ಐರ್ಲೆಂಡ್‍ನಲ್ಲಿದ್ದರೂ ಬಿಡದ ನಂಟು- ಮಕ್ಕಳಿಗೆ ನಿರಂತರ ಕನ್ನಡ ಪಾಠ

ಬೆಂಗಳೂರು: ಇದು ಅನಿವಾಸಿ ಭಾರತೀಯರ ಕನ್ನಡ ನಾಡಿನ ಪ್ರೀತಿ. ತಮ್ಮ ಮಕ್ಕಳು ಕನ್ನಡ ಕಲಿಯಬೇಕು. ಹುಟ್ಟೂರಿನಲ್ಲಿರುವ ಅಜ್ಜಿ-ತಾತನ ಜೊತೆ ಚೆನ್ನಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ನಾವಾಡಿದ ಆಟ, ಹಬ್ಬಗಳ ಬಗ್ಗೆ ಮಕ್ಕಳೂ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಮಕ್ಕಳಿಗೆ ನಿರಂತರ ಕನ್ನಡ ಪಾಠ ಜೊತೆಗೆ ಸ್ವಾತಂತ್ರ್ಯೋತ್ಸವದಂದು ವಿಶೇಷ ಪಾಠ ಹೇಳಿಕೊಟ್ಟಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿವಾಸಿ ಕನ್ನಡಿಗರು, ಐರ್ಲೆಂಡ್‍ನಲ್ಲಿದ್ದರು ಕೂಡ ನಮ್ಮ ಮಕ್ಕಳು ನಮ್ಮ ಜೊತೆ ಕನ್ನಡ ಸಿನಿಮಾ, ಹಾಡು ಕೇಳಿಸಿಕೊಳ್ಳಬೇಕು ತಮ್ಮ ಮಕ್ಕಳು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಹೆಬ್ಬಯಕೆಯಿಂದ “ಕನ್ನಡ ಕಲಿ” ಅಥವಾ “ಕನ್ನಡ ಕ್ರಿಯೇಟಿವ್ ಲರ್ನಿಂಗ್” ತರಗತಿ ಆರಂಭವಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್

ಕಳೆದ ನಾಲ್ಕು ದಿನದ ಹಿಂದಷ್ಟೇ ನಡೆದ ಸ್ವಾತಂತ್ರ್ಯ ದಿನವನ್ನು ಐರ್ಲೆಂಡಿನಲ್ಲೂ ಕನ್ನಡದ ಮಕ್ಕಳು ಆಚರಿಸಿದರು. ಬಂಟ್ವಾಳದ ಚಿತ್ರ ಕಲಾವಿದರಾದ ಶಿವಾನಂದ ಡಿ. ಉಳಿಕಕ್ಕೆಪದವು ತಮ್ಮ ಚಿತ್ರಕಲೆಯ ಮೂಲಕವೇ ಸ್ವಾತಂತ್ರ್ಯ ದಿನದ ಕುರಿತು ಐರ್ಲೆಂಡ್‍ನ ಕನ್ನಡಿಗರ ಮಕ್ಕಳಿಗೆ ವರ್ಚುವಲ್ ಮೂಲಕ ಪಾಠ ಮಾಡಿದರು. 30 ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದಲೇ ಸ್ವಾತಂತ್ರ್ಯದ ಹೋರಾಟ, ಬಲಿದಾನ, ಸಧ್ಯದ ಪರಿಸ್ಥಿತಿಯಲ್ಲೂ ಯೋಧರ ಹೋರಾಟ, ತಾಯಿ ನಾಡಿನ ಬಗ್ಗೆ ಇರಬೇಕಾದ ಗೌರವದ ಬಗ್ಗೆ ಹೆಮ್ಮೆಯಿಂದ ತಿಳಿದುಕೊಂಡರು.

blank

ಕಳೆದ ಮೂರು ವರ್ಷಗಳಿಂದ ಐರ್ಲೆಂಡ್ ಮಕ್ಕಳ ಕನ್ನಡ ಕಲಿಕೆ ಆರಂಭವಾಗಿದೆ. ಮೂರು ವರ್ಷಗಳಿಂದ ಇಂದಿಗೂ ನಿರಂತರವಾಗಿ ಯಶಸ್ಸು ಕಾಣುವಲ್ಲಿ ಶ್ರಮಿಸಿದವರು. ಐರ್ಲೆಂಡಿನಲ್ಲಿ ನೆಲೆಸಿರುವ ದಾವಣಗೆರೆಯ ಕಾಂತೇಶ್, ಬೆಂಗಳೂರಿನ ಪ್ರಕಾಶ್ ಹಾಗೂ ಗೆಳೆಯರು. ನಮ್ಮ ದೇಶ ಹಾಗೂ ಐರ್ಲೆಂಡ್ ದೇಶದಲ್ಲಿ ನಾಲ್ಕು ಗಂಟೆಗಳ ಸಮಯದ ವ್ಯತ್ಯಾಸವಿರುತ್ತದೆ. ಈ ಸಮಯ ತಿಳಿದುಕೊಂಡು, ಮಕ್ಕಳಿಗೆ ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆ ಬಳಸಿ ಅರ್ಥವಾಗುವ ರೀತಿಯಲ್ಲಿ ಕಥೆ ಹಾಗೂ ಚಿತ್ರದ ಮೂಲಕ ಸ್ವಾತಂತ್ರ್ಯ ದಿನವನ್ನು ಅರ್ಥ ಮಾಡಿಸುವುದು ಬಹಳ ಖುಷಿ ಕೊಟ್ಟ ವಿಷಯ ಎಂದು ಶಿವಾನಂದ್ ತಿಳಿಸಿದರು. ಇದನ್ನೂ ಓದಿ: ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

blank

ಐರ್ಲೆಂಡಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕನ್ನಡಿಗ ಕಾಂತೇಶ್ ಮಾತನಾಡಿ, ಐರ್ಲೆಂಡಿನಲ್ಲಿ ಹುಟ್ಟಿದ ಕನ್ನಡಿಗರ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. ಅಜ್ಜಿ, ತಾತ ಹತ್ತಿರ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಅಂತರ ಸೃಷ್ಟಿಯಾಗುತ್ತದೆ. ಮನೆಯಲ್ಲಿ ತಂದೆ-ತಾಯಿ ಕನ್ನಡ ಕಲಿಸಿಕೊಟ್ಟರು, ಮಕ್ಕಳು ತಮ್ಮ ವಯಸ್ಸಿನವರ ಜೊತೆ ಹೆಚ್ಚು ಬೆರೆಯುವುದರಿಂದ ಇಂಗ್ಲೀಷ್‍ನ್ನು ಹೆಚ್ಚು ಕಲಿತಿರುತ್ತಾರೆ. ಹೀಗಾಗಿ ಕನ್ನಡ ಕಲಿಸಲು ಡಬ್ಲಿನ್ ಸಿಟಿ ಸೇರಿದಂತೆ ಮೂರು ಕಡೆ ಲೈಬ್ರೆರಿಗಳಲ್ಲಿ ಕನ್ನಡ ತರಗತಿ ಮೂರು ವರ್ಷದ ಹಿಂದೆ ಆರಂಭಿಸಲಾಯಿತು.

blank

ಇದೀಗ ಕೋವಿಡ್ ಹಿನ್ನೆಲೆ ಆನ್‍ಲೈನ್ ಮೂಲಕ ತಿಂಗಳಿಗೆ ನಾಲ್ಕು ತರಗತಿಗಳನ್ನು ಒಂದು ಗಂಟೆಯ ಕಾಲ ನಡೆಸಲಾಗುತ್ತಿದೆ. ಸುಮಾರು 20-30 ಸ್ವಯಂಸೇವಕರು ಮುಂದೆ ಬಂದು ಉಚಿತವಾಗಿ ಕನ್ನಡದ ವಿವಿಧ ತರಗತಿಗಳನ್ನು ಕಲಿಸುತ್ತಿದ್ದಾರೆ. ಯುಎಸ್ ನಲ್ಲಿ ಕನ್ನಡದ ಶಿವಗೌಡರು ಬರೆದಿರುವ ಪುಸ್ತಕದ ಪ್ರಕಾರ ಕಲಿಸಲಾಗುತ್ತಿದೆ. 4 ರಿಂದ 14 ವಯಸ್ಸಿನ ಸುಮಾರು 40 ಮಕ್ಕಳು ಕನ್ನಡ ಕಲಿಕೆಯಲ್ಲಿದ್ದಾರೆ. ಅವರಿಗಿರುವ ಕನ್ನಡ ಜ್ಞಾನಕ್ಕೆ ತಕ್ಕಂತೆ ಬೇರೆ ಬೇರೆ ತಂಡಗಳನ್ನು ಮಾಡಿ ಕಲಿಸಲಾಗುತ್ತಿದೆ ಎಂದರು.

ಐರ್ಲೆಂಡ್ ನಿವಾಸಿಯಾಗಿರುವ ಬೆಂಗಳೂರಿನ ಪ್ರಕಾಶ್ ಮಾತನಾಡಿ, ಕನ್ನಡಿಗರ ಮಕ್ಕಳ ಕನ್ನಡ ಕಲಿಕೆಗೆ ಹೆತ್ತವರಿಂದಲೂ ಉತ್ತಮ ಸ್ಪಂದನೆ ಇದೆ. ಮಕ್ಕಳಿಗೂ ಒಂದು ಗಂಟೆ ಕ್ಲಾಸ್ ಆಗಿರುವುದರಿಂದ, ಪಠ್ಯಗಳನ್ನು ಹೊರತುಪಡಿಸಿ ಹೊಸ ವಿಷಯ ಕಲಿಯುವುದನ್ನು ಉತ್ಸಾಹದಿಂದ ಕಲಿಯುತ್ತಿದ್ದಾರೆ. ಮಕ್ಕಳಿಗೂ ಕನ್ನಡದವರೇ ಆದ ಹೊಸ ಗೆಳೆಯರ ಬಳಗ ಸಿಕ್ಕಿದೆ. ತರಗತಿಗಳು ಕೂಡ ಚಟುವಟಿಕೆಯಿಂದ ಕೂಡಿರುತ್ತವೆ. ಹೀಗಾಗಿ ಕಳೆದ ಮೂರು ವರ್ಷದಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಅನಿವಾಸಿ ಭಾರತೀಯರ, ಕನ್ನಡ ನೆಲದ ಪ್ರೀತಿ, ಭಾಷೆಯ ನಂಟು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

Source: publictv.in Source link