ಮೈಸೂರು ದಸರಾಗೆ ಭರ್ಜರಿ ತಯಾರಿ.. ನಾಡ ಹಬ್ಬಕ್ಕೆ ಮೆರಗು ನೀಡಲು ಗಜಪಡೆ ರೆಡಿ

ಮೈಸೂರು ದಸರಾಗೆ ಭರ್ಜರಿ ತಯಾರಿ.. ನಾಡ ಹಬ್ಬಕ್ಕೆ ಮೆರಗು ನೀಡಲು ಗಜಪಡೆ ರೆಡಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಜಪಡೆ ಆಯ್ಕೆಯ ಕಸರತ್ತಿನಲ್ಲಿ ತೊಡಗಿದೆ. 4 ಆನೆ, ಕ್ಯಾಂಪ್‌ಗಳಿಗೆ ತೆರಳಿ 11 ಗಂಡಾನೆ, 3 ಹೆಣ್ಣಾನೆಯುಳ್ಳ ತಾತ್ಕಾಲಿಕ ಪಟ್ಟಿ ರೆಡಿಯಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಇಂದಿನಿಂದ ಆರಂಭಿಸಿದೆ. ಮೈಸೂರು ವನ್ಯಜೀವಿ ಭಾಗದ ಡಿಸಿಎಫ್ ಡಾ. ವಿ.ಕರಿಕಾಳನ್, ಪಶುವೈದ್ಯರಾದ ಡಾ.ರಮೇಶ್, ಡಾ.ಚಿಟ್ಟಿಯಪ್ಪ ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಮತ್ತಿಗೂಡು, ದೊಡ್ಡ ಹರವೆ, ಆನೆಕಾಡು, ದುಬಾರೆ ಕ್ಯಾಂಪ್‌ಗಳಿಗೆ ತೆರಳಿ ಆನೆಗಳನ್ನು ಪರಿಶೀಲಿಸಿದರು.

ಈ ವೇಳೆ ಅಭಿಮನ್ಯು, ಗೋಪಿ, ಗೋಪಾಲಕೃಷ್ಣ, ವಿಕ್ರಂ, ಧನಂಜಯ, ಪ್ರಶಾಂತ, ಹರ್ಷ, ಲಕ್ಷ್ಮಣ, ಕಾವೇರಿ, ವಿಜಯ ಸೇರಿದಂತೆ 11 ಗಂಡಾನೆ ಮತ್ತು 3 ಹೆಣ್ಣಾನೆಯುಳ್ಳ ತಾತ್ಕಾಲಿಕ ಪಟ್ಟಿಯನ್ನು ತಯಾರಿಸಲಾಗಿದೆ. 4 ಕ್ಯಾಂಪ್‌ಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯರಿಂದ ಆನೆಗಳ ಆರೋಗ್ಯ ಸ್ಥಿತಿ, ಮದ ಬಂದಿರುವ ಬಗ್ಗೆ, ವಯಸ್ಸು, ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ, ಕಳೆದ ಎರಡು ವರ್ಷದಿಂದ ಆನೆಗಳಿಗೆ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತೆ ಅನ್ನೋದ್ರ ವಿವರಗಳನ್ನ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರೊಂದಿಗೆ ಹೆಣ್ಣಾನೆಗಳು ಗರ್ಭ ಧರಿಸಿರುವ ಬಗ್ಗೆಯೂ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.

4 ಆನೆ ಶಿಬಿರಗಳಿಗೆ ತೆರಳಿ 14 ಆನೆಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಆನೆಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪಶುವೈದ್ಯರಿಗೆ ಆನೆಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ ಆನೆಗಳೊಂದಿಗೆ ಬರುವ ಮಾವುತರು ಮತ್ತು ಕಾವಾಡಿಗರು, ಸಹಾಯಕರಿಗೆ ಕೊರೊನಾ ಲಸಿಕೆ ನೀಡಿರುವುದನ್ನೂ ಸ್ಪಷ್ಟಪಡಿಸುವಂತೆ ತಿಳಿಸಲಾಗಿದೆ. ವರದಿ ಬಂದ ನಂತರ ಯಾವ ಆನೆಯನ್ನು ದಸರಾ ಮಹೋತ್ಸವಕ್ಕೆ ಬಳಸಿಕೊಳ್ಳಬಹುದು ಎಂದು ಪರಿಷ್ಕರಣ ಪಟ್ಟಿ ತಯಾರಿಸಲಾಗುತ್ತದೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

blank

ಇದುವರೆಗೂ ಯಾವುದೇ ದೇಶದಲ್ಲೂ ಆನೆಗಳಿಗೆ ಕೊರೊನಾ ಸೋಂಕು ತಗುಲಿರುವ ವರದಿ ಇಲ್ಲ. ಆದರೆ ಕೆಲವು ಮೃಗಾಲಯಗಳಲ್ಲಿ ಹುಲಿ ಮತ್ತು ಸಿಂಹಕ್ಕೆ ಸೋಂಕು ತಗುಲಿರುವ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ದಸರಾದಲ್ಲಿ ಪಾಲ್ಗೊಳ್ಳಲು ಕರೆತರುವ ಆನೆಗಳಿಗೆ ಯಾವುದೇ ರೀತಿಯ ಕೊರೊನಾ ಪರೀಕ್ಷೆ ಮಾಡಿಸುವುದಿಲ್ಲ. ಬದಲಾಗಿ ಆನೆಗಳೊಂದಿಗೆ ಬರುವ ಮಾವುತರು, ಕಾವಾಡಿಗಳು ಹಾಗೂ ಸಹಾಯಕರ ಆರೋಗ್ಯ ಕಾಪಾಡಲು ಹಾಗೂ ಆನೆಗಳ ಆರೋಗ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Source: newsfirstlive.com Source link