ಬೆಕ್ಕುಗಳಿಗಾಗಿಯೇ ಐಷಾರಾಮಿ ಅರಮನೆ.. ಈ ಪ್ರಾಣಿ ಪ್ರೀತಿ ಹಿಂದಿದೆ ಒಂದು ‘ಕರುಣಾಜನಕ ಕತೆ‘

ಬೆಕ್ಕುಗಳಿಗಾಗಿಯೇ ಐಷಾರಾಮಿ ಅರಮನೆ.. ಈ ಪ್ರಾಣಿ ಪ್ರೀತಿ ಹಿಂದಿದೆ ಒಂದು ‘ಕರುಣಾಜನಕ ಕತೆ‘

ಸಾಕು ಪ್ರಾಣಿಗಳಿಗೆ ಕೆಲವರ ಮನೆಯಲ್ಲಿ ಪ್ರತ್ಯೇಕ ಸ್ಥಾನ ಇದೆ. ಅದರಲ್ಲೂ ನಾಯಿ ಮತ್ತು ಬೆಕ್ಕು ಅಂದ್ರೆ ಎಲ್ಲರ ಪ್ರೀತಿಯ ಪೆಟ್. ಆದ್ರೆ ನೀವ್ಯಾರೂ ಬೆಕ್ಕುಗಳಿಗಾಗಿ ಈ ರೀತಿ ಸೌಕರ್ಯ ಮಾಡಿರಲು ಸಾಧ್ಯವೇ ಇಲ್ಲ. ಅಂತಹ ಐಷಾರಾಮಿ ಜೀವನವನ್ನು ಈ ಮನೆಯ ಬೆಕ್ಕುಗಳು ಅನುಭವಿಸುತ್ತಿವೆ. ಆ ಬೆಕ್ಕುಗಳಿಗಾಗಿ ಏನೆಲ್ಲಾ ಮಾಡಿದ್ದಾರೆ ಗೊತ್ತಾ ? ನೀವು ನೋಡಿದರೆ ಅಚ್ಚರಿ ಪಡ್ತೀರ.

ಪೆಟ್ ಲವ್ವರ್ಸ್.. ಜಗತ್ತಿನಾದ್ಯಂತ ಈ ಪ್ರಾಣಿ ಪ್ರಿಯರು ಅದೇನೆಲ್ಲ ಮಾಡ್ತಾರೆ ಅಂದ್ರೆ, ಅವರಿಗೂ ಗೊತ್ತಿಲ್ಲದ ಹಾಗೆ ತಮ್ಮ ಅಷ್ಟು ಪ್ರೀತಿಯನ್ನು ಪ್ರಾಣಿಗಳಿಗೆ ಧಾರೆ ಎರದು ಬಿಡ್ತಾರೆ. ಇದಕ್ಕೆ ಸರಿಯಾಗಿ, ಆ ಸಾಕು ಪ್ರಾಣಿಗಳೂ ಸಹ ತನ್ನ ನೆಚ್ಚಿನ ಮಾಲೀಕನಿಗೆ ಮುದ್ದುಗರೆದು ಎಲ್ಲರ ಮನಸಲ್ಲೂ ಸ್ಥಾನ ಗಿಟ್ಟಿಸಿಕೊಂಡು ಬಿಡುತ್ತೆ.

blank

ಇದು ಈಗಿನಿಂದ ಇರುವ ಸಂಪ್ರದಾಯವಲ್ಲ. ಪುರಾತನ ಕಾಲದಿಂದಲೂ ಸಾಕು ಪ್ರಾಣಿಗಳು ಕೆಲವರ ಮನೆಯ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದು ಇತ್ತಿಚಿನ ದಿನಗಳಲ್ಲಿ ಬಹಳಷ್ಟು ಮಹತ್ವ ಗಿಟ್ಟಿಸಿಕೊಂಡಿದೆ ಪ್ರೀತಿಯ ಪ್ರಾಣಿಗಳು. ಯಾಕೆ ಸಾಕು ಪ್ರಾಣಿಗಳಿಗೆ ಅಷ್ಟು ಮಹತ್ವ ಅನ್ನೋದಾದ್ರೆ ಅದು ಮಾನವನ ಚಂಚಲ ಮನಸ್ಸುನ್ನ ಹಿಡಿದು ಕೂರಿಸ ಬಲ್ಲ ಶಕ್ತಿ ಹೊಂದಿರುತ್ತೆ.

ಈ ಸ್ಟೋರಿಯಲ್ಲಿ ಎಲ್ಲ ಸಾಕು ಪ್ರಾಣಿಗಳ ಬಗ್ಗೆ ಹೇಳುತ್ತಿಲ್ಲ. ಬದಲಿಗೆ ಈ ಒಂದು ಊರಿನಲ್ಲಿ ಇರುವ ಬೆಕ್ಕಿನ ಪ್ರೇಮಿಗಳ ಬಗ್ಗೆ ಪರಿಚಯ ಮಾಡಿಕೊಡ್ತೀವಿ. ಬೆಕ್ಕು ಅಂದ ಕೂಡಲೇ ಕೆಲವರಿಗೆ ಭಯ, ಕೆಲವರಿಗೆ ಇಷ್ಟವಿಲ್ಲ, ಕೆಲವರಿಗೆ ಅಪಶಕುನವಾದರೆ ಅದೆಷ್ಟೋ ಜನರಿಗೆ ಇದು ಪಂಚಪ್ರಾಣ. ಮುದ್ದು ಮುದ್ದು ಮುಖವನ್ನು ಹೊತ್ತು, ಪೂಸಿ ಹೊಡೆದೆ ಮನೆ ಒಡೆಯನ ಪ್ರೀತಿ ಗಿಟ್ಟಿಸಿ ಬಿಡುತ್ತೆ ಈ ಮಾರ್ಜಾಲ. ಅದು ಕದ್ದು ಹಾಲು ಕುಡಿದರೂ, ಮನೆಯ ವಸ್ತುವನೆಲ್ಲ ಹರಿದು, ಕಿತ್ತು ಧ್ವಂಸ ಮಾಡಿದರೂ, ಚರ್ಮ ಕಿತ್ತು ಹೋಗುವ ಹಾಗೆ ಪರಚಿದರೂ ಬೆಕ್ಕಿಗೆ ಸಿಗಬೇಕಾದ ಪ್ರೀತಿ ಮಾತ್ರ ಹಲವರ ಮನೆಯಲ್ಲಿ ಇನ್ನು ಹಾಗೆ ಇದೆ. ಹಾಗೆ ಈ ಮನೆಯನ್ನು ನೋಡಿ.., ಇದು ಕೇವಲ ಬೆಕ್ಕಿನ ಮನೆಯಲ್ಲ.. ಬದಲಿಗೆ ಮಾರ್ಜಾಲದ ಸಾಮ್ರಾಜ್ಯ..

ಇದನ್ನೂ ಓದಿ: ಇನ್ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್​​ಗಳ 16 ನಂಬರ್​​ಗಳನ್ನೂ ನೀವು ನೆನಪಿಡಬೇಕು.. ಯಾಕೆ ಗೊತ್ತಾ..?

ಎಲ್ಲಿ ನೋಡಿದರಲ್ಲಿ ಬೆಕ್ಕಿನ ಸಮೂಹ. ಒಂದು ಕೂತು ತೂಕಡಿಸಿದರೆ, ಮತ್ತೊಂದು ತನ್ನ ಚೇಷ್ಟೆ ಮುಂದುವರೆಸುತ್ತಿದೆ. ಎಲ್ಲಿ ಬೇಕಾದರಲ್ಲಿ, ಮನಸೋ ಇಚ್ಛೆ ಓಡಾಡುವ ಸ್ವಾತಂತ್ರ ಈ ಎಲ್ಲ ಬೆಕ್ಕುಗಳಿಗೆ ಸಿಕ್ಕಿರೋದು, ಜಗತ್ತಿನ ಯಾವುದೇ ಬೆಕ್ಕುಗಳಿಗೂ ಸಿಕ್ಕಿಲ್ಲ ಅನ್ಸುತ್ತೆ. ಈ ಒಂದು ಮನೆ, ವಾಸ ಮಾಡುವವರಿಗಿಂತ ಹೆಚ್ಚಾಗಿ ಬೆಕ್ಕಿಗಾಗೇ ಮೀಸಲಿಟ್ಟಂತಿದೆ. ನಿದ್ದೆ ಮಾಡುವುದಕ್ಕೆ ಸುಖಕರ ಆಸನವಿದ್ರೆ, ಬಿಸಿಲಿಗೆ ಮೈಯೊಡ್ಡಿ ತೂಕಡಿಸಿಕೊಳ್ಳಲು ಅಚ್ಚು ಕಟ್ಟು ಕಟ್ಟೆಗಳಿವೇ. ಆಟವಾದಲೂ ಬೆಕ್ಕಿನ ಪಾರ್ಕ್ ಇದ್ರೆ.. ಹೊಟ್ಟೆಗೆ ಭರ್ಜರಿ ಭೋಜನವಿದೆ. ಇಷ್ಟು ಸುಖಕರ, ಐಷಾರಾಮಿ ಜೀವನ.., ಜಗತ್ತಿನ ಇನ್ಯಾವ ಬೆಕ್ಕುಗಳ ಬದುಕಲ್ಲಿ ಇಲ್ಲವೇ ಇಲ್ಲ ಅನ್ಸುತ್ತೆ.

ಈ ಬೆಕ್ಕಿನ ರಾಶಿಯನ್ನು ನೋಡಿದರೇ ಕಣ್ಣ್ ಅಂದಾಜಿನಲ್ಲೆ ಹೇಳ ಬಹುದು ಎಲ್ಲಿ ಎಣಿಸಲಾರದಷ್ಟು ಬೆಕ್ಕುಗಳಿವೆ ಅನ್ನೋದು. ಆದ್ರೆ ಇಲ್ಲಿ ಎಲ್ಲ ಬೆಕ್ಕುಗಳ ಲೆಕ್ಕವಿದೆ, ಜೊತೆಗೆ ಪ್ರತಿ ಬೆಕ್ಕಿಗೂ ಹೆಸರು ಇದೆ. ಹಾಗಾದ್ರೆ ಈ ಮಾರ್ಜಾಲ ಗಾರ್ಡನ್ ನಲ್ಲಿ ಅದೆಷ್ಟು ಬೆಕ್ಕುಗಳಿದೆ ಗೊತ್ತಾ ? ಬರೋಬರಿ 200ಕ್ಕೂ ಹೆಚ್ಚು ಬೆಕ್ಕುಗಳು ಇಲ್ಲಿ ಜೀವಿಸುತ್ತಿವೆ.

blank

ನೀವ್ ನೋಡ್ತಾ ಇರೋ ಬೆಕ್ಕಿನ ಮನೆ ಇರೋದು ಗುಜರಾತ್​ನ ಕಛ್ ನಲ್ಲಿರುವ ಗಾಂಧಿ ದಾಮದಲ್ಲಿ. ಈ ಮನೆಯ ಮಾಲೀಕರ ಹೆಸರು ಉಪೇಂದ್ರ ಗೋಸ್ವಾಮಿ. ಇವರು ಮೂಲತಃ ಕಸ್ಟಮ್ ಹೌಸ್ ಏಜೆಂಟ್. ತಮ್ಮ ವ್ಯವಹಾರದಲ್ಲಿ ಯಶಸ್ವಿಯಾಗಿರುವವರು, ಹುಚ್ಚು ಬೆಕ್ಕಿನ ಪ್ರೇಮಿ ಅಂದ್ರೆ ತಪ್ಪಾಗಲ್ಲ. ಅದಕ್ಕೆ ಸಾಕ್ಷಿ ಇವರ ಈ ಬೆಕ್ಕಿನ ಮನೆ. ಇವರೊಬ್ಬರೆ ಅಲ್ಲದೆ ಮನೆಯಲ್ಲಿ ಇರುವ ಪ್ರತಿಯೊಬ್ಬರಿಗೂ ಅಲ್ಲಿ ಜೀವಿಸುತ್ತಿರುವ ಬೆಕ್ಕು ಅಂದ್ರೆ ಇನ್ನಿಲ್ಲದ ಪ್ರೀತಿ. ಆದ್ರೆ ಇವರಿಗೆಲ್ಲ ಈ ಬೆಕ್ಕಿನ ಮೇಲೆ ಹುಚ್ಚು ಪ್ರೀತಿ ಹುಟ್ಟಿಕೊಳ್ಳಲು., ಒಂದು ದೊಡ್ಡ ಕತೆಯೇ ಇದೆ. ಅದೇನು ಗೊತ್ತಾ ?

ಇವರಿಗೆ ಬೆಕ್ಕಿನ ಮೇಲೆ ಪ್ರೀತಿ ಹುಟ್ಟುಕೊಳ್ಳಲು ಮೂಲ ಕಾರಣ., ಉಪೇಂದ್ರ ಗೋಸ್ವಾಮಿಯವರ ತಂಗಿ. ಉಪೇಂದ್ರರವರಿಗೆ ತನ್ನ ತಂಗಿ ಎಂದ್ರೆ ತುಂಬಾ ಪ್ರೀತಿ. ಆದರೆ ಆಕೆ 1994ರಲ್ಲಿ ತನ್ನ ಚಿಕ್ಕ ವಯಸ್ಸಿನಲ್ಲೆ ಅಕಾಲ ಮರಣ ಹೊಂದಿದ್ದಾಳೆ. ಇವಳನ್ನು ಕಳೆದುಕೊಂಡರು ಉಪೇಂದ್ರರವರು., ತಮ್ಮ ಜೊತೆಯೇ ಆಕೆ ಇದ್ದಾಳೆ ಎನ್ನುವ ಹಾಗೆಯೇ ಜೀವಿಸುತ್ತಿದ್ದರು. ಅವರ ತಂಗಿಯ ಹುಟ್ಟು ಹಬ್ಬವನ್ನು ಆಕೆಯ ಅಗಲಿಕೆಯ ನಂತರವೂ ಆಚರಿಸುತ್ತಿದ್ದರು.

ಹಾಗೆ ಒಂದು ದಿನ ಬರ್ತ್ ಡೇ ಆಚರಿಸುವಾಗ, ಒಂದು ಬೆಕ್ಕು ಕಟ್ ಮಾಡಿದ ಕೇಕ್ ಅನ್ನು ತಿಂದಿತ್ತಂತೆ. ಅದನ್ನು ಕಣ್ಮಿಟಿಕಿಸದೇ ನೋಡಿದ ಉಪೇಂದ್ರರಿಗೆ ತನ್ನ ತಂಗಿಯೇ ಬೆಕ್ಕಿನ ರೂಪದಲ್ಲಿ ಬಂದು ಕೇಕ್ ಸೇವಿಸಿದ್ದಾಳೆ ಎಂದು ನಂಬಿದ್ದಾರೆ. ಅಂದಿನಿಂದ ಇವರು ಎಲ್ಲಿ ಬೆಕ್ಕು ಕಾಣಿಸುತ್ತೋ.. ಅನಾಥವಾಗಿ ಇರುವುದು ಅರಿವಾಗುತ್ತೊ.. ಅದನ್ನು ತಂದು ಸಾಕುತ್ತಿದ್ದಾರೆ.. ಹೀಗೆ ಬೆಕ್ಕಿನ ಮೂಲಕ ತನ್ನ ಮುದ್ದು ತಂಗಿಯನ್ನು ನೋಡುತ್ತಿದ್ದಾರೆ ಉಪೇಂದ್ರ ಗೋಸ್ವಾಮಿ.

ಇದನ್ನೂ ಓದಿ:  ಅಫ್ಘಾನಿಸ್ತಾನದ ಸ್ಥಿತಿಗೆ ಮರುಗಿದ ಸೋನುಸೂದ್.. ಅವರಿಗೆ ನಮ್ಮ ನೆರವು ಬೇಕಿದೆ ಎಂದ ನಟ

ತನ್ನ ತಂಗಿಯ ನೆನಪಲ್ಲಿ 500 ಚದರ ಜಾಗದಲ್ಲಿ ಈ ಒಂದು ಕ್ಯಾಟ್ ಗಾರ್ಡನ್ ತೆರೆದಿದ್ದಾರೆ. ಈ ಬೆಕ್ಕಿನ ತೋಟವನ್ನು 2017ರಲ್ಲಿ ಸ್ಥಾಪಿಸಿದ್ದಾರೆ ಮಾಲೀಕರು. ಇದರೊಳಗೆ ಬೆಕ್ಕುಗಳಿಗಾಗೆ ಐಷಾರಾಮಿ ಜೀವನ ನಡೆಸುವ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟಿದ್ದಾರೆ. ಇಲ್ಲಿ ಬೆಕ್ಕುಗಳು ನಿದ್ರಿಸಲೆಂದೇ 4 ಎಸಿ ರೂಂಗಳಿವೇ.. 10 ಕಾಟೇಜ್ ಗಳಲ್ಲಿ ಮತ್ತು 12 ಹಾಸಿಗೆಗಳಲ್ಲಿ ಎಲ್ಲ ಬೆಕ್ಕುಗಳು ವಿಶ್ರಮಿಸುವ ವಿಶಾಲವಾದ ಜಾಗವಿದೆ. ಇನ್ನು ಬೆಕ್ಕುಗಳ ಸ್ನಾನಕ್ಕೆ ಬಿಸಿ ನೀರಿನ ಶವರ್, ಗಾರ್ಡನ್ ಏರಿಯಾದಲ್ಲಿ ಕೈಕಾಲು ಒಣಗಿಸಿಕೊಳ್ಳುವ ಸುಸಜ್ಜಿತ ಜಾಗ.

blank

ಹೀಗೆ ಎಲ್ಲೋ ಅಲ್ಲಿ.. ಇಲ್ಲಿ ಮೂಲೆಗಳಲ್ಲಿ ವಿರಮಿಸುತ್ತಿರುವ ಬೆಕ್ಕುಗಳು.. ಒಮ್ಮೆ ತನ್ನ ಕ್ಯಾಟ್ ಫುಡ್ ಬಿಸ್ಕೇಟ್ ಗಳನ್ನು ಕುಲುಕಿದರೇ ಸಾಕು… ಎಲ್ಲಿದ್ದರೂ ಆ ಜಾಗಕ್ಕೆ ಹಾರಿ ಬಂದು ಬಿಡ್ತಾವೆ.. ಅವು ತಿಂದಷ್ಟು ಆರೋಗ್ಯಕರ ಬಿಸ್ಕೆಟ್ ಗಳನ್ನು ಹಾಕುತ್ತಾರೆ ಮಾಲೀಕರು. ದಿನಕ್ಕೆ ಮೂರು ಬಾರಿ ಬ್ರಾಂಡ್ ಕ್ಯಾಟ್ ಫುಡ್ ಗಳನ್ನೆ ನೀಡುತ್ತಾರೆ. ಇದಕ್ಕಾಗಿ ಅಲ್ಲಿನ ಎಲ್ಲ ಬೆಕ್ಕುಗಳು ಆರೋಗ್ಯವಾಗಿ.. ಸಂತೋಷದಿಂದ ಇರುವುದು ಕಾಣಬಹುದು.

ಈ ಬೆಕ್ಕುಗಳ ಕೆಲಸ, ಕೇವಲ ಊಟ, ನಿದ್ರೆಯಲ್ಲ.. ಬದಲಿಗೆ ಈ ಕ್ಯಾಟ್ ಗಳಿಗೆ ಮನರಂಜನೆಯೂ ಸಹ ನೀಡಲಾಗುತ್ತೆ. ಪಾರ್ಕ್ ನಲ್ಲಿ ಆಟ ವಾಡೋದು ಬಿಟ್ಟು., ಈ ಬೆಕ್ಕುಗಳಿಗಾಗೇ ಮಿನಿ ಥಿಯೇಟರ್ ಒಂದನ್ನೂ ಸ್ಥಾಪಿಸಲಾಗಿದೆ.. ಹಾ..!!? ಬೆಕ್ಕುಗಳು ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡ್ತಾವಾ ? ಎಂದು ಆಶ್ಚರ್ಯ ಆಗುತ್ತೆ ಅಲ್ವಾ ? ಹೌದು.., ಇಲ್ಲಿ ಬೆಕ್ಕುಗಳೂ ಬೆಕ್ಕಿ ಹಾಗೂ ಇನ್ನಿತರೇ ಪ್ರಾಣಿಗಳಿಗೆ ಸಂಬಂಧಿತ ಸಿನಿಮಾಗಳನ್ನು ವೀಕ್ಷಿಸುತ್ತೆ.. ಆ ಥಿಯೇಟರ್ ಅಲ್ಲದೆ ಸುತ್ತಲೂ ಇರುವ ಟಿ ವಿಯಲ್ಲಿ ಯಾವಾಗಲೂ ಟಾಮ್ ಅ್ಯಂಡ್ ಜರ್ರಿ ಕಾರ್ಟೂನ್ ಚಾಲ್ತಿಯಲ್ಲಿರುತ್ತೆ. ಈ ಕಾರ್ಯಕ್ರಮವನ್ನು ಹಲವು ಬೆಕ್ಕುಗಳು ಕಣ್ಣು ಮಿಟುಕಿಸದೇ ನೋಡ್ತಾವೆ ಎಂದು ಮಾಲೀಕರು ಹೇಳ್ತಾರೆ.

blank

ಇಷ್ಟು ಸುಸಜ್ಜಿತವಾಗಿ.. ಕ್ಲೀನ್ ಆಗಿ.. ಕಾಣುವ ಬೆಕ್ಕಿನ ಮನೆಗೆ ಎಷ್ಟು ಹಣ ಖರ್ಚು ಮಾಡ್ತಾರೆ ಗೊತ್ತಾ ? ಈ ಬೆಕ್ಕುಗಳನ್ನು ಸಾಕಲು ಉಪೇಂದ್ರರವರಿಗೆ ತಿಂಗಳಿಗೆ ಬರೋಬರಿ ಒಂದುವರೆಯಿಂದ ಎರಡು ಲಕ್ಷದ ವರೆಗೂ ಖರ್ಚ್ ಆಗುತ್ತದೆಯಂತೆ. ಈ ಖರ್ಚನ್ನು ಯಾರ ಸಹಾಯವಿಲ್ಲದೆ ಉಪೇಂದ್ರ ಹಾಗೂ ಅವರ ಪತ್ನಿ ಇಷ್ಟು ದಿನದ ವರೆಗೂ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಇವರ ಸಮಾಜಮುಖಿ, ಪ್ರಾಣಿ ಸೇವೆಯನ್ನು ಮೆಚ್ಚಿ ಅಹಮದಾಬಾದ್ ನ ಜೀವದಯಾ ಟ್ರಸ್ಟ್ ಶೇಕಡ 10 ರಷ್ಟು ಖರ್ಚನ್ನು ತವು ಭರಿಸುವುದಾಗಿ ಹೇಳಿದ್ದಾರೆ. ಇನ್ನು ಪ್ರತಿ ಭಾನುವಾರ ಅಲ್ಲಿನ ಸಾರ್ವಜನಿಕರಿಗೆ ಬೆಕ್ಕಿನ ಮನೆ ಜೊತೆಗೆ ಅದರ ತುಂಟಾಟವನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೂ ಸಹ ಕನಿಷ್ಠ ಶುಲ್ಕವನ್ನು ದಂಪತಿ ಇಟ್ಟಿದ್ದಾರೆ.

ಒಟ್ಟಿನಲ್ಲಿ ಆ ಕ್ಯಾಟ್ ಗಾರ್ಡನ್ ನಲ್ಲಿ.., ಎಲ್ಲ ಬೆಕ್ಕುಗಳು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು, ಮಾಲೀಕರ ಪ್ರೀತಿ ಪಡೆದುಕೊಂಡು, ಐಷಾರಾಮಿ ಜೀವನ ಅನುಭವಿಸುತ್ತ ಸಂತೋಷದಿಂದ ಜೀವನ ನಡೆಸುತ್ತಿವೆ. ಇವರ ಈ ಸೇವೆಗೆ ಪ್ರಧಾನ ಮಂತ್ರಿಯವರಿಂದಲೂ ಸಹ ಅವಾರ್ಡ್ ಸಿಕ್ಕಿದೆ. ಮುಗ್ಧತೆಯನ್ನು ಮೈಗೇರಿಸಿಕೊಂಡು, ಅತ್ತಿಂದಿತ್ತ, ಇತ್ತಿಂದತ್ತ ಕ್ಯಾಟ್ ವಾಕ್ ಮಾಡಿಕೊಂಡು, ಪ್ರತಿ ಬೆಕ್ಕುಗಳು ತನ್ನ ಸಾಮ್ರಾಜ್ಯಕ್ಕೆ ತಾನೆ ಒಡೆಯ ಅನ್ನೋ ರೀತಿ ಆರಾಮಾಗಿದೆ. ಹಾ!! ಹೀಗಿದೆ ನೋಡಿ ಬೆಕ್ಕಿನ ಉದ್ಯಾನವನ.

ತಂಗಿ ನೆನೆಪಿನಲ್ಲಿ ಶುರುವಾದ ಸಮಾಜ ಸೇವೆ ಈಗ ದೇಶದ ಜನರ ಮನಸ್ಸು ಮುಟ್ಟಿದೆ. ಮುತ್ತಿನಂತ ಮನೆಯನ್ನು ಮುದ್ಧ ಮಾರ್ಜಾಲನಿಗೆ ಮೀಸಲಿಟ್ಟಿದ್ದಾರೆ ಮನೆಯ ಮಾಲೀಕರು. ಇವರ ಸೇವೆ ಹೀಗೆ ಮುಂದುವರೆಯಲಿ.. ಬೆಕ್ಕಿನ ಮೇಲಿನ ಪ್ರೀತಿ ಹೀಗೆ ಚಿರವಾಗಿರಲಿ.

 

Source: newsfirstlive.com Source link