಗುರುವಾರ ಜಾಮೀನು ನೀಡಲಾಗಿದೆ. ಆದರೆ ಶುಕ್ರವಾರ ಕೋರ್ಟ್ ಆದೇಶದ ಪ್ರತಿ ಸಿಗದ ಹಿನ್ನೆಲೆ ಬಿಡುಗಡೆ ಸಾಧ್ಯವಾಗಿರಲಿಲ್ಲ. ಕೋರ್ಟ್ ಆದೇಶ ಪ್ರತಿಯನ್ನು ಇ-ಮೇಲ್ ಮಾಡದೆ, ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಪೋಸ್ಟ್ ಮೂಲಕ ಬರಬೇಕಿರುವ ಆದೇಶ ಪ್ರತಿ ವಿಳಂಬವಾಗಿತ್ತು. ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ಖುದ್ದಾಗಿ ವಕೀಲರು ನೀಡಿದ್ದಾರೆ.

blank

ಹೀಗಾಗಿ 2020ರ ನವೆಂಬರ್ 5ರಂದು ಹಿಂಡಲಗಾ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಬಿಡಗಡೆ ಭಾಗ್ಯ ಲಭಿಸಿರಲಿಲ್ಲ. ಅಂತಿಮವಾಗಿ ಇಂದು ಸ್ಪೀಡ್ ಪೋಸ್ಟ್ ಮೂಲಕ ಆದೇಶ ಪ್ರತಿ ಹಿಂಡಲಗಾ ಜೈಲು ತಲುಪಿದ್ದು, ಇದೀಗ ಹೊರ ಬಂದಿದ್ದಾರೆ.

Source: publictv.in Source link