ಮೈಸೂರು ನಗರ ಪಾಲಿಕೆಯಲ್ಲಿ ಜೆಡಿಎಸ್​, ಕಾಂಗ್ರೆಸ್ ದೋಸ್ತಿ ಖತಂ?- ಪರೋಕ್ಷ ಸುಳಿವು ಕೊಟ್ಟ ಸಾ.ರಾ ಮಹೇಶ್​

ಮೈಸೂರು ನಗರ ಪಾಲಿಕೆಯಲ್ಲಿ ಜೆಡಿಎಸ್​, ಕಾಂಗ್ರೆಸ್ ದೋಸ್ತಿ ಖತಂ?- ಪರೋಕ್ಷ ಸುಳಿವು ಕೊಟ್ಟ ಸಾ.ರಾ ಮಹೇಶ್​

ಮೈಸೂರು: ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್​, ಬಿಜೆಪಿ ಪಕ್ಷಗಳ ಜಂಗಿ ಕುಸ್ತಿಗೆ ಮತ್ತೊಂದು ಅಖಾಡ ಎದುರಾಗಿದೆ. ಇದೇ ಆಗಸ್ಟ್ 25ಕ್ಕೆ ಮತ್ತೊಮ್ಮೆ ಮೈಸೂರು ಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಮತ್ತೊಮ್ಮೆ ಸಿಕ್ಕಿರುವ ಟಾಸ್ಕ್‌‌ನಲ್ಲಿ ಮೇಯರ್‌ಗಾದಿ ಏರಬೇಕೆಂದು ಪಣತೊಟ್ಟಿರುವ ಬಿಜೆಪಿ, ಜೆಡಿಎಸ್‌ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿದೆ.

ರಾಷ್ಟ್ರಮಟ್ಟದಲ್ಲಿ ಸೌಂಡ್ ಮಾಡಿದ್ದ ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಈಗ ಇತಿಹಾಸ. ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ ಘೋಷಣೆಯಾಗಿತ್ತು. ಆದ್ರೆ ಕಾಂಗ್ರೆಸ್ ಸದಸ್ಯರು ಕೋರ್ಟ್ ಮೊರೆ ಹೋದ ಕಾರಣ ಲಾಕ್‌ಡೌನ್ ತೆರವು ಆಗೊವರೆಗೂ ಮೇಯರ್ ಚುನಾವಣೆ ನಡೆಸಬಾರದು ಎಂದು ಆದೇಶಿಸಲಾಗಿತ್ತು. ಈಗ ಲಾಕ್‌ಡೌನ್ ತೆರವು ಆಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 25ಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದೆ.

blank

ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಇತ್ತ ಉಭಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್ ವಿಶ್ವಾಸಗಿಟ್ಟಿಸಿಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ‌. ತಮ್ಮ ಅವಧಿಯಲ್ಲಿ ಹೇಗಾದರೂ ಸರಿ ಬಿಜೆಪಿ ಮೇಯರ್ ಗಾದಿ ಪಡೆಯಲೇಬೇಕು ಅಂತಾ ಪಣ ತೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಹಾಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮುರಿದು ಬೀಳುವ ಸುಳಿವನ್ನ ಜೆಡಿಎಸ್ ನಾಯಕರೇ ನೀಡಿದ್ದಾರೆ. ಕಳೆದ ಬಾರಿ ಘೋಷಣೆಯಾಗಿದ್ದ ಮೇಯರ್ ಚುನಾವಣೆ ತಡೆ ನೀಡುವಂತೆ ಕೋರ್ಟ್ ಮೊರೆ ಹೋದಾಗಿನಿಂದ ಕಾಂಗ್ರೆಸ್ ಜೊತೆ ನಾವು ಇಲ್ಲ. ಮುಂದಿನ ಚುನಾವಣೆಯಲ್ಲಿ ನಾವು ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

blank

ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್‌ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಮೈತ್ರಿ ಇತ್ತು. ಆನಂತರ ನಾವು ಅವರ ಜೊತೆಗಿಲ್ಲ. ಅವರೊಂದಿಗೆ ಮೈತ್ರಿ ಆಗ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ. ಹತ್ತು ವರ್ಷ ಮೇಯರ್ ಸ್ಥಾನದಲ್ಲಿ ನಾವೇ ಇದ್ದೇವೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿದ್ರು.

ಸಾ.ರಾ.ಮಹೇಶ್ ಈ ಹೇಳಿಕೆ ಹಿಂದೆ ನಾನಾ ಲೆಕ್ಕಾಚಾರ ಅಡಗಿದೆ ಎನ್ನಲಾಗ್ತಿದೆ. ಕಳೆದ ಮೇಯರ್ ಚುನಾವಣೆಯಲ್ಲೇ ಬಿಜೆಪಿ ಬೆಂಬಲಿಸಲು ಕೈಗೊಂಡಿದ್ದ ದಳಪತಿಗಳ ನಿರ್ಧಾರ ಕೊನೇ ಕ್ಷಣದಲ್ಲಿ ಉಲ್ಟಾ ಹೊಡೆದಿತ್ತು. ಹೀಗಾಗಿ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಈ ಬಾರಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹೊರ ಬಂದಂತೆಯೂ ಹಾಗೂ ಬಿಜೆಪಿಯನ್ನ ಪರೋಕ್ಷವಾಗಿ ಬೆಂಬಲಿಸಿದಂತೆಯೂ ಎನ್ನುವಂತೆ ಜಾಣ ನಡೆ ಇಡಲು‌ ನಿರ್ಧರಿಸಿದೆ. ಹೀಗಾಗಿಯೇ ನಾವು ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ ಎನ್ನಲಾಗ್ತಿದೆ.

ಈ ಎಲ್ಲಾ ಬೆಳವಣಿಗೆಗಳ‌ ನಡುವೆ ಕಾಂಗ್ರೆಸ್ ನಾಯಕರ ಮೌನ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೂಚನೆಯನ್ನ ದಿಕ್ಕರಿಸಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಶಾಸಕ ತನ್ವೀರ್‌ಸೇಠ್ ಈ ಬಾರಿ‌ ಫುಲ್ ಸೈಲೆಂಟ್ ಆಗಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಬಣ ರಾಜಕೀಯ ಮುಂದುವರೆದಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಕೊನೆ ಘಳಿಗೆಯಲ್ಲಿ ಹೈಡ್ರಾಮ ನಡೆದರೂ ಆಶ್ಚರ್ಯವಿಲ್ಲ.

Source: newsfirstlive.com Source link